
ಟೆರ್ರೆಹೋಟ್(ಜ.14): 8 ತಿಂಗಳ ಗರ್ಭಿಣಿ ಹತ್ಯೆ ಮಾಡಿ, ಆಕೆಯ ಹೊಟ್ಟೆಯನ್ನು ಚಾಕುವಿನಿಂದ ಕೊಯ್ದು, ಮಗುವನ್ನು ಜೀವಂತವಾಗಿ ಹೊರತೆಗೆದಿದ್ದ ಮಹಿಳೆಯೊಬ್ಬಳಿಗೆ ಅಮೆರಿಕ ಸರ್ಕಾರ ಮಂಗಳವಾರ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗಿದೆ. ಇದು 1953ರ ಬಳಿಕ ಅಮೆರಿಕದಲ್ಲಿ ಮಹಿಳೆಯೊಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣವಾಗಿದೆ.
ಮಿಸ್ಸೋರಿಯ ಲಿಸಾ ಮೋಂಟೋಗೊಮೇರಿ (52) ಎಂಬಾಕೆ, 2004ರಲ್ಲಿ 23 ವರ್ಷದ ಬಾಬಿ ಜೋ ಸ್ಟಿನ್ನೆಟ್ಟೆಎಂಬ 8 ತಿಂಗಳ ಗರ್ಭಿಣಿ ಹತ್ಯೆಗೈದು, ಆಕೆಯ ಹೊಟ್ಟೆಬಗೆದು, ಮಗುವನ್ನು ಹೊರತೆಗೆದು ಅದನ್ನು ತನ್ನದೆಂದು ಘೋಷಿಸಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬಂದು ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
ಅದರನ್ವಯ, ಮಂಗಳವಾರ ಇಂಡಿಯಾನ ರಾಜ್ಯದ ಟೆರ್ರೆಹೋಟ್ ಜೈಲಿನಲ್ಲಿ ವಿಷದ ಇಂಜೆಕ್ಷನ್ ನೀಡಿ ಲಿಸಾಗೆ ಶಿಕ್ಷೆ ಜಾರಿಗೊಳಿಸಲಾಯಿತು. ಅದಕ್ಕೂ ಮುನ್ನ ಆಕೆಗೆ ಏನಾದರೂ ಕೊನೆಯ ಆಸೆ ಇದೆಯಾ ಎಂದು ಕೇಳಲಾಯಿತು. ಬಳಿಕ ವೈದ್ಯಕೀಯ ಸಿಬ್ಬಂದಿ ಆಕೆಗೆ ಚುಚ್ಚುಮದ್ದು ನೀಡಿ ಶಿಕ್ಷೆ ಜಾರಿಗೊಳಿಸಿದರು. ಬೆಳಗಿನ ಜಾವ 1.31ಕ್ಕೆ ಲಿಸಾ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದರು.
ಅಮೆರಿಕದ ಹಿಂದಿನ ಹಲವು ಅಧ್ಯಕ್ಷರು ಮರಣದಂಡನೆ ಶಿಕ್ಷೆಗೆ ವಿರೋಧ ಹೊಂದಿದ್ದ ಕಾರಣ ಕಳೆದ 17 ವರ್ಷಗಳಿಂದ ದೇಶದಲ್ಲಿ ಯಾರಿಗೂ ಇಂಥ ಶಿಕ್ಷೆ ಜಾರಿಗೊಳಿಸಲಾಗಿರಲಿಲ್ಲ. ಆದರೆ ಇಂಥ ಶಿಕ್ಷೆಯ ಪರವಾಗಿರುವ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಮತ್ತೆ ಶಿಕ್ಷೆ ಜಾರಿಯ ಪ್ರಕರಣಗಳು ಹೆಚ್ಚಿದ್ದವು. ಮಂಗಳವಾರ ಜಾರಿಯಾದ ಶಿಕ್ಷೆ ಪ್ರಕರಣವು ಜುಲೈ ನಂತರದ 11ನೇ ಪ್ರಕರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ