Russia Ukraine Crisis: ಕೀವ್‌, ಖಾರ್ಕೀವ್‌ ಮೇಲೆ ಕ್ಲಸ್ಟರ್‌ ಬಾಂಬ್‌: ಅಣ್ವಸ್ತ್ರ ಸನ್ನದ್ಧ ಸ್ಥಿತಿಯಲ್ಲಿ ರಷ್ಯಾ!

By Kannadaprabha News  |  First Published Mar 1, 2022, 7:46 AM IST

*ಅಧ್ಯಕ್ಷ ಪುಟಿನ್‌ ಸೂಚನೆ ಬೆನ್ನಲ್ಲೇ ದಾಳಿ, ದಾಳಿ ತಡೆಗೆ ಸರ್ವಸಿದ್ಧತೆ
*ಭೂಮಿ, ಆಗಸ, ಜಲ ಗಡಿಯ ಕ್ಷಿಪಣಿಗಳು ರಕ್ಷಣೆ, ದಾಳಿಗೆ ಸಜ್ಜು
*ಪರಮಾಣು ಅಸ್ತ್ರ ರಹಿತ ದೇಶ ಸ್ಥಾನಮಾನ ಹಿಂಪಡೆದ ಬೆಲಾರಸ್‌
*ಕೀವ್‌ನ ಮಿಲಿಟರಿ ರಾಡಾರ್‌ ಕೇಂದ್ರ ಧ್ವಂಸ
*ಖಾರ್ಕೀವ್‌ನ ನಾಗರಿಕ ಪ್ರದೇಶದಲ್ಲೇ ಬಾಂಬ್‌ ಮೊರೆತ


ಕೀವ್‌  (ಮಾ. 01): ನ್ಯಾಟೋ ದೇಶಗಳ ಆಕ್ರಮಣಕಾರಿ ಹೇಳಿಕೆಗೆ ಪ್ರತಿಯಾಗಿ ನಮ್ಮ ಅಣ್ವಸ್ತ್ರ ಪಡೆಗಳನ್ನು ಸಜ್ಜುಗೊಳಿಸಿ ಎಂಬ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೂಚನೆ ಬೆನ್ನಲ್ಲೇ, ರಷ್ಯಾ ಸೇನೆ ತನ್ನ ಅಣ್ವಸ್ತ್ರಗಳನ್ನು ಯಾವುದೇ ಕ್ಷಣದಲ್ಲಿ ಬಳಕೆಗೆ ಸಿದ್ಧ ಎನ್ನುವ ಹಂತಕ್ಕೆ ತಲುಪಿಸಿದೆ. ಅದಕ್ಕೆ ಪೂರಕವಾಗಿ ರಷ್ಯಾದ ನೆರೆಯ ಮಿತ್ರ ದೇಶ ಬೆಲಾರಸ್‌, ಪರಮಾಣು ಅಸ್ತ್ರ ರಹಿತ ದೇಶ ಎಂಬ ತನ್ನ ಸ್ಥಾನದಿಂದ ಹಿಂದೆ ಸರಿದಿದೆ. ಈ ಮೂಲಕ ರಷ್ಯಾಕ್ಕೆ ತನ್ನ ದೇಶದಿಂದ ಪರಮಾಣು ದಾಳಿ ನಡೆಸಲು ವೇದಿಕೆ ಒದಗಿಸಿಕೊಟ್ಟಿದೆ.

ಒಂದು ವೇಳೆ ರಷ್ಯಾ ಮತ್ತು ನ್ಯಾಟೋ ಪಡೆಗಳು ಪರಸ್ಪರ ಅಣ್ವಸ್ತ್ರ ದಾಳಿ ನಡೆಸಿದ್ದೇ ಆದಲ್ಲಿ ಅದು ವಿಶ್ವ ಇದುವರೆಗೆ ಕಂಡುಕೇಳರಿಯದ ಅನಾಹುತಕ್ಕೆ ಸಾಕ್ಷಿಯಾಗುವ ಕಾರಣ, ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ, ಭೀತಿಗೆ ಕಾರಣವಾಗಿದೆ.

Latest Videos

undefined

ರಷ್ಯಾ ಇಡಿ ವಿಶ್ವದಲ್ಲಿಯೇ ಅತಿ ಹೆಚ್ಚು (6200) ಅಣ್ವಸ್ತ್ರಗಳನ್ನು ಹೊಂದಿದ್ದು, ಅದಕ್ಕೆ ಪ್ರತಿಯಾಗಿ ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ಕೂಡಾ ಒಟ್ಟಾರೆ ಹೆಚ್ಚು ಕಡಿಮೆ ಇಷ್ಟೇ ಸಂಖ್ಯೆಯ ಅಣ್ವಸ್ತ್ರಗಳನ್ನು ಹೊಂದಿವೆ. ಹೀಗಾಗಿಯೇ ಪರಮಾಣು ದಾಳಿಯ ಮಾತುಗಳು ಹೊಸ ತಲ್ಲಣಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Russia Ukraine Crisis: 3.5 ತಾಸು ಸುದೀರ್ಘ ಮಾತುಕತೆ: ಸಂಧಾನ ಅಪೂರ್ಣ!

ಸನ್ನದ್ಧ ಸ್ಥಿತಿಗೆ: ಭಾನುವಾರ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ‘ನ್ಯಾಟೋ ದೇಶಗಳ ಆಕ್ರಮಣಕಾರಿ ಹೇಳಿಕೆಗಳು ಮತ್ತು ನಮ್ಮ ಮೇಲೆ ಹೇರಲಾದ ಆರ್ಥಿಕ ದಿಗ್ಭಂದನಗಳು ನಾವು ಅಣ್ವಸ್ತ್ರಗಳನ್ನು ಸನ್ನದ್ಧ ಮಾಡಿಡಬೇಕಾದ ಸ್ಥಿತಿಗೆ ತಂದಿದೆ. ಹೀಗಾಗಿ ತಕ್ಷಣವೇ ನಮ್ಮ ಅಣ್ವಸ್ತ್ರ ಪಡೆಗಳನ್ನು ಸನ್ನದ್ಧ ಸ್ಥಿತಿಗೆ ತನ್ನಿ ಎಂದು ಸೂಚಿಸಿದ್ದರು. 

ಅದರ ಬೆನ್ನಲ್ಲೇ ರಷ್ಯಾದ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ತಮ್ಮ ಬಳಿ ಇರುವ ಅಣ್ವಸ್ತ್ರಗಳನ್ನು ಯಾವುದೇ ಕ್ಷಣದಲ್ಲಿ ತಮ್ಮ ದೇಶದ ಮೇಲೆ ನಡೆಯುವ ದಾಳಿಯನ್ನು ತಡೆಯುವ ಅಥವಾ ಅಗತ್ಯ ಬಿದ್ದರೆ ದಾಳಿ ನಡೆಸುವ ಸ್ಥಿತಿಗೆ ಸನ್ನದ್ಧಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

ಯಾರ ಬಳಿ ಎಷ್ಟು?: ರಷ್ಯಾದ ಬಳಿ 6200 ಪರಮಾಣು ಅಸ್ತ್ರಗಳಿದ್ದು, ಈ ಪೈಕಿ 1200 ಅಣ್ವಸ್ತ್ರ ಸಿಡಿತಲೆಗಳಾಗಿದ್ದು ಅವು ಸನ್ನದ್ಧ ಸ್ಥಿತಿಯಲ್ಲಿವೆ. ಇನ್ನು ಅಮೆರಿಕದ ಬಳಿಕ 3750 ಅಣ್ವಸ್ತ್ರಗಳಿದ್ದು, ಈ ಪೈಕಿ 150-200 ಅಣ್ವಸ್ತ್ರ ಸಿಡಿತಲೆಗಳು 5 ನ್ಯಾಟೋ ದೇಶಗಳ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿವೆ. ಇನ್ನು ರಷ್ಯಾ ವಿರುದ್ಧ ಸಿಡಿದೆದ್ದಿರುವ ಫ್ರಾನ್ಸ್‌ ಮತ್ತು ಬ್ರಿಟನ್‌ ಬಳಿ ಒಟ್ಟಾರೆ 500ಕ್ಕೂ ಹೆಚ್ಚು ಅಣ್ವಸ್ತ್ರಗಳಿವೆ.

ಇದನ್ನೂ ಓದಿ: Russia Ukraine Crisis: ರಷ್ಯಾದಲ್ಲಿ ನಿರ್ಬಂಧದ ಪರಿಣಾಮ ನಿಧಾನ ಗೋಚರ

ಕೀವ್‌, ಖಾರ್ಕೀವ್‌ ಮೇಲೆ ರಷ್ಯಾ ಕ್ಲಸ್ಟರ್‌ ಬಾಂಬ್‌: 11 ಬಲಿ: ಉಕ್ರೇನ್‌-ರಷ್ಯಾ ಸಂಧಾನ ಮಾತುಕತೆ ಅಷ್ಟುಫಲ ನೀಡದೇ ಇರುವ ಬೆನ್ನಲ್ಲೇ ಉಕ್ರೇನ್‌ ರಾಜಧಾನಿ ಕೀವ್‌ ಹಾಗೂ ದೇಶದ 2ನೇ ಅತಿ ದೊಡ್ಡ ನಗರ ಖಾರ್ಕೀವ್‌ ಮೇಲೆ ರಷ್ಯಾ ಭಾರೀ ಬಾಂಬ್‌ ದಾಳಿ ನಡೆಸಿದೆ. ಖಾರ್ಕೀವ್‌ನಲ್ಲಿ 11 ಜನರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದಾರೆ.

ಕೀವ್‌ ನಗರ ಬೇಗ ತೊರೆಯಿರಿ ಎಂದು ಜನರಿಗೆ ರಷ್ಯಾ ಸೋಮವಾರ ಬೆಳಗ್ಗೆ ಎಚ್ಚರಿಕೆ ನೀಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ನಿಷೇಧಕ್ಕೆ ಒಳಗಾಗಿರುವ ಕ್ಲಸ್ಟರ್‌ ಬಾಂಬನ್ನು ರಷ್ಯಾ ಹಾಕಿದೆ. ಈ ದಾಳಿಗೆ ಉಕ್ರೇನ್‌ನ ಮಿಲಿಟರಿ ರಾಡಾರ್‌ ಸಂಪರ್ಕ ಕೇಂದ್ರ ಧ್ವಂಸಗೊಂಡಿದೆ ಎಂದು ವರದಿಗಳು ಹೇಳಿವೆ.

ಈ ನಡುವೆ, ಇದೇ ಕ್ಲಸ್ಟರ್‌ ಬಾಂಬ್‌ ಬಳಸಿ ಖಾರ್ಕೀವ್‌ ನಗರದ ಜನವಸತಿ ಪ್ರದೇಶದ ಮೇಲೆ ರಷ್ಯಾ ದಾಳಿ ಮಾಡಿದೆ. 11 ಜನರು ಸಾವನ್ನಪ್ಪಿ, 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ತುರ್ತು ಕರೆ ಮಾಡಿ ರಕ್ಷಣೆಗೆ ವಾಹನಗಳನ್ನೂ ಕರೆತರಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ದಾಳಿ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ಹೇಳಿದೆ.

ಇದಕ್ಕೂ ಮುನ್ನ ಉಭಯ ದೇಶಗಳ ಮಧ್ಯೆ ಮಾತುಕತೆ ನಡೆಯುವ ವೇಳೆ ಕೀವ್‌ ಹಾಗೂ ಖಾರ್ಕೀವ್‌ನಲ್ಲಿ ಶಾಂತ ಸ್ಥಿತಿ ನೆಲೆಸಿತ್ತು. ಮಾತುಕತೆ ಮುಗಿದ ಬಳಿಕ ಮತ್ತೆ ಬಾಂಬ್‌ ಮೊರೆತ ಆರಂಭವಾಗಿದೆ.

click me!