
ಕಾಬೂಲ್ (ಸೆ.03): ಅದು 2008. ಅಫ್ಘಾನಿಸ್ತಾನಕ್ಕೆ ಇಂದು ಅಮೆರಿಕ ಅಧ್ಯಕ್ಷರಾಗಿರುವ ಅಂದಿನ ಸಂಸದರಾದ ಜೋ ಬೈಡೆನ್, ಚಕ್ ಹೇಗಲ್ ಹಾಗೂ ಜಾನ್ ಕೆರ್ರಿ ಭೇಟಿ ನೀಡಿದ್ದರು. ಆಗ ಹೆಲಿಕಾಪ್ಟರ್‌ನಲ್ಲಿ ಇವರು ಸಂಚರಿಸುವಾಗ ಹಿಮದ ಬಿರುಗಾಳಿ ಉಂಟಾಯಿತು. ಈ ವೇಳೆ ಹೆಲಿಕಾಪ್ಟರ್ ದಿಢೀರನೇ ತುರ್ತು ಭೂಸ್ಪರ್ಶ ಮಾಡಿತ್ತು. ಆಗ ಇವರನ್ನು ರಕ್ಷಿಸಿ 30 ತಾಸು ಕಾಲ ಒಬ್ಬ ಕಾದಿದ್ದ. ಆತನೇ ಮೊಹಮ್ಮದ್.
ಈಗ ಈ ಮೊಹಮ್ಮದ್, ಆತನ ಪತ್ನಿ ಹಾಗೂ ನಾಲ್ವರು ಮಕ್ಕಳು ತಾಲಿಬಾನ್ ಉಗ್ರರಿಂದ ಬೆದರಿಕೆಗೆ ಒಳಗಾಗಿದ್ದಾರೆ. ಅಜ್ಞಾತ ಸ್ಥಳವೊಂದರಲ್ಲಿ ಮನೆಯಿಂದ ಹೊರಬರಲಾಗದೇ ಈತ ‘ನನ್ನನ್ನು ಹಾಗೂ ಕುಟುಂಬವನ್ನು ರಕ್ಷಿಸಿ’ ಎಂದು ಮಾಧ್ಯಮಗಳ ಮೂಲಕ ಮೊಹಮ್ಮದ್ ಬೇಡಿಕೆ ಇರಿಸಿದ್ದಾನೆ.
ತಾಲೀಬಾನ್ ಜೊತೆ ಲಷ್ಕರ್ ಸಾಥ್: ನರಕವಾಗಿದೆ ಅಫ್ಘಾನ್
ಮೊಹಮ್ಮದ್ 2008ರಲ್ಲಿ ಸಂವಹನಕಾರನಾಗಿದ್ದ. ಬೈಡೆನ್ ಹಾಗೂ ಅವರ ತಂಡ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದಾಗ ಈತ ಅಫ್ಘಾನಿ ಜನರ ಸಂಭಾಷಣೆಗಳನ್ನು ಅಂಗ್ಲ ಭಾಷೆಗೆ ತರ್ಜುಮೆ ಮಾಡಿ ಸಂವಹನಕಾರನಾಗಿ ಕೆಲಸ ಮಾಡಿದ್ದ ಹಾಗೂ ಬೈಡೆನ್‌ರ ಹೆಲಿಕಾಪ್ಟರ್ ಕೊರೆವ ಚಳಿಯಲ್ಲಿ ಭೂಸ್ಪರ್ಶವಾದಾಗ ರಕ್ಷಣೆ ನೀಡಿದ್ದ.
ಇತ್ತೀಚೆಗೆ ಈತ ಅಮೆರಿಕದ ವಿಶೇಷ ವಲಸೆ ವೀಸಾ ಪಡೆಯಲು ವಿಫಲನಾಗಿದ್ದ. ಏಕೆಂದರೆ ಈತ ಕೆಲಸ ಮಾಡುತ್ತಿದ್ದ ಕಂಪನಿಯು ಈತನ ದಾಖಲೆಗಳನ್ನು ಕಳೆದು ಹಾಕಿತ್ತು. ಇದರ ನಡುವೆ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಈತ ‘ರಕ್ಷಣೆ ಮಾಡಿ’ ಎಂದು ಆಗಮಿಸಿದ್ದರೂ ‘ನಿನ್ನನ್ನು ಮಾತ್ರ ಅಮೆರಿಕಕ್ಕೆ ಕರೆದೊಯ್ಯುತ್ತೇವೆ. ನಿನ್ನ ಕುಟುಂಬವನ್ನಲ್ಲ’ ಎಂದು ಅಮೆರಿಕ ಯೋಧರು ಹೇಳಿದ್ದರು. ಹೀಗಾಗಿ ನಿರಾಶನಾಗಿದ್ದ ಈತ ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟುಕೊಂಡಿದ್ದು, ಮಾಧ್ಯಮದ ಮೂಲಕ ರಕ್ಷಣೆಯ ಮನವಿ ಮಾಡಿದ್ದಾನೆ.
ಇದಕ್ಕೆ ಓಗೊಟ್ಟಿರುವ ಅಮೆರಿಕ ವಿದೇಶಾಂಗ ವಕ್ತಾರ ನೆಡ್ ಪ್ರೈಸ್, ‘ನಿನ್ನ ಸೇವೆಗೆ ನಾವು ಗೌರವ ನೀಡುತ್ತೇವೆ. ನಿನ್ನನ್ನು ಶೀಘ್ರ ರಕ್ಷಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ