
ಜಿನೇವಾ(ಮಾ.20): ಕೋವಿಡ್ ಸಾಂಕ್ರಾಮಿಕದ ಅಂತ್ಯ ಇನ್ನೂ ದೂರದಲ್ಲಿದೆ. ನಾವಿನ್ನೂ ಈ ಪಿಡುಗಿನ ನಡು ಭಾಗದಲ್ಲಿದ್ದೇವೆ. ಹೀಗಾಗಿ ಎಲ್ಲಾ ದೇಶಗಳು ಎಚ್ಚರ ವಹಿಸುವುದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರೆ ಮಾರ್ಗರೆಟ್ ಹ್ಯಾರಿಸ್, ‘ನಾವಿನ್ನೂ ಕೋವಿಡ್ ಸಾಂಕ್ರಾಮಿಕದ ಅಂತ್ಯದಿಂದ ಬಹು ದೂರದಲ್ಲಿದ್ದೇವೆ. ಕಳೆದ ವಾರ ವಿಶ್ವದಾದ್ಯಂತ ಹೊಸ ಪ್ರಕರಣಗಳಲ್ಲಿ ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಸತತ ಒಂದು ತಿಂಗಳ ಇಳಿಕೆ ಬಳಿಕ ಕಳೆದ ವಾರ ವಿಶ್ವದಲ್ಲಿ ಹೊಸ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡುಬಂದಿತ್ತು. ಭಾರೀ ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿರುವ ಕೊರೋನಾದ ರೂಪಾಂತರಿ ತಳಿ ಒಮಿಕ್ರೋನ್ ವೈರಸ್ ಹಾವಳಿ, ಒಮಿಕ್ರೋನ್‌ನ ಉಪತಳಿ ಬಿಎ.2 ಪ್ರಮಾಣ ಹೆಚ್ಚಳ, ಸೋಂಕು ಇಳಿಕೆಯಾದ ಕಾರಣ ಹಲವು ದೇಶಗಳಲ್ಲಿ ಸಾರ್ವಜನಿಕ ನಿರ್ಬಂಧ ಕ್ರಮಗಳನ್ನು ಹಿಂದಕ್ಕೆ ಪಡೆದಿದ್ದು, ಕೆಲವು ದೇಶಗಳಲ್ಲಿ ಲಸಿಕೆ ನೀಡಿಕೆ ಪ್ರಮಾನ ಕಡಿಮೆ ಇರುವುದು ಸೋಂಕು ಏರಿಕೆಗೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಹಿಂದಿನ ವಾರಕ್ಕೆ ಹೋಲಿಸಿದರೆ ಮಾ.7-13ರ ಅವಧಿಯಲ್ಲಿ ಹೊಸ ಕೇಸಿನಲ್ಲಿ ಶೆ.8ರಷ್ಟುಏರಿಕೆಯಾಗಿತ್ತು. ಈ ಅವಧಿಯಲ್ಲಿ 1.1 ಕೋಟಿ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 43000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದರಲ್ಲೂ ಚೀನಾ, ದಕ್ಷಿಣ ಕೊರಿಯಾ, ಜರ್ಮನಿ, ರಷ್ಯಾ, ವಿಯೆಟ್ನಾಂ ಸೇರಿದಂತೆ ಹಲವು ದೇಶಗಳಲ್ಲಿ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಈ ಹಿಂದಿನ ಲೆಕ್ಕಾಚಾರದ ಅನ್ವಯ, 2022ರ ಅಂತ್ಯಕ್ಕೆ ಕೊರೋನಾ ಹಾವಳಿ ಕಡೆಯಾಗಬೇಕಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಲಸಿಕೆ ವಿತರಣೆ ಶೇ.70ರಷ್ಟಿದ್ದರೆ ಇದು ಸಾಧ್ಯ ಎಂದಿತ್ತು. ಆದರೆ ಇನ್ನೂ ಹಲವು ದೇಶಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಶೇ.50ರಷ್ಟನ್ನೂ ದಾಟದೇ ಇರುವುದು ಸಾಂಕ್ರಾಮಿಕ ಅಂತ್ಯಕ್ಕೆ ಅಡ್ಡಿಯಾಗಿದೆ.
ಇದುವರೆಗೂ ವಿಶ್ವದಲ್ಲಿ 47 ಕೋಟಿ ಜನರಿಗೆ ಸೋಂಕು ತಗುಲಿದ್ದು, 60 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 1092 ಕೋಟಿ ಡೋಸ್ ಲಸಿಕೆ ವಿತರಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ