ಕಾಡ್ಗಿಚ್ಚಿನಿಂದ ವಿಶ್ವದ ಬೃಹತ್‌ ಮರ ರಕ್ಷಿಸಲು ಮರಕ್ಕೆ ಹೊದಿಕೆ!

By Suvarna NewsFirst Published Sep 19, 2021, 8:08 AM IST
Highlights

* ಕ್ಯಾಲಿಫೋರ್ನಿಯಾ ಕಾಡು ಉಳಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

* ಕಾಡ್ಗಿಚ್ಚಿನಿಂದ ವಿಶ್ವದ ಬೃಹತ್‌ ಮರ ರಕ್ಷಿಸಲು ಬುಡಕ್ಕೆ ಹೊದಿಕೆ

* ಹಲವಾರು ಮರಗಳಿಗೆ ಹೊದಿಕೆ ಹೊದಿಸಿ ರಕ್ಷಿಸಲು ಭಾರಿ ಪ್ರಯತ್ನ

ಸಾಕ್ರಾಮೆಂಟೋ(ಸೆ.19): ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬೃಹತ್‌ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ವಿಶ್ವದ ಅತ್ಯಂತ ಬೃಹತ್ತಾದ ಮರ ಎಂಬ ದಾಖಲೆ ಹೊಂದಿರುವ 275 ಅಡಿ ಎತ್ತರದ ‘ಜನರಲ್‌ ಶೆರ್ಮನ್‌’ ದಹನವಾಗುವ ಭೀತಿ ಎದುರಾಗಿದೆ. ಪ್ರಸಿದ್ಧ ಸಿಕ್ವೊಯಾ ನ್ಯಾಷನಲ್‌ ಪಾರ್ಕಿನಲ್ಲಿರುವ ಈ ಮರ ಹಾಗೂ ಉಳಿದ ಬೃಹತ್‌ ಮರಗಳನ್ನು ರಕ್ಷಿಸುವ ಉದ್ದೇಶದಿಂದ ಅರಣ್ಯ ಸಿಬ್ಬಂದಿ ಮರಗಳ ಬುಡಗಳಿಗೆ ‘ಅಗ್ನಿನಿರೋಧಕ ಅಲ್ಯೂಮಿನಿಯಂ ಹೊದಿಕೆ’ಗಳನ್ನು ಅಳವಡಿಸುತ್ತಿದ್ದಾರೆ.

ಸಾಮಾನ್ಯವಾಗಿ ಕಾಡ್ಗಿಚ್ಚು ಕಾಣಿಸಿಕೊಂಡರೆ ಅದನ್ನು ನಂದಿಸಲು ಹೆಲಿಕಾಪ್ಟರ್‌ ಮೂಲಕ ನೀರು ಸಿಂಪಡಣೆ ಕಾರ್ಯ ನಡೆಯುತ್ತದೆ. ಆದರೆ ಏನೇ ಕಸರತ್ತು ನಡೆಸಿದರೂ ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು ಮಾತ್ರ ನಿಯಂತ್ರಣಕ್ಕೇ ಬರುತ್ತಿಲ್ಲ. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ ಮರಗಳ ಬುಡಕ್ಕೆ ಹೊದಿಕೆ ಹೊದಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಇದೇ ಹೊದಿಕೆಯನ್ನು ಸಿಕ್ವೊಯಾ ನ್ಯಾಷನಲ್‌ ಪಾರ್ಕ್ನ ನಾಮಫಲಕಕ್ಕೂ ಹೊದಿಸಲಾಗುತ್ತಿದೆ. ಮತ್ತೊಂದೆಡೆ, ಬೆಂಕಿ ಸಿಕ್ವೊಯಾ ಪಾರ್ಕ್ನಲ್ಲಿ ಅನಾಹುತ ಸೃಷ್ಟಿಸುವುದನ್ನು ತಪ್ಪಿಸಲು ಎಲೆಗಳನ್ನು ಮೊದಲೇ ಸುಟ್ಟು ಹಾಕಲಾಗುತ್ತಿದೆ.

ಕ್ಯಾಲಿಫೋರ್ನಿಯಾದ ಕೆಎನ್‌ಪಿ ಕಾಂಪ್ಲೆಕ್ಸ್‌ನಲ್ಲಿ ಸಿಡಿಲಿನಿಂದಾಗಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಈಗಾಗಲೇ 11365 ಎಕರೆ ಪ್ರದೇಶವನ್ನು ಭಸ್ಮ ಮಾಡಿದೆ. ಇದನ್ನು ಏನೂ ಮಾಡಿದರೂ ನಿಯಂತ್ರಿಸಲಾಗುತ್ತಿಲ್ಲ. ಇದು ಕ್ಯಾಲಿಫೋರ್ನಿಯಾ ಕಂಡ ಎರಡನೇ ಅತಿದೊಡ್ಡ ಕಾಡ್ಗಿಚ್ಚು ಆಗಿದೆ. ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ವಾತಾವರಣ ಬಿಸಿಯಾಗಿರುವ ಕಾರಣ ಕಾಡ್ಗಿಚ್ಚು ಹಿಂದೆಂದಿಗಿಂತ ವೇಗವಾಗಿ ಪಸರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

click me!