
ವಿಶ್ವದ ನಂಬರ್ ಒನ್ ಶ್ರೀಮಂತ, ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸಾಹಸಿ ಎಲೋನ್ ಮಸ್ಕ್ ಇದೀಗ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ತಮ್ಮ ಸಂಪತ್ತಿನಿಂದಲ್ಲ, ಬದಲಾಗಿ ಅವರು ಹಂಚಿಕೊಂಡಿರುವ ಒಂದು ಭಾವನಾತ್ಮಕ ಪೋಸ್ಟ್‌ನಿಂದ. ಇತ್ತೀಚೆಗಷ್ಟೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿಗೆ 800 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ತಲುಪಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬೆನ್ನಲ್ಲೇ, ಮಸ್ಕ್ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ, 'ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ. ಅವರ ಈ ಮಾತುಗಳು ಇಡೀ ಇಂಟರ್ನೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿವೆ.
ಅಪಾರ ಸಂಪತ್ತು ಸಂಗ್ರಹಿಸಿದ ನಂತರವೂ ಮಸ್ಕ್ ಅವರ ಈ ಪೋಸ್ಟ್ ಒಂದು ರೀತಿಯ ವೈರಾಗ್ಯವನ್ನು ಬಿಂಬಿಸುವಂತಿದೆ. 'ಹಣದಿಂದ ಸಂತೋಷ ಸಿಗಲ್ಲ ಎಂದು ಯಾರು ಹೇಳುತ್ತಾರೋ, ಅವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬುದು ನಿಖರವಾಗಿ ತಿಳಿದಿರುತ್ತದೆ' ಎಂದು ಮಸ್ಕ್ ಮಾರ್ಮಿಕವಾಗಿ ನುಡಿದಿದ್ದಾರೆ. ಪೋಸ್ಟ್‌ನ ಕೊನೆಯಲ್ಲಿ ಅವರು ಹಾಕಿರುವ 'ದುಃಖದ ಮುಖದ ಎಮೋಜಿ' ಅತಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ ವ್ಯಕ್ತಿಯ ಒಳಗೂ ಯಾವುದೋ ಒಂದು ಅತೃಪ್ತಿ ಕಾಡುತ್ತಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಮಸ್ಕ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಒಬ್ಬ ಬಳಕೆದಾರರು, ಹಣವೇ ಅಂತಿಮವಲ್ಲದಿರಬಹುದು, ಆದರೆ ಹಣದ ಕೊರತೆ ಮನುಷ್ಯನನ್ನ ಹಿಂಸಿಸುತ್ತದೆ. ಬಿಲ್‌ಗಳ ಹೊರೆ ಮತ್ತು ಬದುಕುಳಿಯುವಿಕೆಯ ಚಿಂತೆ ಇಲ್ಲದಿದ್ದಾಗ ಸಿಗುವ ಶಾಂತಿಯೇ ಬೇರೆ' ಎಂದು ಕಟು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. ಮತ್ತೊಬ್ಬರು, ಹಣದಿಂದ ಹಾಸಿಗೆ ಕೊಳ್ಳಬಹುದು ಆದರೆ ನಿದ್ದೆಯನ್ನಲ್ಲ, ಆಹಾರ ಕೊಳ್ಳಬಹುದು ಆದರೆ ಹಸಿವನ್ನಲ್ಲ' ಎಂದು ಮಸ್ಕ್ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಆಧ್ಯಾತ್ಮಿಕ ಮತ್ತು ಮಾನಸಿಕ ಚಿಂತನೆಗಳಲ್ಲಿ ತೊಡಗಿರುವಂತೆ ಕಂಡರೂ, ಮಸ್ಕ್ ತಮ್ಮ ವ್ಯಾಪಾರೀ ಹಸಿವನ್ನು ಮಾತ್ರ ಕಡಿಮೆ ಮಾಡಿಕೊಂಡಿಲ್ಲ. ಅವರ ಮುಂದಿನ ದೊಡ್ಡ ಹೆಜ್ಜೆ ಈಗ ಬಾಹ್ಯಾಕಾಶದತ್ತ ಚಾಚಿದೆ. ತಮ್ಮ ಏರೋಸ್ಪೇಸ್ ಕಂಪನಿ SpaceX ಮತ್ತು ಕೃತಕ ಬುದ್ಧಿಮತ್ತೆಯ xAI ಅನ್ನು ವಿಲೀನಗೊಳಿಸುವ ಮೂಲಕ $1.25 ಟ್ರಿಲಿಯನ್ ಮೌಲ್ಯದ ದೈತ್ಯ ಕಂಪನಿಯನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಭೂಮಿಯ ಮೇಲಿನ ಇಂಧನ ಸಂಪನ್ಮೂಲಗಳಿಗೆ ಧಕ್ಕೆ ತರದಂತೆ, ಸೌರಶಕ್ತಿ ಚಾಲಿತ ಒಂದು ಮಿಲಿಯನ್ ಉಪಗ್ರಹಗಳ ಮೂಲಕ ಬಾಹ್ಯಾಕಾಶದಲ್ಲೇ 'ಡೇಟಾ ಸೆಂಟರ್' ನಿರ್ಮಿಸುವುದು ಮಸ್ಕ್ ಅವರ ಮುಂದಿನ ಬಿಲಿಯನ್ ಡಾಲರ್ ಕನಸು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ