ಫೋನ್ ಮುಟ್ಟಂಗಿಲ್ಲ, ಕೊರಗುವಂತಿಲ್ಲ; ಸ್ಪರ್ಧೆ ಗೆದ್ದರೆ 1 ಲಕ್ಷ ರೂಪಾಯಿ ಬಹುಮಾನ!

By Chethan Kumar  |  First Published Dec 9, 2024, 10:42 AM IST

ಫೋನ್ ಇಲ್ಲದೆ ಒಂದು ಕ್ಷಣ ಇರಲಾರದ ಪರಿಸ್ಥಿತಿ ಬಂದೊದಗಿದೆ. ಇದರ ನಡುವ ಫೋನ್ ಇಲ್ಲದೆ ಒಂದು ದಿನ ಕಳೆಯುವ ಅಂದರೆ 8 ಗಂಟೆ ಕಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆ ನಡುವೆ ಫೋನ್ ಇಲ್ಲದ ಕೊರಗು, ಹತಾಶೆ ವ್ಯಕ್ತವಾಗಬಾರದು ಸೇರಿದಂತೆ ಹಲವು ನಿಬಂಧನೆಗಳನ್ನು ಹಾಕಲಾಗಿತ್ತು 100 ಮಂದಿ ಪೈಕಿ ಒರ್ವ ಮಹಿಳೆ 1 ಲಕ್ಷ ರೂಪಾಯಿ ಬಹುಮಾನ ಗೆದ್ದುಕೊಂಡಿದ್ದಾರೆ. 


ಬೀಜಿಂಗ್(ಡಿ.09) ಫೋನ್ ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಿದೆ. ಮನೆ, ಕಚೇರಿ, ಪ್ರಯಾಣ, ವಿರಾಮ, ವಿಶ್ರಾಂತಿ ಹೀಗೆ ಯಾವುದೇ ಸಮಯದಲ್ಲೂ ಫೋನ್ ಕೈಯಲ್ಲಿರುತ್ತೆ. ಜೊತೆಗೆ ಸೋಶಿಯಲ್ ಮೀಡಿಯಾ, ವಿಡಿಯೋ, ಗೇಮಿಂಗ್ ಸೇರಿದಂತೆ ಹಲವು ಚಟುವಟಿಕೆಯಲ್ಲಿ ಸದಾ ಬ್ಯೂಸಿಯಾಗಿರುತ್ತಾರೆ. ಅಷ್ಟರಮಟ್ಟಿಗೆ ಫೋನ್‌ಗೆ ಅವಲಂಬಿತರಾಗಿದ್ದೇವೆ. ಇದರ ನಡುವೆ 8 ಗಂಟೆ ಫೋನ್ ಮುಟ್ಟದೆ ಕಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಫೋನ್ ಮುಟ್ಟಂಗಿಲ್ಲ ಮಾತ್ರವಲ್ಲ, ಫೋನ್ ಇಲ್ಲದ ಹತಾಶೆ, ಆಕ್ರೋಶ, ಕೊರಗು ಕೂಡ ಮುಖದಲ್ಲಿ, ಹಾವಭಾವದಲ್ಲಿ ವ್ಯಕ್ತವಾಗಬಾರದು. 8 ಗಂಟೆ ಸಮಯವನ್ನು ಒಂದೇ ಬೆಡ್‌ನಲ್ಲಿ ಕಳೆಯಬೇಕು. ಈ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು 1 ಲಕ್ಷ ರೂಪಾಯಿ ಬಹುಮಾನ ಗೆದ್ದುಕೊಂಡಿದ್ದಾರೆ.

ಮತ್ತೆ ಈ ಸ್ಪರ್ಧೆ ನಡೆದರೆ ಪಾಲ್ಗೊಳ್ಳುವ ಯೋಚನೆ ಇದ್ದರೆ ಪಾಸ್‌ಪೋರ್ಟ್ ವೀಸಾ ರೆಡಿ ಮಾಡಿ ಇಟ್ಟುಕೊಂಡಿರಿ. ಕಾರಣ ಈ ಸ್ಪರ್ಧೆ ನಡೆದಿರುವುದು ಚೀನಾದಲ್ಲಿ. ಸೌತ್‌ವೆಸ್ಟರ್ನ್ ಚೀನಾದ ಚಾಂಗ್‌ಕ್ವಿಂಗ್ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿರುವ ಖ್ಯಾತ ಶಾಪಿಂಗ್ ಮಾಲ್‌ನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. 100 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿ ಈ ಪೈಕಿ 10 ಸ್ಪರ್ಧಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. 

Tap to resize

Latest Videos

ಇನ್ನು 5 ತಿಂಗಳಲ್ಲಿ ಈ ಐಫೋನ್‌ಗಳಲ್ಲಿ ವ್ಯಾಟ್ಸಾಪ್ ವರ್ಕ್ ಆಗಲ್ಲ, ನಿಮ್ಮ ಫೋನ್ ಇದೆಯಾ?

ಶಾಪಿಂಗ್‌ ಮಾಲ್‌ನಲ್ಲಿ ಬಿಗ್ ಬಾಸ್ ರೀತಿ ಒಂದು ಕೋಣೆ ರೆಡಿ ಮಾಡಲಾಗಿತ್ತು. ಈ ಕೋಣೆ ಪ್ರವೇಶಿಸುವ ಮುನ್ನ ಸ್ಪರ್ಧಿಗಳು ತಮ್ಮ ಫೋನ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್ ಆಯೋಜಕರಿಗೆ ಒಪ್ಪಿಸಬೇಕಿತ್ತು. ಸ್ಪರ್ಧಿಗಳಿಗೆ ಒಂದೊಂದು ಬೆಡ್ ನೀಡಲಾಗಿತ್ತು. ಈ ಬೆಡ್ ಮೇಲೆ ಕುಳಿತುಕೊಳ್ಳಬೇಕು. ಸ್ಪರ್ಧಿಗಳು ನಿದ್ರಿಸುವಂತಿಲ್ಲ. ಊಟ, ತಿಂಡಿ ನೀಡಲಾಗಿತ್ತು. ಇದೇ ಬೆಡ್ ಮೇಲೆ ಸ್ಪರ್ಧಿಗಳು ಆಹಾರ ಸೇವಿಸಬೇಕು. ಇನ್ನು ಪ್ರತಿ ಬಾರಿ ಶೌಚಾಲಯ ತೆರಳುವಾಗ ಕೇವಲ 5ನಿಮಿಷ ಮಾತ್ರ ಸಮಯ ನೀಡಲಾಗುತ್ತಿತ್ತು.

ಬೆಡ್ ಮೇಲೆ ಕುಳಿತು 8 ಗಂಟೆ ಕಳೆಯಬೇಕು. ಈ 8 ಗಂಟೆ ಸಮಯದಲ್ಲಿ ಸ್ಪರ್ಧಿಗಳ ಏನು ಮಾಡುತ್ತಾರೆ, ಅವರ ನಡವಳಿಕೆ, ಮುಖದ ಭಾವ, ಚಡಪಡಿಸುತ್ತಿದ್ದೀರಾ, ಏನನ್ನೋ ಕಳೆದುಕೊಂಡಂತೆ ಆಡುತ್ತಿದ್ದಾರಾ ಎಂದು  ಎಲ್ಲವನ್ನೂ ಪರಿಶೀಲಿಸಲಾಗುತ್ತಿತ್ತು. ತುರ್ತು ಸಂದರ್ಭದಲ್ಲಿ ಕರೆ ಮಾಡಲು ಕಿ ಪ್ಯಾಡ್ ಮೊಬೈಲ್ ಒಂದನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಹಾಗಂತ ಈ ಫೋನ್ ಕೈಯಲ್ಲಿ ಹಿಡಿದು ಚೆಕ್ ಮಾಡಲು ಅಥವಾ ಯಾವುದೇ ರೀತಿಯಲ್ಲಿ ಪರಿಶೀಲನಗೂ ಅನುಮತಿ ಇರಲಿಲ್ಲ. 

ಎಲ್ಲಾ ಸ್ಪರ್ಧಿಗಳಿಗೆ ಎಲೆಕ್ಟ್ರಾನಿಕ್ ಬ್ಯಾಂಡ್ ನೀಡಲಾಗಿತ್ತು. ಇದನ್ನು ಕೈಗಳಿಗೆ ಧರಿಸಬೇಕಿತ್ತು. ಇದು ಸ್ಪರ್ಧಿಗಳು ಕೋಣೆಯೊಳಗೆ ಪ್ರವೇಶಿಸುವಾಗ ಇರುವ ರಕ್ತದ ಒತ್ತಡ, ಉಸಿರಾಟ, ಎದೆಬಡಿತ ಸೇರಿದಂತೆ ಇತರ ಎಲ್ಲಾ ಪ್ರಮಾಣಗಳನ್ನು ದಾಖಲಿಸಲಾಗಿತ್ತು. ಬಳಿಕ ಸ್ಪರ್ಧೆಯ ನಡುವೆ ಸ್ಪರ್ಧಿಗಳ ಬಿಪಿ, ಎದೆಬಡಿತ, ತೊಳಲಾಟಗಳಲ್ಲಿ ವ್ಯತ್ಯಾಸಗಳಾದರೆ ತಕ್ಷಣೆ ಸೂಚನೆ ನೀಡುತಿತ್ತು. ಈ ಬ್ಯಾಂಡ್‌ಗಳು ಸ್ಪರ್ಧಿಗಳ ಮಲಗಿದರೆ ಅಥವಾ ಹತಾಶೆಗೊಂಡಿದ್ದರೂ ಸೂಚನೆ ನೀಡುತ್ತಿತ್ತು. 

ಹಲವು ನಿಬಂಧನೆಗಳನ್ನು ದಾಟಿ 8 ಗಂಟೆ ಸಮಯ ಫೋನ್ ಇಲ್ಲದ ಯಾವುದೇ ರೀತಿ ಚಡಪಡಿಕೆ ಇಲ್ಲದ ಕಳೆದ ಡಾಂಗ್ ಅನ್ನೋ ಮಹಿಳೆ 100 ಅಂಕಗಳ ಪೈಕಿ 88.99 ಅಂಕ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಚೀನಾದ 10,000 ಯುವನ್ ಅಂದರೆ ಭಾರತೀಯ ರುಪಾಯಿಗಳಲ್ಲಿ ಸರಿಸುಮಾರು 1 ಲಕ್ಷ ರೂಪಾಯಿ ಬಹುಮಾನ ಗೆದ್ದುಕೊಂಡಿದ್ದಾಳೆ.  ಈ ಸ್ಪರ್ಧೆ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಹಿಳೆ ಸಾಧನೆಯನ್ನು ಕೊಂಡಾಡಿದ್ದಾರೆ. ಒಂದು ದಿನ ಮೊಬೈಲ್‌ನಿಂದ ಸ್ಪರ್ಧೆಗಾಗಿ ದೂರವಿರುವುದಲ್ಲ, ಜೀವನದಲ್ಲಿ ಮೊಬೈಲ್‌ನಿಂದ ದೂರವಿರುವರಿಗೆ ಬಹುಮಾನ ನೀಡಬೇಕಿತ್ತು ಎಂದು ಸಲಹೆಗಳನ್ನು ಹಲವರು ನೀಡಿದ್ದಾರೆ.
 

click me!