
ನವದೆಹಲಿ(ಅ.06): ಭಾರತೀಯ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರು. ಸಾಲ ಮರುಪಾವತಿಸದೆ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಗಡೀಪಾರು ಸಂಬಂಧ ಲಂಡನ್‌ನಲ್ಲಿ ರಹಸ್ಯ ಪ್ರಕ್ರಿಯೆಯೊಂದು ಆರಂಭವಾಗಿದೆ. ಹೀಗಾಗಿ ಮಲ್ಯ ಹಸ್ತಾಂತರ ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಬ್ರಿಟನ್‌ನ ಪರಮೋಚ್ಚ ನ್ಯಾಯಾಲಯ ಮಲ್ಯ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಗಡೀಪಾರು ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ, ಅಲ್ಲಿ ಹೊಸದಾಗಿ ಪ್ರಕ್ರಿಯೆಗಳು ಆರಂಭವಾಗಿವೆ. ಅವು ಯಾವ ರೀತಿಯದ್ದು ಎಂಬುದು ತನಗೆ ಗೊತ್ತಿಲ್ಲ. ಅದರಲ್ಲಿ ತಾನು ಪಕ್ಷಗಾರನಲ್ಲ. ಅಲ್ಲದೆ, ಈಗ ಈ ಪ್ರಕ್ರಿಯೆ ಯಾವ ಘಟ್ಟದಲ್ಲಿದೆ ಎಂಬ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಆಗ ಮಧ್ಯಪ್ರವೇಶಿದ ನ್ಯಾ| ಉದಯ್ ಲಲಿತ್ ಹಾಗೂ ನ್ಯಾ| ಅಶೋಕ್ ಭೂಷಣ್ ಅವರಿದ್ದ ಪೀಠ, ‘ಮಲ್ಯರನ್ನು ಕರೆತರಲು ಅದ್ಯಾವ ರಹಸ್ಯ ಪ್ರಕ್ರಿಯೆಗಳು ನಡೆದಿವೆ ಎಂಬುದನ್ನು ತಿಳಿಸಿ’ ಎಂದು ಕೋರ್ಟಲ್ಲಿದ್ದ ಮಲ್ಯ ಪರ ವಕೀಲರಿಗೆ ಸೂಚಿಸಿತು. ‘ಆದರೆ ಈ ಪ್ರಕ್ರಿಯೆ ಬಗ್ಗೆ ನಮಗೂ ಮಾಹಿತಿ ಇಲ್ಲ. ಗಡೀಪಾರು ವಿರುದ್ಧ ನಾನು ಸಲ್ಲಿಸಿದ ಕೋರಿಕೆ ತಿರಸ್ಕಾರಗೊಂಡಿದೆ ಎಂಬ ಮಾಹಿತಿಯಷ್ಟೇ ನನ್ನ ಬಳಿ ಇದೆ’ ಎಂದು ಅವರು ಸ್ಪಷ್ಟಪಡಿಸಿದರು. ನ್ಯಾಯಾಲಯ ವಿಚಾರಣೆಯನ್ನು ನ.2ಕ್ಕೆ ಮುಂದೂಡಿತು.
ಮಲ್ಯ ಅವರು ತಮ್ಮ ಮಕ್ಕಳಿಗೆ 290 ಕೋಟಿ ರು. ಹಣವನ್ನು ಕೋರ್ಟ್ ಆದೇಶ ಉಲ್ಲಂಘಿಸಿ ವರ್ಗಾಯಿಸಿದ್ದರು ಎಂಬ ಆರೋಪ ಹೊರಿಸಿ 2017ರಲ್ಲೇ ಸುಪ್ರೀಂ ಕೋರ್ಟ್ ಅವರು ದೋಷಿ ಎಂದು ತೀರ್ಪು ನೀಡಿತ್ತು. ಇದನ್ನು ಮರುಪರಿಶೀಲಿಸುವಂತೆ ಮಲ್ಯ ಕೋರಿದ್ದ ಅರ್ಜಿ ಇತ್ತೀಚೆಗೆ ವಜಾ ಆಗಿತ್ತು ಹಾಗೂ ಅಕ್ಟೋಬರ್ 5ರೊಳಗೆ ತನ್ನ ಮುಂದೆ ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು. ಆದರೆ ಮಲ್ಯ ಸೋಮವಾರ ಬರಲಿಲ್ಲ. ಈ ವೇಳೆ ಈ ಮೇಲಿನಂತೆ ಕೋರ್ಟ್ ಸೂಚನೆಗಳನ್ನು ನೀಡಿ ನ.2ಕ್ಕೆ ವಿಚಾರಣೆ ನಿಗದಿಪಡಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ