100 ಡೇ ಚಾಲೆಂಜ್, ನೂರು ದಿನ ಒಂದೇ ಬಟ್ಟೆ ಧರಿಸಿದ ಮಹಿಳೆ| ಚಾಲೆಂಜ್ ಸ್ವೀಕರಿಸಲೂ ಇತ್ತು ಕಾರಣ| ಕಾರಣ ಕೇಳಿ ಅಚ್ಚರಿಗೀಡಾದ ನೆಟ್ಟಿಗರು
ಬೊಸ್ಟನ್(ಜ.09): ನಮ್ಮಲ್ಲಿ ಹೆಚ್ಚಿನ ಮಂದಿ ಸ್ನಾನದ ಬಳಿಕ ತಪ್ಪದೇ ಬದಲಾಯಿಸುತ್ತೇವೆ, ಇಲ್ಲವೆಂದರೆ ಹೊರಗೆ ಹೋಗುವ ವೇಳೆ ಯಾವುದಾದರೂ ಹೊಸ ಬಟ್ಟೆ ಧರಿಸುತ್ತೇವೆ. ಆದರೆ ನೀವೆಂದಾದರೂ ಒಂದೇ ಬಟ್ಟೆಯನ್ನು, ವಾರಗಟ್ಟಲೃ, ತಿಂಗಳುಗಟ್ಟಲೇ ಧರಿಸಿದ್ದೀರಾ? ಅರೆ ಇದು ಹೇಗಪ್ಪಾ ಸಾಧ್ಯ? ಒಂದೇ ಬಟ್ಟೆ ಹಲವಾರು ದಿನ ಧರಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಇಲ್ಲೊಬ್ಬ ಮಹಿಳೆಯ ವಿಚಾರ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಯಾಕೆಂದರೆ ಈಕೆ ಒಂದೇ ಬಟ್ಟೆಯನ್ನು ನಿರಂತರ ನೂರು ದಿನ ಧರಿಸಿದ್ದಾಳೆ.
ಹೌದು ಬೋಸ್ಟನ್‌ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಸಾರಾ ರಾಬಿನ್ಸ್ ಕೋಲ್ ಈ ವಿಚಾರವಾಗಿ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ದ ಮಿರರ್ ಅನ್ವಯ ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ಬಿಟ್ಟು, ತಮ್ಮ ಜೀವನ ಸಾಮಾನ್ಯವಾಗಿ ಕಳೆಯಲು ರಾಬಿನ್ಸ್ ಕಳೆದ ಸೆಪ್ಟೆಂಬರ್‌ನಲ್ಲಿ ನೂರು ದಿನಗಳ ಚಾಲೆಂಜ್ ಪಡೆದುಕೊಂಡಿದ್ದರು. ಹೀಗಾಗಿ ಅವರು ಕಳೆದ ನೂರು ದಿನಗಳಿಂದ ನಿರಂತರವಾಗಿ ಒಂದೇ ಬಟ್ಟೆ ಧರಿಸುತ್ತಿದ್ದಾರೆ.
ಕಪ್ಪು ಬಣ್ಣದ ಉಣ್ಣೆಯ ಬಟ್ಟೆಯನ್ನು ಇವರು ಕಳೆದ ನೂರು ದಿನಗಳಿಂದ ಧರಿಸುತ್ತಿದ್ದು, ಇದನ್ನೇ ಆಫೀಸ್, ಮಾರುಕಟ್ಟೆ, ಚರ್ಚ್ ಹಾಗೂ ಕ್ರಿಸ್‌ಮಸ್ ಸಮಾರಂಭಕ್ಕೂ ಧರಿಸಿದ್ದಾರೆ. ಇದರೊಂದಿಗೆ ಅಗತ್ಯಕ್ಕೆ ತಕ್ಕಂತೆ ಅವರು ಜಾಕೆಟ್, ಸ್ಕಾರ್ಫ್ ಹಾಗೂ ಲಂಗವನ್ನು ಈ ಬಟ್ಟೆಯೊಂದಿಗೆ ಧರಿಸಿದ್ದಾರೆ. ನೂರು ದಿನಗಳವರೆಗೆ ಅವರು ಒಂದೂ ದಿನ ಬಿಡದೆ ತಮ್ಮ ಡ್ರೆಸಿಂಗ್ ಸ್ಟೈಲ್ ಇನ್ಸ್ಟಾಗ್ರಾಂನಲ್ಲಿ ತಪ್ಪದೇ ಶೇರ್ ಮಾಡಿಕೊಂಡಿದ್ದಾರೆ, ಜೊತೆಗೆ ತಾವು ಈ ಚಾಲೆಂಜ್ ಸ್ವೀಕರಿಸಿದ್ದೇಕೆ ಎಂಬುವುದನ್ನೂ ಬಹಿರಂಗಗೊಳಿಸಿದ್ದಾರೆ.
ಈ ಬಗ್ಗೆ ಬರೆದಿರುವ ಸಾರಾ 'ನೂರು ದಿನಗಳವರೆಗೆ ಒಂದೇ ಬಟ್ಟೆ ಧರಿಸುವುದು ಒಂದು ಅತ್ಯಮೂಲ್ಯ ಪಾಠ, ಇದರ ಅಗತ್ಯ ನಮಗಿದೆ' ಎಂದಿದ್ದಾರೆ. ಇನ್ನು ಈ ಚಾಲೆಂಜ್ ಸ್ವೀಕರಿಸಿದ್ದು ಸಾರಾ ಒಬ್ಬರೇ ಅಲ್ಲ, ಅವರೊಂದಿಗೆ ಅನೇಕ ಮಂದಿ ಈ ಸರಳತೆಯ ಚಾಲೆಂಜ್ ಸ್ವೀಕರಿಸಿದ್ದಾರೆ.