ಪಾಕ್‌ನಲ್ಲಿ ಭುಗಿಲೆದ್ದ ಹಿಂಸಾಚಾರ, ಸಿಕ್ಕಾಕೊಂಡ ಭಾರತದ ಸಿಖ್ ಯಾತ್ರಾರ್ಥಿಗಳು!

By Suvarna NewsFirst Published Apr 14, 2021, 4:57 PM IST
Highlights

ಪಾಕಿಸ್ತಾನದಲ್ಲಿ ಹಿಂಸಾಚಾರ, ಭಾರತೀಯ ಸಿಖ್‌ ಯಾತ್ರಾರ್ಥಿಗಳಿಗೆ ಆತಂಕ| ಪಾಕಿಸ್ತಾನದಲ್ಲಿ ಬೈಸಾಕಿ ಆಚರಣೆಗೆ ತೆರಳಿದ್ದ ಭಾರತೀಯ ಸಿಖ್ ಯಾತ್ರಾರ್ಥಿಗಳು

ಇಸ್ಲಮಾಬಾದ್(ಏ.14): ಪಾಕಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಳವಾಗುತ್ತಿರುವ ಹಿನ್ನೆಲೆ ಪಾಕಿಸ್ತಾನದಲ್ಲಿ ಬೈಸಾಕಿ ಆಚರಣೆಗೆ ತೆರಳಿದ್ದ ಭಾರತೀಯ ಸಿಖ್ ಯಾತ್ರಾರ್ಥಿಗಳ ರಕ್ಷಣೆ ಕುರಿತು ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಸರ್ಕಾರ ಅಲ್ಲಿನ ಸನ್ನಿವೇಶದ ಬಗ್ಗೆ ನಿರಂತರವಾಗಿ ಗಮನ ಹರಿಸುತ್ತಿದೆ. ಭಾರತದ ಪ್ರಜೆಗಳ ಸುರಕ್ಷತೆಗಾಗಿ ಪಾಕ್‌ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುವುದಾಗಿಯೂ ವಿವರಿಸಿದೆ.

ಇತ್ತೀಚೆಗಷ್ಟೇ ತೆಹ್ರೀಕ್ ಇ ಲಬ್ಬಾಯಿಕ್ ಪಾಕಿಸ್ತಾನ್ ಮುಖ್ಯಸ್ಥ ಸಾದ್ ಹುಸೈನ್ ರಿಜ್ವಿಯನ್ನು ಪಾಕಿಸ್ತಾನ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಇದಾದ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದರು.

ಹಿಂಸಾಚಾರಕ್ಕೇನು ಕಾರಣ?

ಫ್ರಾನ್ಸ್ ರಾಯಭಾರಿ ವಜಾಗೊಳಿಸಬೇಕು ಮತ್ತು ಫ್ರಾನ್ಸ್ ಜತೆಗಿನ ಸಂಬಂಧವನ್ನು ಪಾಕಿಸ್ತಾನ ಕಡಿದುಕೊಳ್ಳಬೇಕು ಎಂದು ಟಿಎಲ್ ಪಿ ವರಿಷ್ಠ ರಿಜ್ವಿ ಆಗ್ರಹಿಸಿದ್ದರು. ಅಲ್ಲದೇ ಏಪ್ರಿಲ್ 20ರೊಳಗೆ ತನ್ನ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಗಡುವು ನೀಡಿದ್ದರು. ಆದರೆ ಇದಕ್ಕೂ ಮುನ್ನ ರಿಜ್ವಿಯನ್ನು ಬಂಧಿಸಿರುವುದು ಹಿಂಸಾಚಾರ ನಡೆಯಲು ಕಾರಣವಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಬೈಸಾಕಿ ಆಚರಣೆಗಾಗಿ ಭಾರತದಿಂದ ಸುಮಾರು 900 ಸಿಖ್ ಯಾತ್ರಾರ್ಥಿಗಳು ಪಾಕಿಸ್ತಾನದಲ್ಲಿರುವ ಪಂಜಾ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ಆದರೀಗ ಭುಗಿಲೆದ್ದ ಹಿಂಸಾಚಾರ ಹಿನ್ನೆಲೆ ಯಾತ್ರಾರ್ಥಿಗಳನ್ನು ಲಾಹೋರ್ ಗುರುದ್ವಾರದಲ್ಲಿ ಇರಿಸಲಾಗಿದೆ.

click me!