* 10 ಮಕ್ಕಳನ್ನು ಹೆತ್ತಳು ದಕ್ಷಿಣ ಆಫ್ರಿಕಾ ತಾಯಿ
* 7 ಗಂಡು, 3 ಹೆಣ್ಣಿಗೆ ಜನ್ಮ, ಗಿನ್ನೆಸ್ ದಾಖಲೆ
* 8 ಮಕ್ಕಳು ಹುಟ್ತಾವೆ ಎಂದಿದ್ದ ವೈದ್ಯರು
ಪ್ರಿಟೋರಿಯಾ(ಜೂ.10): ಒಮ್ಮೆ ಒಂದು ಮಗುವನ್ನು ಹೆರುವುದರಲ್ಲೇ ತಾಯಂದಿರಿಗೆ ಪ್ರಾಣ ಬಾಯಿಗೆ ಬಂದಿರುತ್ತದೆ. ಅಂಥದ್ದರಲ್ಲಿ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ಒಮ್ಮೆಗೆ 10 ಮಕ್ಕಳನ್ನು ಹೆರುವ ಮೂಲಕ ಇಡೀ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ್ದಾರೆ. ಗೋಸಿಯಾಮೆ ಥಮರ (37) ಎಂಬ ಮಹಿಳೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮೂಲಕ 7 ಗಂಡು ಮತ್ತು 3 ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆ. ಇದು ಶೀಘ್ರವೇ ಗಿನ್ನೆಸ್ ವಿಶ್ವದಾಖಲೆಯಾಗಿ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಕಳೆದ ತಿಂಗಳಷ್ಟೇ ಮಾಲಿ ದೇಶದ ಹಲಿಮಾ ಎಂಬ 25 ವರ್ಷದ ಮಹಿಳೆ 9 ಮಕ್ಕಳಿಗೆ ಜನ್ಮನೀಡಿದ್ದಳು. ಆ ಬಗ್ಗೆ ಗಿನ್ನೆಸ್ ಸಂಸ್ಥೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಆಕೆಯ ಹೆಸರಿನಲ್ಲಿ ದಾಖಲೆ ಬರೆಯುವ ಮುನ್ನವೇ, ಆಕೆಯ ದಾಖಲೆಯನ್ನು ಇದೀಗ ಗೋಸಿಯಾಮೆ ಮುರಿದಿದ್ದಾರೆ. ಹಲಿಮಾಗೂ ಮುನ್ನ ಅಮೆರಿಕದ ಮಹಿಳೆಯೊಬ್ಬರು 2009ರಲ್ಲಿ 8 ಮಕ್ಕಳನ್ನು ಒಮ್ಮೆಗೆ ಹೆತ್ತಿದ್ದೇ ಇದುವರೆಗಿನ ದಾಖಲೆಯಾಗಿತ್ತು.
ಒಟ್ಟಿಗೆ ಹುಟ್ಟಿ, ಒಟ್ಟಿಗೆ ಬೆಳೆದು 24ನೇ ವರ್ಷದ ಹುಟ್ಟುಹಬ್ಬಕ್ಕೆ ಬೇರೆಯಾದರು
ಭಾರೀ ಅಚ್ಚರಿ:
ಆಫ್ರಿಕಾದ ಟೆಬೊಹೊ ಮತ್ತು ಗೋಸಿಯಾಮೆ ದಂಪತಿಗೆ ಈಗಾಗಲೇ 6 ವರ್ಷದ ಅವಳಿ ಮಕ್ಕಳಿದ್ದಾರೆ. ಅದಾದ ಬಳಿಕ ಮತ್ತೆ ಗೋಸಿಯಾಮೆ ಗರ್ಭಿಣಿಯಾಗಿದ್ದರು. ವೈದ್ಯಕೀಯ ತಪಾಸಣೆ ವೇಳೆ ಹೊಟ್ಟೆಯಲ್ಲಿ 8 ಭ್ರೂಣಗಳಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು. ಗರ್ಭಿಣಿಯಾಗಿದ್ದ ವೇಳೆ ಅಷ್ಟುಮಕ್ಕಳನ್ನು ಹೊರಬೇಕಾಗಿ ಬಂದಿದ್ದ ಕಾರಣ, ಕಾಲು ನೋವು ಮೊದಲಾದ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿತ್ತಂತೆ. ಅದನ್ನು ಹೊರತುಪಡಿಸಿದರೆ ಮತ್ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಇದೀಗ ನೋಡಿದರೆ 8ರ ಬದಲು 10 ಮಕ್ಕಳು ಜನ್ಮತಾಳಿವೆ. ಇದು ದೇವರ ಕೊಡುಗೆ. ನನ್ನ ಸಂತಸಕ್ಕೆ ಪಾರವೇ ಇಲ್ಲ ಎಂದು ಟೆಬೊಹೊ ಪ್ರತಿಕ್ರಿಯಿಸಿದ್ದಾರೆ.