
ಟೆಹ್ರಾನ್: ಅಮೆರಿಕ ಹಾಗೂ ಇರಾನ್ ನಡುವಿನ ಶಾಂತಿ ಒಪ್ಪಂದ ಪುನಃ ತೂಗುಯ್ಯಾಲೆಯಲ್ಲಿದ್ದು, ಭಾನುವಾರವೂ ಎರಡೂ ದೇಶಗಳು ದಾಳಿ-ಪ್ರತಿದಾಳಿ ಮುಂದುವರಿಸಿವೆ. ಇರಾನ್‌ನ 10 ಕಡೆ ಅಮೆರಿಕ ದಾಳಿ ಮಾಡಿದ್ದರೆ, ಅಮೆರಿಕದ ಮಿತ್ರದೇಶಗಳಾದ ಬಹ್ರೇನ್ ಹಾಗೂ ಕುವೈತ್ ಮೇಲೆ ಇರಾನ್ ಆಕ್ರಮಣಮಾಡಿದೆ.
ಹೋರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಪನಾಮಾ ಧ್ವಜ ಹೊಂದಿದ್ದ ಕಿಕು ಹೆಸರಿನ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಆರೋಪಿಸಿ ಅಮೆರಿಕ ಆ ರಾಷ್ಟ್ರದ ಹಲವು ಪ್ರದೇಶಗಳ ಮೇಲೆ ಶನಿವಾರ ರಾತ್ರಿ ದಾಳಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಸೇನೆ, ‘ಕದನವಿರಾಮವನ್ನು ಗೌರವಿಸಲು ಇರಾನ್‌ಗೆ ಒಂದು ಅವಕಾಶ ಕೊಡಬೇಕು ಎಂದುಕೊಂಡಿದ್ದೆವು. ಆದರೆ ಕಿಕು ಮೇಲಿನ ದಾಳಿಯ ಬಳಿಕ ನಿರ್ಧಾರ ಬದಲಿಸಿದೆವು. ಇರಾನ್‌ನ ಕಣ್ಗಾವಲು ಉಪಕರಣಗಳು, ಸಂವಹನ ವ್ಯವಸ್ಥೆ, ವಾಯುರಕ್ಷಣಾ ನೆಲೆ, ಡ್ರೋನ್ ಸಂಗ್ರಹಗಾರ ಸೇರಿ 10 ಗುರಿಗಳನ್ನು ಉಡಾಯಿಸಲಾಗಿದೆ’ ಎಂದು ಹೇಳಿದೆ ಹಾಗೂ ಇದರ 38 ಸೆಕೆಂಡುಗಳ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇದರ ಬೆನ್ನಲ್ಲೇ ಇರಾನ್‌ನ ಅರೆಸೇನಾಪಡೆಯಾಗಿರುವ ಐಆರ್‌ಜಿಸಿ, ಕುವೈತ್ ಮತ್ತು ಬಹ್ರೇನ್ ಅನ್ನು ಗುರಿಯಾಗಿಸಿ ಆಕ್ರಮಣ ಮಾಡಿದೆ.
ತಮ್ಮ ಮಿತ್ರರಾಷ್ಟ್ರಗಳ ಮೇಲೆ ಇರಾನ್ ದಾಳಿ ಮಾಡುತ್ತಿದ್ದಂತೆ ಕೆಂಡವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇರಾನ್ ಬುದ್ಧಿ ಕಲಿಯುವಂತೆ ಕಾಣಿಸುತ್ತಿಲ್ಲ. ಯುದ್ಧವನ್ನು ಪುನಃ ಆರಂಭಿಸಲು ಅಮೆರಿಕವನ್ನು ಒತ್ತಾಯಿಸಿದರೆ ಇರಾನ್ ಅಸ್ತಿತ್ವದಲ್ಲೇ ಇರುವುದಿಲ್ಲ’ ಎಂದು ಕೆಂಡ ಕಾರಿದ್ದಾರೆ.
ಈ ಬೆದರಿಕೆಗೆ ಬಗ್ಗದ ಇರಾನ್ ಸೇನೆ, ‘ಹೋರ್ಮುಜ್ ತೀರದಲ್ಲಿರುವ ಸಿರಿಕ್ ಮೇಲೆ ಅಮೆರಿಕ ಕುರುಡುದಾಳಿ ಮಾಡಿದ ಮಾತ್ರಕ್ಕೆ ಆ ಜಲಸಂಧಿ ಮೇಲಿನ ನಮ್ಮ ನಿಯಂತ್ರಣ ತಗ್ಗುವುದಿಲ್ಲ. ಬದಲಿಗೆ, ಆ ಮಾರ್ಗವಾಗಿ ಸಾಗುವ ದುಸ್ಸಾಹಸ ಮಾಡುವ ಹಡಗುಗಳಿಗೆ, ನಾವು ವಿಧಿಸಿರುವ ನಿಯಮಗಳನ್ನು ನೆನಪಿಸುತ್ತದೆ. ಗಲ್ಫ್ ಭಾಗದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮುಂದಿನ ದಿನಗಳಲ್ಲಿ ನರಕದರ್ಶನ ಮಾಡಲಿವೆ’ ಎಂದು ಎಚ್ಚರಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ