ಹೋರ್ಮುಜ್‌ ಜಲಸಂಧಿ ಪ್ರವೇಶಕ್ಕೆ ಇರಾನ್‌ಗೇ ನಿರ್ಬಂಧ! ಸಮೀಪ ಬಂದ್ರೆ ಉಡೀಸ್ ಮಾಡ್ತೀವಿ ಟ್ರಂಪ್ ಬೆದರಿಕೆ, ಭಾರತಕ್ಕೆ ಆತಂಕ ಇಲ್ಲ ಏಕೆ?

Kannadaprabha News   | Kannada Prabha
Published : Apr 14, 2026, 06:51 AM IST
Trump warn iran

ಸಾರಾಂಶ

ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ಸಂಚಾರವನ್ನು ಅಮೆರಿಕ ನಿರ್ಬಂಧಿಸಿದೆ. ಇರಾನ್ ಹಡಗುಗಳು ಕಂಡರೆ ಧ್ವಂಸ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದು, ಇದಕ್ಕೆ ಪ್ರತಿಯಾಗಿ ಇಡೀ ಕೊಲ್ಲಿಯನ್ನು ಅಸ್ಥಿರಗೊಳಿಸುವುದಾಗಿ ಇರಾನ್ ತಿರುಗೇಟು ನೀಡಿದೆ, ಇದರಿಂದ ಮತ್ತೆ ಯುದ್ಧದ ಭೀತಿ ಆವರಿಸಿದೆ.

ವಾಷಿಂಗ್ಟನ್‌ (ಏ.14): ಒಂದೂವರೆ ತಿಂಗಳಿಂದ ಹೋರ್ಮುಜ್‌ ಜಲಸಂಧಿಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಜಗತ್ತಿನ ಆರ್ಥಿಕತೆಯ ಉಸಿರುಗಟ್ಟಿಸಿದ್ದ ಇರಾನ್‌ ವಿರುದ್ಧ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೇ ನಿರ್ಬಂಧವನ್ನು ಪ್ರತ್ಯಸ್ತ್ರವಾಗಿ ಬಳಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಭಾರತೀಯ ಕಾಲಮಾನ ಸೋಮವಾರ ಸಂಜೆ 7.30ರಿಂದಲೇ ಹೋರ್ಮುಜ್ ಜಲಸಂಧಿಯಲ್ಲಿ ಇರಾನ್‌ಗೆ ಸೇರಿದ ಯಾವುದೇ ಹಡಗುಗಳನ್ನು ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಇರಾನ್‌ನ ಯಾವುದೇ ಹಡಗುಗಳು ಜಲಸಂಧಿ ಸಮೀಪದ ಬಂದರೆ ಅದನ್ನು ಧ್ವಂಸಗೊಳಿಸುವುದಾಗಿ ಟ್ರಂಪ್‌ ಎಚ್ಚರಿಸಿದ್ದಾರೆ.

ಅಮೆರಿಕದ ಈ ಕ್ರಮಕ್ಕೆ ಇರಾನ್‌ ಕೂಡಾ ತಿರುಗೇಟು ನೀಡಿರುವ ಕಾರಣ, ಈಗಾಗಲೇ 2 ವಾರಗಳ ಅವಧಿಗೆ ಘೋಷಿಸಲಾಗಿದ್ದ ಕದನವಿರಾಮ ಮುರಿದುಬಿದ್ದು ಮತ್ತೆ ಭೀಕರ ಯುದ್ಧದ ಭೀತಿ ಆರಂಭವಾಗಿದೆ.

ಬಂದ್‌ ಉದ್ದೇಶವೇನು?:

ಇರಾನ್‌ನ ಪ್ರಮುಖ ಆದಾಯದ ಮೂಲ ತೈಲ, ಅನಿಲ. ಹೀಗಾಗಿ ಇರಾನ್‌ನಿಂದ ವಿದೇಶಗಳಿಗೆ ತೈಲ, ಅನಿಲ ಪೂರೈಕೆಯನ್ನೇ ಸ್ಥಗಿತ ಮಾಡಿ ಇರಾನ್‌ಗೆ ಆರ್ಥಿಕವಾಗಿ ಪೆಟ್ಟು ನೀಡುವುದು ಟ್ರಂಪ್‌ ಉದ್ದೇಶ. ಜೊತೆಗೆ ಹೋರ್ಮಜ್‌ ಜಲಸಂಧಿ ಸಂಚರಿಸುವ ಅನಿಲ ಮತ್ತು ತೈಲ ಹಡಗುಗಳಿಗೆ ಪ್ರತಿ ಬ್ಯಾರೆಲ್‌ಗೆ ಕನಿಷ್ಠ 2 ಡಾಲರ್‌ ಶುಲ್ಕ ವಿಧಿಸಿ ಮಾಸಿಕ ಅಂದಾಜು 48000 ಕೋಟಿ ರು. ಹಣ ಸಂಗ್ರಹಿಸುವ ಇರಾನ್‌ ಗುರಿಯನ್ನು ತಡೆಯುವುದು ಉದ್ದೇಶವಿದೆ. ಒಟ್ಟಾರೆ ಈ ಮಾರ್ಗ ಬಂದರೆ ಇರಾನ್‌ಗೆ ದೊಡ್ಡ ಮಟ್ಟದಲ್ಲಿ ಆರ್ಥಿಕವಾಗಿ ಹೊಡೆತ ಬೀಳಲಿದೆ. ಈ ಹಿಂದೆ ವೆನಿಜುವೆಲಾದ ಮೇಲೂ ಇದೇ ರೀತಿಯ ತಂತ್ರ ಬಳಸಿ ಟ್ರಂಪ್‌ ಯಶಸ್ವಿಯಾಗಿದ್ದರು. ಇದೀಗ ಮಾತುಕತೆ ವಿಫಲವಾಗುವ ಜೊತೆಗೆ, ಯುದ್ಧದಲ್ಲಿ ಇರಾನ್‌ ಕಟ್ಟಿಹಾಕುವ ಪ್ರಯತ್ನ ವಿಫಲವಾದ ಬಳಿಕ ಟ್ರಂಪ್‌ ಈ ಹೊಸ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.ಸ್ವಹಿತಾಸಕ್ತಿ:

ಜೊತೆಗೆ ಅತ್ತ ಅಮೆರಿಕದ ಬಳಿಯೂ ಅಪಾರ ತೈಲವಿದೆ. ಅದಕ್ಕೆ ಹೊಸ ಮಾರುಕಟ್ಟೆ ಸೃಷ್ಟಿಸಿಕೊಳ್ಳಲೂ ಟ್ರಂಪ್‌ ಯತ್ನಿಸುತ್ತಿದ್ದಾರೆ. ಇತ್ತೀಚೆಗಷ್ಟೇ, ‘ಅನೇಕ ಹಡಗುಳು ತೈಲ ತುಂಬಿಕೊಂಡು ಹೋಗಲು ಅಮೆರಿಕದತ್ತ ಬರುತ್ತಿವೆ’ ಎಂದು ಹೇಳಿದ್ದರು. ಈಗ ತೈಲ ಸಾಗುವ ಪ್ರಮುಖ ಮಾರ್ಗವೇ ತಮ್ಮ ಕೈಲಿರುವಾಗ, ಇರಾನ್‌ನ ಗ್ರಾಹಕರನ್ನು ತನ್ನತ್ತ ಸೆಳೆಯಲು ಮತ್ತಷ್ಟು ಕಸರತ್ತುಗಳನ್ನು ನಡೆಸಬಹುದು.

ಕೊಲ್ಲಿಯ ಯಾವ ಬಂದರನ್ನೂ ನಾವು ಬಿಡಲ್ಲ: ಇರಾನ್‌ ಸಡ್ಡು

- ಅತ್ತ ಪ್ರತೀಕಾರವಾಗಿ ಹೌತಿಗಳಿಂದ ಮಾಂಡೇಬ್‌ ಕ್ಲೋಸ್‌?

ಟೆಹ್ರಾನ್‌: ಹೋರ್ಮುಜ್‌ ಜಲಸಂಧಿಯನ್ನು ತನ್ನ ಹಡಗುಗಳಿಗೆ ಬಂದ್ ಮಾಡುವ ಅಮೆರಿಕದ ಘೋಷಣೆಗೆ ತಿರುಗೇಟು ನೀಡಿರುವ ಇರಾನ್‌, ಹಾಗೇನಾದರೂ ಮಾಡಿದರೆ ಇಡೀ ಕೊಲ್ಲಿಯ ಯಾವುದೇ ಪ್ರದೇಶ ಮತ್ತು ಬಂದರು ಕೂಡಾ ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಸಿದೆ.

‘ಪರ್ಷಿಯನ್‌ ಕೊಲ್ಲಿ ಮತ್ತು ಒಮಾನ್‌ ಕಡಲ ತೀರವು ಎಲ್ಲರಿಗೂ ಮುಕ್ತವಾಗಬೇಕು, ಇಲ್ಲವೇ ಯಾರಿಗೂ ತೆರೆಯಬಾರದು. ಇಲ್ಲದೇ ಹೋದಲ್ಲಿ ಈ ಪ್ರದೇಶದಲ್ಲಿರುವ ಯಾವ ಬಂದರೂ ಇನ್ನೂ ಸುರಕ್ಷಿತವಲ್ಲ’ ಎಂದಿದೆ. ಈ ಮೂಲಕ, ನಮ್ಮ ಬಂದರನ್ನು ಮುಚ್ಚಿದರೆ ನಾವು ಎಲ್ಲಾ ಕೊಲ್ಲಿ ದೇಶಗಳಿಗೆ ಅದೇ ಸ್ಥಿತಿ ತಂದಿಡುತ್ತೇವೆ ಎಂಬ ಎಚ್ಚರಿಕೆ ನೀಡಿದೆ.

ಮಾಂಡೇಬ್‌ ಬಂದ್‌:

ಈ ನಡುವೆ ಹೋರ್ಮುಜ್‌ಗೆ ಸಮಾನಾಂತರವಾಗಿ ಕೆಂಪು ಸಮುದ್ರವನ್ನು ಏಡನ್‌ ಕೊಲ್ಲಿಯೊಂದಿಗೆ ಬಾಬ್‌ ಎಲ್‌-ಮಾಂಡೇಬ್‌ ಸಂಪರ್ಕಿಸುತ್ತದೆ. ಇದರ ಇಬ್ಬದಿಗೆ ಜಿಬೂಟಿ ಹಾಗೂ ಯೆಮೆನ್‌ ಇದ್ದು, ಇಲ್ಲಿನ ಬಂಡುಕೋರರು ಇರಾನ್‌ ಪರವಾಗಿದ್ದಾರೆ. ಇರಾನ್‌ಗೆ ಕಾಟ ಕೊಡಲು ಹೋರ್ಮುಜ್‌ ಬಂದ್‌ ಮಾಡಿದರೆ, ಅದಕ್ಕೆ ಪ್ರತೀಕಾರವಾಗಿ ಯೆಮೆನ್‌ನ ಹೌತಿಗಳು ಮಾಂಡೇಬ್‌ ಜಲಸಂಧಿಯಲ್ಲಿ ಸಾಗುವ ಹಡಗುಗಳ ಮೇಲೆ ಮನಬಂದಂತೆ ದಾಳಿ ಮಾಡಬಹುದು. ಜಗತ್ತಿನ ಸುಮಾರು ಶೇ.10ರಷ್ಟು ವ್ಯಾಪಾರ ಈ ಮಾರ್ಗದಲ್ಲಿ ನಡೆಯುವ ಕಾರಣ ಭಾರತ, ಚೀನಾ, ಯುರೋಪ್‌ ದೇಶಗಳಿಗೆ ಸಮಸ್ಯೆಯಾಗಲಿದೆ.

ಜಲಸಂಧಿ ಬಳಿ ಬಂದ್ರೆ ಇರಾನ್ ಹಡುಗು ನಾಶ ಮಾಡ್ತೇವೆ

ಇರಾನ್‌ನ ಯಾವುದೇ ಹಡಗುಗಳು ಜಲಸಂಧಿ ಸಮೀಪದ ಬಂದರೆ ಅದನ್ನು ಧ್ವಂಸ ಮಾಡುವೆ. ಈಗಾಗಲೇ ಯುದ್ಧದಲ್ಲಿ ಇರಾನ್‌ನ 158 ಹಡಗು ನಾಶವಾಗಿವೆ. ಇನ್ನು ಅಳಿದುಳಿದ ಹಡಗುಗಳು ಬಂದರೆ ಅವೂ ನಾಶವಾಗಲಿವೆ.

- ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಭಾರತಕ್ಕೆ ಹೋರ್ಮುಜ್‌ ಬಂದ್‌ ಬಿಸಿ ತಾಗಲ್ಲ?

- ಅಮೆರಿಕ ಹೋರ್ಮಜ್‌ ಬಂದ್‌ ಮಾಡಿದರೆ ಭಾರತಕ್ಕೆ ಹೆಚ್ಚು ಆತಂಕ ಇಲ್ಲ

- ಕಾರಣ ಇರಾನ್‌ನಿಂದ ಭಾರತ ಹೆಚ್ಚಿನ ತೈಲ, ಅನಿಲ ಆಮದು ಮಾಡಲ್ಲ.

- ಈ ಮಾರ್ಗದಲ್ಲಿ ಅನ್ಯ ದೇಶದಿಂದ ಬರುವ ಹಡಗಿಗೆ ಅಮೆರಿಕ ಅಡ್ಡಿ ಮಾಡಲ್ಲ

- ಹೀಗಾಗಿ ಅಮೆರಿಕದ ದಿಗ್ಬಂಧನ ನಿರ್ಧಾರದಿಂದ ಭಾರತಕ್ಕೆ ಅಪಾಯ ಇಲ್ಲ

- ಭಾರತದಲ್ಲಿನ ಇರಾನ್‌ ದೂತ ಮೊಹಮ್ಮದ್‌ ಫತಾಲಿಯಿಂದಲೂ ಇದೇ ನುಡಿ

- ಭಾರತದ ಹಡಗಿಂದ ಶುಲ್ಕ ವಸೂಲಿ ಮಾಡಿಲ್ಲ, ಮುಂದೆಯೂ ಮಾಡಲ್ಲ: ಫತಾಲಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಯುದ್ಧ ದೇವರು ಮೆಚ್ಚಲ್ಲ' ಎಂದ ಪೋಪ್ ವಿರುದ್ಧವೇ ತಿರುಗಿಬಿದ್ದ ಟ್ರಂಪ್! ಯೇಸುವಿನ ರೂಪದ ಎಐ ಫೋಟೋ ಹಂಚಿಕೊಂಡು ವಾಗ್ದಾಳಿ!
ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ