
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ H-1B ವೀಸಾ ಸಂಬಂಧಿಸಿದಂತೆ ಐದು ಪಟ್ಟು ಶುಲ್ಕ ಹೆಚ್ಚಳವನ್ನು ಘೋಷಿಸಿದ್ದಾರೆ. ಪರಿಷ್ಕೃತ ನಿಯಮಗಳ ಪ್ರಕಾರ, ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳುವ ಕಂಪನಿಗಳು ಪ್ರತಿ H-1B ಅರ್ಜಿಗೆ ಈಗಿನಿಂದಲೇ 1,00,000 ಡಾಲರ್‌ಗಳಷ್ಟು ಶುಲ್ಕ ಪಾವತಿಸಬೇಕಾಗಿದೆ. ಈ ಆಘಾತಕಾರಿ ನಿರ್ಧಾರದಿಂದ ಇಡೀ ತಂತ್ರಜ್ಞಾನ ಮತ್ತು ಐಟಿ ಉದ್ಯಮದಲ್ಲಿ ತೀವ್ರ ಚರ್ಚೆಗಳು, ಆತಂಕಗಳು ಎದ್ದಿವೆ. ಟ್ರಂಪ್ ಘೋಷಣೆಯ ನಂತರ, ಮೈಕ್ರೋಸಾಫ್ಟ್, ಅಮೆಜಾನ್, ಮೆಟಾ ಸೇರಿದಂತೆ ಅನೇಕ ತಂತ್ರಜ್ಞಾನ ದೈತ್ಯಗಳು ತಮ್ಮ ಭಾರತೀಯ ಉದ್ಯೋಗಿಗಳಿಗೆ ತ್ವರಿತ ಸೂಚನೆ ನೀಡಿದ್ದು, ಸೆಪ್ಟೆಂಬರ್ 21ರೊಳಗೆ ಅಮೆರಿಕಕ್ಕೆ ಮರಳಿ ಬನ್ನಿ ಎಂದು ಕರೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಭಾರತೀಯ ತಂತ್ರಜ್ಞರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಅವರು, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಈಗ ಭಾರತಕ್ಕೆ ಹಿಂತಿರುಗಿ ತಮ್ಮ ಜೀವನವನ್ನು ಪುನರ್ನಿರ್ಮಿಸಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಸಲಹೆ ನೀಡಿದ್ದಾರೆ.
ವೆಂಬು ಅವರು ಭಾರತದ ವಿಭಜನೆಯ ಸಮಯದ ಸಿಂಧಿ ಸಮುದಾಯದ ಕಥೆಗಳನ್ನು ಉಲ್ಲೇಖಿಸಿದ್ದಾರೆ. ಸಿಂಧಿಗಳು ತಮ್ಮ ಮನೆ-ಮನೆತನಗಳನ್ನು ಬಿಟ್ಟು ಬರುವ ಅನಿವಾರ್ಯತೆಯ ನಡುವೆ ಭಾರತದಲ್ಲಿ ಜೀವನವನ್ನು ಮರು ಪ್ರಾರಂಭಿಸಿದರು ಮತ್ತು ಯಶಸ್ಸನ್ನು ಕಂಡರು. ಅದೇ ರೀತಿಯಲ್ಲಿ, ನೀವು ಕೂಡ ಭಯದಿಂದ ಬದುಕಬೇಡಿ, ಧೈರ್ಯಶಾಲಿ ಹೆಜ್ಜೆ ಇಡಿ, 5 ವರ್ಷಗಳ ಕಷ್ಟವಾದರೂ ಅದು ನಿಮ್ಮನ್ನು ಬಲಪಡಿಸುತ್ತದೆ ಎಂದು ವೆಂಬು ಬರೆದುಕೊಂಡಿದ್ದಾರೆ.
ಶ್ರೀಧರ್ ವೆಂಬು ಸ್ವತಃ ಅಮೆರಿಕದಲ್ಲಿ ವೃತ್ತಿಜೀವನ ಆರಂಭಿಸಿ, ನಂತರ ಭಾರತಕ್ಕೆ ಮರಳಿ ಜೊಹೊವನ್ನು ಜಾಗತಿಕ SaaS ಶಕ್ತಿ ಕೇಂದ್ರವನ್ನಾಗಿ ಕಟ್ಟಿದರು. ಪ್ರಸ್ತುತ ವೀಸಾ ಪ್ರಕ್ಷುಬ್ಧತೆಯು ಅನೇಕ ಭಾರತೀಯ ತಂತ್ರಜ್ಞರಿಗೆ ಇದೇ ರೀತಿಯ ಹೊಸ ತಿರುವು ಬದುಕಲ್ಲಿ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ಹೋಲಿಕೆಯಲ್ಲಿ, ಇಂದಿನ ಭಾರತವು ತಂತ್ರಜ್ಞಾನ ಮತ್ತು ನವೋದ್ಯಮಕ್ಕೆ ಅಪಾರ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಆವಿಷ್ಕಾರ, ಡಿಜಿಟಲ್ ಆರ್ಥಿಕತೆ, ಬಂಡವಾಳ ಹೂಡಿಕೆ, ಮತ್ತು ಸಂಶೋಧನಾ ಕೇಂದ್ರಗಳ ವಿಸ್ತರಣೆಗಳು ವೇಗವಾಗಿ ನಡೆಯುತ್ತಿವೆ. ಈ ಜಿಗಿತವನ್ನು ತೆಗೆದುಕೊಳ್ಳಲು ಧೈರ್ಯವಿರುವವರು ಭವಿಷ್ಯದಲ್ಲಿ ಇದರ ಫಲವನ್ನು ಖಂಡಿತ ಪಡೆಯುತ್ತಾರೆ ಎಂದು ವೆಂಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2025ರ ಭಾರತವು ಮಹತ್ವಾಕಾಂಕ್ಷೆಯುಳ್ಳ ಪದವೀಧರರು ಮತ್ತು ತಂತ್ರಜ್ಞರಿಗೆ ಫಲವತ್ತಾದ ನೆಲವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿದೆ. ಹಿಂದೆ ಅಮೆರಿಕವನ್ನು ಮಾತ್ರ ಯಶಸ್ಸಿನ ಏಕೈಕ ಮಾರ್ಗವೆಂದು ಕಂಡಿದ್ದ ಯುವಕರು ಈಗ ಭಾರತದಲ್ಲಿ ಕೂಡ ಸಮಾನ ಅಥವಾ ಹೆಚ್ಚು ಅವಕಾಶಗಳನ್ನು ಕಾಣುವಂತಾಗಿದೆ.
ಒಟ್ಟಿನಲ್ಲಿ, ಅಮೆರಿಕದ H-1B ವೀಸಾ ಬದಲಾವಣೆ ಭಾರತೀಯರಿಗೆ ಆಘಾತಕಾರಿ ಬೆಳವಣಿಗೆ ಎನಿಸಿದರೂ, ಇದು ಭಾರತಕ್ಕೆ ಬೃಹತ್ ಪ್ರತಿಭಾ ಸಂಪತ್ತಿನ ಮರಳುವ ಅವಕಾಶವನ್ನು ನೀಡಬಹುದು.
ಅಮೆರಿಕ ಸರ್ಕಾರವು ಕೌಶಲ್ಯಪೂರ್ಣ ತಂತ್ರಜ್ಞಾನ ನೌಕರರಿಗೆ ವೀಸಾಗಳ ಮೇಲಿನ ಹೊಸ 100,000 ಡಾಲರ್ ಶುಲ್ಕವು ಹೊಸ ಅರ್ಜಿದಾರರಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಪ್ರಸ್ತುತ ವೀಸಾ ಹೊಂದಿರುವವರಿಗೆ ಅಲ್ಲ ಎಂದು ಸ್ಪಷ್ಟಪಡಿಸಲು ಪರದಾಡಿತು. ಈಗಾಗಲೇ H-1B ವೀಸಾಗಳನ್ನು ಹೊಂದಿರುವವರು ಮತ್ತು ಪ್ರಸ್ತುತ ದೇಶದ ಹೊರಗೆ ಇರುವವರಿಗೆ ಮರು-ಪ್ರವೇಶಿಸಲು 100,000 ಡಾಲರ್ ಶುಲ್ಕ ಇರುವುದಿಲ್ಲ ಹೊಸ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿಕೆ ಬಿಡುಗಡೆ ಮಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ