
ವಾರ್ಸಾ(ಮಾ.28): ಪೋಲೆಂಡ್‌ಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್ ನಿರಾಶ್ರಿತರನ್ನು ಭೇಟಿ ಮಾಡಿದರು. ಈ ವೇಳೆ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ‘ಕಟುಕ’ ಎಂದು ಕರೆದಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದ ನಂತರ ಲಕ್ಷಾಂತರ ಜನರು ಉಕ್ರೇನ್ ತೊರೆದು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ.
ನಿರಾಶ್ರಿತರನ್ನು ಭೇಟಿಯಾದ ಸಂದರ್ಭದಲ್ಲಿ ಪುಟಿನ್ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಕ್ಕೆ ‘ಅವನೊಬ್ಬ ಕಟುಕ’ ಎಂದು ಹೇಳಿದ್ದಾರೆ.
‘ಉಕ್ರೇನ್ ಆಕ್ರಮಣದಲ್ಲಿ ರಷ್ಯಾ ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ ಎಂಬುದು ಖಚಿತವಾಗಿಲ್ಲ. ಆದರೆ ಪ್ರಸ್ತುತ ರಷ್ಯಾದ ಗಮನ ಸಂಪೂರ್ಣವಾಗಿ ಡೋನ್ಬಾಸ್ ಪ್ರದೇಶದ ಮೇಲೆ ಕೇಂದ್ರೀಕೃತವಾಗಿದೆ’ ಎಂದು ಅವರು ಹೇಳಿದ್ದಾರೆ.
ಖಾರ್ಕೀವ್ ಅಣು ಕೇಂದ್ರದ ಮೇಲೆ ರಷ್ಯಾ ಮತ್ತೆ ದಾಳಿ
ಖಾರ್ಕೀವ್‌ನಲ್ಲಿರುವ ಉಕ್ರೇನ್‌ನ ಪರಮಾಣು ಸಂಶೋಧನಾ ಕೇಂದ್ರವನ್ನು ಗುರಿಯಾಗಿಸಿಕೊಂಡು ರಷ್ಯಾ ತನ್ನ ಶೆಲ್ ದಾಳಿಯನ್ನು ಯುದ್ಧದ 32ನೇ ದಿನವೂ ಮುಂದುವರೆಸಿದೆ. ಖಾರ್ಕೀವ್‌ನಲ್ಲಿರುವ ಇನ್ಸಿ$್ಟಟ್ಯೂಟ್ ಆಫ್ ಫಿಸಿಕ್ಸ್ ಅಂಡ್ ಟೆಕ್ನಾಲಜಿ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ರಷ್ಯಾ ದಾಳಿ ಮಾಡಿದೆ ಎಂದು ರಾಜ್ಯ ಪರಮಾಣು ನಿಯಂತ್ರಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಖಾರ್ಕೀವ್‌ನ ಅಣು ಸಂಶೋಧನಾ ಕೇಂದ್ರದ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆದರೆ ಯಾವುದೇ ವಿಕಿರಣ ಸೋರಿಕೆ ಸಂಭವಿಸಿರಲಿಲ್ಲ. ರಷ್ಯಾ ಮತ್ತೆ ಮತ್ತೆ ದಾಳಿ ನಡೆಸುತ್ತಿರುವುದು ವಿಕಿರಣ ಸೋರಿಕೆಯ ಭೀತಿ ತಂದೊಡ್ಡಿದೆ. ರಷ್ಯಾದ ಆಕ್ರಮಣ ಆರಂಭವಾದಾಗಿನಿಂದಲೂ ಖಾರ್ಕೀವ್ ಮೇಲೆ ರಷ್ಯಾದ ಪಡೆಗಳು ದಾಳಿ ನಡೆಸುತ್ತಲೇ ಇವೆ. ಇಲ್ಲಿನ ಹಲವಾರು ಕಟ್ಟಡಗಳು ದಾಳಿಯಿಂದಾಗಿ ನಾಶಗೊಂಡಿವೆ.
ಲಿವಿವ್ ಮೇಲೂ ದಾಳಿ:
ಉಕ್ರೇನ್‌ನ ಲಿವಿವ್ ನಗರದ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಈ ನಡುವೆ, ಲಿವಿವ್ ನೆರೆಯ ಪೋಲೆಂಡ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ನೀಡಿದ್ದ ಸಮಯದಲ್ಲೇ ರಷ್ಯಾ ರಾಕೆಟ್ ದಾಳಿ ನಡೆಸಿದ್ದು, ಉಕ್ರೇನ್‌ನ ಯಾವ ಭಾಗದ ಮೇಲಾದರೂ ದಾಳಿ ನಡೆಸಲು ರಷ್ಯಾ ಸಿದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ. ಹಲವು ಬಾರಿ ನಗರದ ಮೇಲೆ ದಾಳಿ ನಡೆದಿದೆ ಎಂದು ಗವರ್ನರ್ ಮ್ಯಾಕ್ಸಿಮ್ ಕೊಜಿಟ್ಸಕಿ ಹೇಳಿದ್ದಾರೆ. ಈ ಹಿಂದೆಯೂ ಲಿವಿವ್ ನಗರ ಮೇಲೆ ಏರ್‌ಸ್ಟೆ್ರೖಕ್ ನಡೆಸಿದ್ದ ರಷ್ಯಾ ವಿಮಾನ ದುರಸ್ತಿ ಕೇಂದ್ರವನ್ನು ನಾಶ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ