ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ರವಿಶಂಕರ್‌ ಗುರೂಜಿ ನೇತೃತ್ವದಲ್ಲಿ ಸಾಮೂಹಿಕ ಧ್ಯಾನ

Published : Dec 23, 2025, 05:59 AM IST
Sri Sri Ravi Shankar

ಸಾರಾಂಶ

ವಿಶ್ವ ಧ್ಯಾನ ದಿನದ ಅಂಗವಾಗಿ ಗುರುದೇವ್ ಶ್ರೀ ಶ್ರೀ ರವಿಶಂಕರ್‌ ಅವರ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಟ್ರಸ್ಟೀಶಿಪ್ ಕೌನ್ಸಿಲ್ ಸಭಾಂಗಣದಲ್ಲಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ಧ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬೆಂಗಳೂರು / ನ್ಯೂಯಾರ್ಕ್ (ಡಿ.23): ವಿಶ್ವ ಧ್ಯಾನ ದಿನದ ಅಂಗವಾಗಿ ಗುರುದೇವ್ ಶ್ರೀ ಶ್ರೀ ರವಿಶಂಕರ್‌ ಅವರ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಟ್ರಸ್ಟೀಶಿಪ್ ಕೌನ್ಸಿಲ್ ಸಭಾಂಗಣದಲ್ಲಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ಧ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ವೇಳೆ ಈ ಕಾರ್ಯಕ್ರಮವನ್ನು ವಿಶ್ವದ 150 ದೇಶಗಳಲ್ಲೂ ಆಯೋಜಿಸಿದ್ದು, ಅದರಲ್ಲಿ 1.21 ಕೋಟಿಗೂ ಹೆಚ್ಚಿನ ಜನರು ಭಾಗವಹಿಸಿದ್ದರು. ಹೆಚ್ಚುತ್ತಿರುವ ಆತಂಕ, ಒತ್ತಡ, ಸಂಘರ್ಷ ಮತ್ತು ಮಾನಸಿಕ ಆರೋಗ್ಯ ಸವಾಲುಗಳ ನಡುವೆಯೇ ಶಾಂತಿ ಮತ್ತು ಸಹನಶೀಲತೆ ಪ್ರಾಪ್ತಿಗಾಗಿ ನಡೆದ ಈ ಕಾರ್ಯಕ್ರಮವನ್ನು ಜಾಗತಿಕ ಕಲ್ಯಾಣಕ್ಕೆ ಹೊಸ ಆಯಾಮವನ್ನು ನೀಡುವ ಮಹತ್ವದ ಕ್ಷಣ ಎನ್ನಲಾಗುತ್ತಿದೆ.

ಗುರುದೇವ್ ಅವರ ನೇತೃತ್ವದಲ್ಲಿ ನಡೆದ ಧ್ಯಾನ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಜತೆಗೆ, ಭಾರತೀಯರು ಸೇರಿದಂತೆ ಆಫ್ರಿಕಾ, ಯುರೋಪ್, ಏಷ್ಯಾ, ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಖಂಡಗಳಿಂದಲೂ ಜನರು ಆನ್ಲೈನ್ ಮೂಲಕ ಭಾಗವಹಿಸಿದ್ದರು. 60ಕ್ಕೂ ಅಧಿಕ ದೇಶಗಳಿಂದ ವಿದ್ಯಾರ್ಥಿಗಳು, ವೃತ್ತಿಪರರು, ರೈತರು, ಹಾಗೂ ಕೈದಿಗಳವರೆಗೆ ವಿಭಿನ್ನ ಹಿನ್ನೆಲೆಯ ಜನರು ಒಂದೇ ಸಮಯದಲ್ಲಿ ಧ್ಯಾನದ ಅನುಭವಕ್ಕೆ ಸಾಕ್ಷಿಯಾಗಿದ್ದು ಇದರ ವಿಶೇಷತೆ.

ವಿಶ್ವಾದ್ಯಂತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಜಾಗತಿಕ ಸಂಸ್ಥೆಯಾದ ಗ್ಯಾಲಪ್ ಮತ್ತು ದಿ ಆರ್ಟ್ ಆಫ್ ಲಿವಿಂಗ್ ಸಂಯುಕ್ತವಾಗಿ ಧ್ಯಾನ ಮತ್ತು ಸಮಾಜ ಕಲ್ಯಾಣ ಕುರಿತಾದ ಜಾಗತಿಕ ಅಧ್ಯಯನವನ್ನು ಪ್ರಾರಂಭಿಸಿದ್ದು, ಈ ಜಾಗತಿಕ ಚಳವಳಿಗೆ ಮತ್ತೊಂದು ಮಹತ್ವದ ಆಯಾಮವನ್ನು ನೀಡಿದೆ. ವಿಶ್ವ ಧ್ಯಾನ ದಿನದ ಮುನ್ನ ಘೋಷಿಸಲಾದ ಈ ಸಹಕಾರದಡಿಯಲ್ಲಿ, ಗ್ಯಾಲಪ್ ತನ್ನ ಪ್ರಸಿದ್ಧ ‘ಗ್ಯಾಲಪ್ ವರ್ಲ್ಡ್ ಪೋಲ್’ನಲ್ಲಿ ಧ್ಯಾನಕ್ಕೆ ಸಂಬಂಧಿಸಿದ ಹೊಸ ಪ್ರಶ್ನೆಗಳನ್ನು ಸೇರಿಸಲಿದೆ. ಇದರಿಂದ ಮಾನಸಿಕ ಆರೋಗ್ಯ, ಜೀವನ ಮೌಲ್ಯಮಾಪನ ಹಾಗೂ ಸಾಮಾಜಿಕ ಕಲ್ಯಾಣಕ್ಕೆ ಧ್ಯಾನದ ಪಾತ್ರವನ್ನು ವಿಶ್ಲೇಷಿಸಲಿದೆ. ಇದುವರೆಗೆ ಲಭ್ಯವಿರದ ಮಹತ್ತರ ದತ್ತಾಂಶ ಇದರಿಂದ ಸೃಷ್ಟಿಯಾಗಲಿದೆ.

ಗ್ಯಾಲಪ್‌ನ ಇತ್ತೀಚಿನ ಸಂಶೋಧನೆಗಳು, ಜಾಗತಿಕ ಮಟ್ಟದಲ್ಲಿ ಒತ್ತಡ ಮತ್ತು ಚಿಂತೆಯಂತಹ ನಕಾರಾತ್ಮಕ ಭಾವನೆಗಳು ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವುದನ್ನು ತೋರಿಸುತ್ತವೆ. ಇದರಿಂದ ಮಾನಸಿಕ ಆರೋಗ್ಯ ಸುಧಾರಣಾ ಪರಿಹಾರಗಳ ಅಗತ್ಯತೆ ತೀವ್ರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಜಾಗತಿಕ ವೇದಿಕೆಯಲ್ಲಿ, ಭಾರತದ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಪರಂಪರೆ ಅಕ್ಷರಶಃ ಕೇಂದ್ರಸ್ಥಾನದಲ್ಲಿತ್ತು. ಇದು ಕೇವಲ ತತ್ತ್ವಮಟ್ಟದಲ್ಲಷ್ಟೇ ಅಲ್ಲದೇ, ಸಾಕ್ಷ್ಯಾಧಾರಿತ, ಅನುಷ್ಠಾನಯೋಗ್ಯ ಸಾಧನವಾಗಿ ಪ್ರಸ್ತುತಗೊಂಡಿತು. ಆತಂಕ, ದಣಿವು ಮತ್ತು ಸಾಮಾಜಿಕ ಒತ್ತಡಗಳಿಗೆ ಪರಿಹಾರ ಹುಡುಕುತ್ತಿರುವ ಕೋಟ್ಯಾಂತರ ಜನರಿಗೆ ಅದು ಮಾರ್ಗದರ್ಶನ ನೀಡಿತು. ಈ ಅಧ್ಯಯನದ ಜಾಗತಿಕ ಫಲಿತಾಂಶಗಳು 2026ರ ಡಿಸೆಂಬರ್ ಪ್ರಕಟವಾಗಲಿದ್ದು, ಸಾರ್ವಜನಿಕ ನೀತಿ, ಶಿಕ್ಷಣ ಹಾಗೂ ಕಾರ್ಯಕ್ಷೇತ್ರದಲ್ಲಿ ಫಲಿತಾಂಶಗಳು ಉತ್ತಮಗೊಳ್ಳುವ ನಿರೀಕ್ಷೆಯಿದೆ.

ಪ್ರಾಚೀನ ಧ್ಯಾನಾಭ್ಯಾಸ

ಇದಕ್ಕೂ ಮುನ್ನ, ಡಿ.19ರಂದು ಭಾರತ, ಶ್ರೀಲಂಕಾ, ಅಂಡೋರಾ, ಮೆಕ್ಸಿಕೋ, ನೇಪಾಳ ಸೇರಿದಂತೆ ಹಲವು ಸದಸ್ಯ ರಾಷ್ಟ್ರಗಳ ಶಾಶ್ವತ ಪ್ರತಿನಿಧಿಗಳು ಮತ್ತು ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಸೇರಿ ಈ ಪ್ರಾಚೀನ ಧ್ಯಾನಾಭ್ಯಾಸವನ್ನು ನಡೆಸಿದರು. ಜಾಗತಿಕ ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುವಲ್ಲಿ ಧ್ಯಾನದ ಪ್ರಸ್ತುತತೆಯನ್ನು ಅವರು ಹಂಚಿಕೊಂಡರು. ಈ ಸಂದರ್ಭದಲ್ಲಿ ಗುರುದೇವರ ಮುಖ್ಯ ಭಾಷಣ ಮತ್ತು ಮಾರ್ಗದರ್ಶಿತ ಧ್ಯಾನವು, ಭಾರತದ ಪರಂಪರೆಯಲ್ಲಿನ ಈ ಅಭ್ಯಾಸವನ್ನು ಜಾಗತಿಕ ರಾಜತಾಂತ್ರಿಕತೆಯಲ್ಲಿ ಹೃದಯಸ್ಪರ್ಶಿಯಾಗಿ ತಲುಪಿಸಿದ ಮಹತ್ವದ ಕ್ಷಣವಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೋಂಡಿ ಬೀಚಲ್ಲಿ ಗುಂಡಿಗೂ ಮುನ್ನ ಬಾಂಬ್‌ ಎಸೆದಿದ್ದ ಉಗ್ರ ಅಪ್ಪ-ಮಗ
ಮಸ್ಕ್‌ರ ಸ್ಟಾರ್‌ಲಿಂಕ್‌ ಉಪಗ್ರಹಗಳ ಧ್ವಂಸಕ್ಕೆ ರಷ್ಯಾ ಶಸ್ತ್ರ ತಯಾರಿ?