88 ಲಕ್ಷ ರು. ಶುಲ್ಕ : ಹಳೆಯ ಎಚ್‌1ಬಿ ವೀಸಾದಾರರು ನಿರಾಳ

Kannadaprabha News   | Kannada Prabha
Published : Sep 22, 2025, 04:27 AM IST
H1b visa

ಸಾರಾಂಶ

ಎಚ್1ಬಿ ವೀಸಾ ಶುಲ್ಕವನ್ನು 88 ಲಕ್ಷ ರು.ಗೆ ಏರಿಸಿದ್ದು ಹೊಸ ವೀಸಾ ಅರ್ಜಿದಾರರಿಗೆ ಮಾತ್ರ ಅನ್ವಯವಾಗುತ್ತದೆ. ಅದು ಒಂದು ಬಾರಿಯ ಶುಲ್ಕವೇ ವಿನಾ ವಾರ್ಷಿಕ ಶುಲ್ಕವಲ್ಲ. ಹಳೆಯ ವೀಸಾದಾರರಿಗೆ ಅನ್ವಯ ಆಗಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಹೀಗಾಗಿ ಆತಂಕದಲ್ಲಿದ್ದ ಹಳೆಯ ವೀಸಾದಾರರು ನಿರಾಳರಾಗಿದ್ದಾರೆ.

ವಾಷಿಂಗ್ಟನ್‌ : ಎಚ್1ಬಿ ವೀಸಾ ಶುಲ್ಕವನ್ನು 88 ಲಕ್ಷ ರು.ಗೆ ಏರಿಸಿದ್ದು ಹೊಸ ವೀಸಾ ಅರ್ಜಿದಾರರಿಗೆ ಮಾತ್ರ ಅನ್ವಯವಾಗುತ್ತದೆ. ಅದು ಒಂದು ಬಾರಿಯ ಶುಲ್ಕವೇ ವಿನಾ ವಾರ್ಷಿಕ ಶುಲ್ಕವಲ್ಲ. ಹಳೆಯ ವೀಸಾದಾರರಿಗೆ ಅನ್ವಯ ಆಗಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಹೀಗಾಗಿ ಆತಂಕದಲ್ಲಿದ್ದ ಹಳೆಯ ವೀಸಾದಾರರು ನಿರಾಳರಾಗಿದ್ದಾರೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಮಾತನಾಡಿ, ‘ಅಧ್ಯಕ್ಷ ಟ್ರಂಪ್ ಘೋಷಿಸಿದ $100,000 (88 ಲಕ್ಷ ರು.) ಶುಲ್ಕವು ಒಂದು ಬಾರಿ ಶುಲ್ಕವಾಗಿದ್ದು, ಇದು ಹೊಸ ಎಚ್‌-1ಬಿ ವೀಸಾ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಪ್ರತಿ ವರ್ಷವೂ ಮರುಕಳಿಸುವುದಿಲ್ಲ. ಅಸ್ತಿತ್ವದಲ್ಲಿರುವ ವೀಸಾಗಳನ್ನು ನವೀಕರಿಸುವುದಕ್ಕೂ ಇದು ಅನ್ವಯವಾಗಲ್ಲ’ ಎಂದರು.ಅಲ್ಲದೆ, ‘ಮುಂದಿನ ಸಲದಿಂದ ಎಚ್‌1ಬಿ ವೀಸಾ ವಿತರಣೆ ಆವರ್ತನೆ ಆರಂಭವಾದಾಗಿನಿಂದ ಹೊಸ ಶುಲ್ಕ ಅನ್ವಯವಾಗುತ್ತದೆ’ ಎಂದೂ ಅವರು ಹೇಳಿದರು.

‘ಅಸ್ತಿತ್ವದಲ್ಲಿರುವ ಎಚ್‌1ಬಿ ವೀಸಾ ಹೊಂದಿರುವವರ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಈಗಾಗಲೇ ಎಚ್‌-1B ವೀಸಾಗಳನ್ನು ಹೊಂದಿರುವ ಮತ್ತು ಪ್ರಸ್ತುತ ಅಮೆರಿಕದಿಂದ ಹೊರಗಿರುವ ವ್ಯಕ್ತಿಗಳು ದೇಶಕ್ಕೆ ಮತ್ತೆ ಪ್ರವೇಶಿಸಲು 88 ಲಕ್ಷ ರು. ಶುಲ್ಕವನ್ನು ಪಾವತಿಸಬೇಕಾಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಎಚ್‌-1ಬಿ ವೀಸಾ ಹೊಂದಿರುವವರು ಅಮೆರಿಕವನ್ನು ತೊರೆಯುವ ಮತ್ತು ಮತ್ತೆ ಪ್ರವೇಶಿಸುವ ಹಕ್ಕು ಉಳಿಸಿಕೊಳ್ಳುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಲೀವಿಟ್‌ ಗೊಂದಲಗಳಿಗೆ ತೆರೆ ಎಳೆದರು.

ಬೇಕೆಂದೇ ವಿಮಾನ ಸೀಟು ಬ್ಲಾಕ್ ಮಾಡಿ ಕಿರಿಕ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್‌-1ಬಿ ವೀಸಾ ಶುಲ್ಕದಲ್ಲಿ ಏರಿಕೆ ಘೋಷಿಸಿದ ಬಳಿಕ ಭಾರತದಿಂದ ಅಮೆರಿಕಕ್ಕೆ ತೆರಳಲು ಉದ್ಯೋಗಿಗಳು ತರಾತುರಿಯಲ್ಲಿರುವಾಗಲೇ, ಅಮೆರಿಕದ ‘4ಚಾನ್‌’ ಎಂಬ ಆನ್ಲೈನ್‌ ವೇದಿಕೆಯ ಕೆಲವು ಬಳಕೆದಾರರು ಭಾರತೀಯರಿಗೆ ವಿಮಾನ ಟಿಕೆಟ್‌ ಬುಕ್ ಮಾಡಲು ಅಡ್ಡಿಯಾಗಲು ಪ್ರಯತ್ನಿಸಿದ ಘಟನೆ ನಡೆದಿದೆ.ಸೆ.20ರಂದು ‘ಆಪರೇಷನ್ ಕ್ಲಾಗ್ ದಿ ಟಾಯ್ಲೆಟ್’ ಹೆಸರಿನಲ್ಲಿ ಅಭಿಯಾನ ಆರಂಭಿಸಿದ 4ಚಾನ್‌ ಬಳಕೆದಾರರು ವಿಮಾನ ಟಿಕೆಟ್ ಬುಕಿಂಗ್ ಸೈಟ್‌ಗಳಲ್ಲಿ ಟಿಕೆಟ್‌ಗಳನ್ನು 15 ನಿಮಿಷಗಳ ಕಾಲ ತಾತ್ಕಾಲಿಕವಾಗಿ ಬುಕ್ ಮಾಡಿ, ನಂತರ ಖರೀದಿಸದೆ ಬಿಟ್ಟಿದ್ದಾರೆ. ಮುಂಬೈ-ಸ್ಯಾನ್ ಫ್ರಾನ್ಸಿಸ್ಕೋ, ದೆಹಲಿ-ನೆವಾರ್ಕ್‌ನಂತಹ ಜನಪ್ರಿಯ ಮಾರ್ಗಗಳನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಕೆಲವರು ಒಂದು ಸಲಕ್ಕೆ 100 ಟಿಕೆಟ್‌ಗಳನ್ನು ಸಹ ಬ್ಲಾಕ್‌ ಮಾಡಿದ್ದಾರೆ. ಇದರಿಂದ ಟಿಕೆಟ್‌ಗಳು ‘ಬ್ಲಾಕ್‌’ ಆಗಿರುವುದಾಗಿ ತೋರಿಸಿದ್ದು, ಸಹಜವಾಗಿಯೇ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಕೆಲವು ವಿಮಾನ ಸಂಸ್ಥೆಗಳ ವೆಬ್‌ಸೈಟ್‌ಗಳು ನಿಧಾನವಾಗಿ, ಗ್ರಾಹಕರು ಪರದಾಡುವಂತಾಯಿತು.4ಚಾನ್‌ ಎಂಬುದು ಆನ್‌ಲೈನ್ ಚರ್ಚಾ ವೇದಿಕೆಯಾಗಿದ್ದು, ಬಳಕೆದಾರರು ತಮ್ಮ ಗುರುತನ್ನು ಬಹಿರಂಗಪಡಿಸದೆ ಅನಾಮಧೇಯವಾಗಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಬಹುದು, ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳಬಹುದು. ಭಾರತೀಯರ ವಿರುದ್ಧ ಜನಾಂಗೀಯ ದ್ವೇಷದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಎಚ್‌1ಬಿ ವೀಸಾದಿಂದ ಅಮೆರಿಕ ನೌಕರರಿಗೇ ಅನ್ಯಾಯ: ಶ್ವೇತಭವನ

ವಾಷಿಂಗ್ಟನ್: ಹೊಸ ಎಚ್‌1ಬಿ ವೀಸಾಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ 88 ಲಕ್ಷ ರು. ಶುಲ್ಕ ವಿಧಿಸಿದ್ದನ್ನು ಶ್ವೇತಭವನ ಸಮರ್ಥಿಸಿದೆ. ‘ಕಂಪನಿಗಳು ಎಚ್‌1ಬಿ ವೀಸಾ ಪಡೆದ ವಿದೇಶಿ ನೌಕರರನ್ನು ಹೆಚ್ಚು ನೇಮಿಸಿಕೊಳ್ಳುತ್ತಿವೆ ಮತ್ತು ಸಾವಿರಾರು ಅಮೆರಿಕನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ. 2003ರಲ್ಲಿ ಶೇ.32 ಇದ್ದ ಎಚ್‌1ಬಿ ನೌಕರರ ಪ್ರಮಾಣ ಈಗ ಶೇ.65ಕ್ಕೇರಿದೆ. ಹೀಗಾಗಿ ವೀಸಾ ಶುಲ್ಕ ಹೆಚ್ಚಳ ಅನಿವಾರ್ಯವಾಗಿತ್ತು’ ಎಂದು ಅದು ಹೇಳಿದೆ.‘ಅಮೆರಿಕದ ಕಂಪನಿಯೊಂದು 2025ರ ವಿತ್ತ ವರ್ಷದಲ್ಲಿ 5,189 ಎಚ್1ಬಿ ಉದ್ಯೋಗಿಗಳನ್ನು ನೇಮಿಸಿಕೊಂಡು 16,000 ಅಮೇರಿಕನ್ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇನ್ನೊಂದು ಕಂಪನಿ 1,698ಎಚ್1ಬಿ ನೌಕರರನ್ನು ನೇಮಿಸಿ 2,400 ಅಮೆರಿಕ ಕಾರ್ಮಿಕರನ್ನು ವಜಾ ಮಾಡಿತು’ ಎಂದಿದೆ.

‘3ನೇ ಕಂಪನಿಯು 2022ರಿಂದ ತನ್ನ ಅಮೆರಿಕ ಉದ್ಯೋಗಿಗಳನ್ನು 27,000 ರಷ್ಟು ಕಡಿಮೆ ಮಾಡಿದೆ ಮತ್ತು 25,075 ಎಚ್1ಬಿ ನೌಕರರನ್ನು ನೇಮಿಸಿಕೊಂಡಿದೆ. 4ನೇ ಕಂಪನಿ 2025ರಲ್ಲಿ 1,137 ಎಚ್1ಬಿ ಅನುಮೋದನೆ ಪಡೆದಿ 1,000 ಅಮೆರಿಕನ್ ಉದ್ಯೋಗಗಳನ್ನು ಕಡಿತ ಮಾಡಿತು’ ಎಂದು ಶ್ವೇತಭವನ ‘ಫ್ಯಾಕ್ಟ್‌ಶೀಟ್‌’ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ