
ಜಿನೆವಾ(ಜು.04): ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪತ್ತೆಯಾದ ಡೆಲ್ಟಾರೂಪಾಂತರಿ ತಳಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗಂಭೀರ ಎಚ್ಚರಿಕೆ ನೀಡಿದ್ದು, ಜಗತ್ತು ಕೊರೋನಾದ ಹೊಸ ರೂಪಾಂತರಿಗಳಿಂದಾಗಿ ಈಗ ಅತ್ಯಂತ ಅಪಾಯಕಾರಿ ಘಟ್ಟದಲ್ಲಿದೆ ಎಂದು ಹೇಳಿದೆ. ಡೆಲ್ಟಾವೈರಸ್ ದಿನೇದಿನೇ ಬದಲಾಗುತ್ತಾ ರೂಪಾಂತರ ಹೊಂದುತ್ತಿದೆ. ಕಡಿಮೆ ಲಸಿಕೆ ನೀಡಿದ ದೇಶಗಳಲ್ಲಿ ಈ ಹಿಂದಿನಂತೆ ಆಸ್ಪತ್ರೆಗಳು ತುಂಬಿ ತುಳುಕುವಂತಹ ಭಯಾನಕ ದೃಶ್ಯಗಳು ಕಾಣಿಸುವುದು ಮತ್ತೆ ಸಾಮಾನ್ಯವಾಗುತ್ತಿದೆ ಎಂದೂ ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯೇಸಸ್ ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಡೆಲ್ಟಾರೂಪಾಂತರಿ ತಳಿಯ ಹೊಡೆತದಿಂದ ಇನ್ನೂ ಯಾವುದೇ ದೇಶ ಹೊರಬಂದಿಲ್ಲ. ಈ ತಳಿ 98 ದೇಶಗಳಲ್ಲಿ ಶರವೇಗದಲ್ಲಿ ಹರಡುತ್ತಿದೆ. ಇನ್ನೂ ಬದಲಾಗುತ್ತಾ, ರೂಪಾಂತರ ಹೊಂದುತ್ತಾ ಹೋಗುತ್ತಿದೆ. ಲಸಿಕೆ ಕಡಿಮೆ ನೀಡಿದ ದೇಶಗಳಲ್ಲಿ ಈ ಹಿಂದಿನಂತೆ ಆಸ್ಪತ್ರೆಗಳಿಂದ ಭಯಾನಕ ದೃಶ್ಯಗಳು ಬರಲಿವೆ. ಹೀಗಾಗಿ ದೇಶಗಳು ಸೋಂಕು ಪತ್ತೆ, ಸಂಪರ್ಕ ಪತ್ತೆ, ಐಸೋಲೇಶನ್ ಹಾಗೂ ಚಿಕಿತ್ಸೆಯನ್ನು ತೀವ್ರಗೊಳಿಸಬೇಕು. ಮಾಸ್ಕ್, ಸಾಮಾಜಿಕ ಅಂತರ ಮುಂದುವರೆಸಬೇಕು’ ಎಂದು ಹೇಳಿದರು.
ಸುರಕ್ಷತಾ ಕ್ರಮಗಳಾದ ಆಕ್ಸಿಜನ್, ರಕ್ಷಣಾ ಸಲಕರಣೆಗಳು, ಪರೀಕ್ಷೆಯ ವಿಧಾನ, ಚಿಕಿತ್ಸೆಯ ಮಾಹಿತಿ ಹಾಗೂ ಲಸಿಕೆಯನ್ನು ಜಗತ್ತು ಹಂಚಿಕೊಳ್ಳುವ ಮೂಲಕ ಒಗ್ಗಟ್ಟಿನಿಂದ ಹೋರಾಡಬೇಕು. ಬಯೋಎನ್‌ಟೆಕ್, ಫೈಜರ್, ಮಾಡೆರ್ನಾ ಮುಂತಾದ ಲಸಿಕಾ ಕಂಪನಿಗಳು ತಮ್ಮ ಸೂತ್ರ ಮತ್ತು ತಂತ್ರಜ್ಞಾನವನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಎಲ್ಲ ದೇಶಗಳೂ ಕನಿಷ್ಠ ಮುಂದಿನ ವರ್ಷದ ಈ ವೇಳೆಗಾದರೂ ಶೇ.70ರಷ್ಟುಜನರಿಗೆ ಲಸಿಕೆ ನೀಡಿರಬೇಕು. ಅದೊಂದೇ ಈ ಸಾಂಕ್ರಾಮಿಕವನ್ನು ನಿಧಾನಗೊಳಿಸಲು ಇರುವ ದಾರಿ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ