ಮಾರಕ ಕೊರೋನಾ ವಿಶ್ವಾದ್ಯಂತ ಹರಡುವ ಭೀತಿ!

By Kannadaprabha NewsFirst Published Feb 25, 2020, 9:20 AM IST
Highlights

ಮಾರಕ ಕೊರೋನಾ ವಿಶ್ವದೆಲ್ಲೆಡೆ ಮತ್ತಷ್ಟು ವ್ಯಾಪಕ| ದಕ್ಷಿಣ ಕೊರಿಯಾದಲ್ಲಿ ಸೋಂಕು ಪೀಡಿತರ ಸಂಖ್ಯೆ 833ಕ್ಕೆ| ಒಮನ್‌, ಅಷ್ಘಾನಿಸ್ತಾನ, ಕುವೈತ್‌, ಬಹ್ರೇನ್‌, ಇರಾಕ್‌ಗೂ ಕೊರೋನಾ

ಸೋಲ್‌[ಫೆ.25]: ಈಗಾಗಲೇ ದಕ್ಷಿಣ ಕೊರಿಯಾ, ಇಟಲಿ, ಇರಾನ್‌, ಅರಬ್‌ ಹಾಗೂ ಆಫ್ರಿಕಾ ಖಂಡದ ರಾಷ್ಟ್ರಗಳಿಗೆ ಹಬ್ಬಿರುವ ಕೊರೋನಾ ಸೋಂಕು ಮತ್ತಷ್ಟು ವ್ಯಾಪಕವಾಗಿ ಹಬ್ಬುತ್ತಿದೆ. ಚೀನಾ ಹೊರತು, ಅತಿಹೆಚ್ಚು ಕೊರೋನಾ ಸೋಂಕಿಗೆ ತುತ್ತಾದವರ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದ ಕುಖ್ಯಾತಿ ಪಡೆದಿರುವ ದಕ್ಷಿಣ ಕೊರಿಯಾದಲ್ಲಿ ಸೋಮವಾರ ಮತ್ತೆ 70 ಮಂದಿಗೆ ಈ ವ್ಯಾಧಿ ತಗುಲಿದೆ.

ಹೀಗಾಗಿ, ಕೊರೋನಾ ಪೀಡಿತರ ಸಂಖ್ಯೆ 833ಕ್ಕೆ ಜಿಗಿದಿದೆ. ಇನ್ನು ಇದೇ ವೇಳೆ ಭಾರತದ ನೆರೆಯ ರಾಷ್ಟ್ರವಾದ ಅಷ್ಘಾನಿಸ್ತಾನ, ಕುವೈತ್‌, ಬಹ್ರೇನ್‌, ಒಮನ್‌ ಹಾಗೂ ಇರಾಕ್‌ನಲ್ಲಿ ಇದೇ ಮೊದಲ ಬಾರಿಗೆ ಈ ವೈರಸ್‌ ಕಾಣಿಸಿಕೊಂಡಿದ್ದು, ಒಮನ್‌ ಸರ್ಕಾರ ಇರಾನ್‌ಗೆ ಸಂಚರಿಸುವ ವಿಮಾನ ಸೇವೆಯನ್ನು ರದ್ದುಪಡಿಸಿದೆ.

ಏತನ್ಮಧ್ಯೆ, ಇರಾನ್‌ನಲ್ಲಿ ಕೊರೋನಾ ಮಾರಿಗೆ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎನ್ನಲಾಗಿದ್ದು, ಈ ವಿಚಾರವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ. ಆದರೆ, ಈ ಆರೋಪವನ್ನು ಸಾರಸಗಟಾಗಿ ತಿರಸ್ಕರಿಸಿರುವ ಇರಾನ್‌ ಸರ್ಕಾರ, ಕೊರೋನಾಕ್ಕೆ ಸತ್ತವರ ಸಂಖ್ಯೆ 12ಕ್ಕೆ ಏರಿದೆ ಎಂದು ಒಪ್ಪಿಕೊಂಡಿದೆ. ಇಟಲಿಯಲ್ಲಿ ಒಟ್ಟು 219 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದ್ದು, ಈ ವ್ಯಾಧಿಗೆ ಇಲ್ಲಿ 5 ಮಂದಿ ಬಲಿಯಾಗಿದ್ದಾರೆ.

ಇನ್ನು ಅಷ್ಘಾನಿಸ್ತಾನ, ಇರಾಕ್‌ನಲ್ಲಿ ಸೋಂಕಿಗೆ ತುತ್ತಾದವರಿಗೆ ಇರಾನ್‌ನಿಂದಲೇ ಈ ವ್ಯಾಧಿ ವ್ಯಾಪಿಸಿದೆ ಎಂದು ಆಯಾ ಸರ್ಕಾರಗಳು ದೂರಿವೆ.

click me!