ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಅಮೆರಿಕದಿಂದ ಅನುಮತಿ ನಕಾರ!

By Kannadaprabha NewsFirst Published Jun 12, 2021, 8:21 AM IST
Highlights

* ಭಾರತದ ಸ್ವದೇಶಿ ನಿರ್ಮಿತ ಕೋವಿಡ್‌ ಲಸಿಕೆ ‘ಕೋವ್ಯಾಕ್ಸಿನ್‌

* ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಅಮೆರಿಕದಿಂದ ಅನುಮತಿ ನಕಾರ 

* ಹೆಚ್ಚುವರಿ ಮಾಹಿತಿ ಜತೆ ಪೂರ್ಣಾವಧಿ ಬಳಕೆ ಅರ್ಜಿ ಸಲ್ಲಿಸಲು ಸೂಚನೆ

ಹೈದರಾಬಾದ್‌(ಜೂ.12): ಭಾರತದ ಸ್ವದೇಶಿ ನಿರ್ಮಿತ ಕೋವಿಡ್‌ ಲಸಿಕೆ ‘ಕೋವ್ಯಾಕ್ಸಿನ್‌’ ತುರ್ತು ಬಳಕೆಗೆ ತನ್ನ ರಾಷ್ಟ್ರದಲ್ಲಿ ಅನುಮತಿ ನೀಡಲು ಅಮೆರಿಕ ನಿರಾಕರಿಸಿದೆ. ಹೆಚ್ಚುವರಿ ಮಾಹಿತಿಯೊಂದಿಗೆ ಪೂರ್ಣಾವಧಿ ಅನುಮತಿ ಪ್ರಕ್ರಿಯೆಯಡಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ಕೋವ್ಯಾಕ್ಸಿನ್‌ ಲಸಿಕೆ ಅಮೆರಿಕದಲ್ಲೂ ಶೀಘ್ರದಲ್ಲೇ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿ ಕೋವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ್ದು, ಆಕ್ಯುಜೆನ್‌ ಎಂಬ ಕಂಪನಿ ಜತೆ ಅಮೆರಿಕದಲ್ಲಿ ಪಾಲುದಾರಿಕೆ ಮಾಡಿಕೊಂಡಿದೆ. ಅಮೆರಿಕದಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬೇಕು ಎಂದು ಆಕ್ಯುಜೆನ್‌ ಅಲ್ಲಿನ ಆಹಾರ ಮತ್ತು ಔಷಧ ಸಂಸ್ಥೆ (ಎಫ್‌ಡಿಎ)ಗೆ ಅರ್ಜಿ ಸಲ್ಲಿಸಿತ್ತು. ತುರ್ತು ಬಳಕೆಯ ಬದಲಿಗೆ ಜೈವಿಕ ಅನುಮತಿ ಅರ್ಜಿ ಮಾರ್ಗದ ಮೂಲಕ ಹೆಚ್ಚುವರಿ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ ಎಂದು ಎಫ್‌ಡಿಎ ಸೂಚಿಸಿದೆ.

ಜೈವಿಕ ಅನುಮತಿ ಅರ್ಜಿ ಎಂಬುದು ಲಸಿಕೆಗಳ ಪೂರ್ಣ ಪ್ರಮಾಣದ ಸಮ್ಮತಿ ಪ್ರಕ್ರಿಯೆಯಾಗಿದೆ. ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದರೆ ಸದ್ಯದಲ್ಲೇ ಕೋವ್ಯಾಕ್ಸಿನ್‌ ಅಮೆರಿಕದಲ್ಲೂ ಲಭಿಸುತ್ತಿತ್ತು. ಆದರೆ ಹೊಸ ದಾರಿಯನ್ನು ಎಫ್‌ಡಿಎ ಸೂಚಿಸಿರುವುದರಿಂದ ಅಲ್ಲಿ ಕೋವ್ಯಾಕ್ಸಿನ್‌ ಬಿಡುಗಡೆ ವಿಳಂಬವಾಗಲಿದೆ.

ಎಫ್‌ಡಿಎ ಸೂಚನೆಯಂತೆಯೇ ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ಆಕ್ಯುಜೆನ್‌ ಹೇಳಿಕೊಂಡಿದೆ

click me!