* ರಕ್ಷಣೆಯಾಗುವ ಆಸೆಯೇ ಕಮರಿಹೋಗಿದೆ
* ನೀರು, ವಿದ್ಯುತ್ ಇಲ್ಲ, ಅಂಗಡಿಗಳಲ್ಲಿ ಕಾರ್ಡ್ ಪಡೆಯುತ್ತಿಲ್ಲ
* ಸುಮಿಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ಗೋಳಿನ ಕಥೆ
ನವದೆಹಲಿ(ಮಾ.08): ಉಕ್ರೇನಿನ ಸುಮಿಯಲ್ಲಿ ರಷ್ಯಾ ಬಾಂಬ್ ಶೆಲ್ ದಾಳಿಯನ್ನು ತೀವ್ರಗೊಳಿಸಿದ್ದು, ಅಲ್ಲಿ ಸಿಲುಕಿರುವ 700 ಕ್ಕೂ ಹೆಚ್ಚು ಭಾರತೀಯರ ಪರಿಸ್ಥಿತಿ ಅಯೋಮಯವಾಗಿದೆ. ‘ನೀರು, ಆಹಾರ ಹಾಗೂ ವಿದ್ಯುತ್ ಪೂರೈಕೆಯಿಲ್ಲ. ಅಂಗಡಿಗಳು ಎಟಿಎಂ ಕಾರ್ಡುಗಳನ್ನು ಸ್ವೀಕರಿಸುತ್ತಿಲ್ಲ. ನಗದು ಹಣ ಪಡೆದುಕೊಳ್ಳಲು ಹೋದರೆ ಎಟಿಎಂಗಳಲ್ಲೇ ಹಣವಿಲ್ಲ. ಇದರಿಂದಾಗಿ ಆಹಾರ, ಅಗತ್ಯ ವಸ್ತುಗಳನ್ನು ಖರೀದಿಸಲೂ ನಮಗೆ ಸಾಧ್ಯವಾಗುತ್ತಿಲ್ಲ’ಎಂದು ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟವನ್ನು ತೋಡಿಕೊಂಡಿದ್ದಾರೆ. ‘ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವು 10 ದಿನಗಳಿಂದ ಕಾಯುತ್ತಿದ್ದೇವೆ. ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಲಾಗುತ್ತದೆ ಎಂಬ ಭರವಸೆಯೂ ನಮಲ್ಲಿ ಉಳಿದಿಲ್ಲ’ ಎಂದು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
‘ನಾವೆಲ್ಲ ಕಾಲ್ನಡಿಗೆಯಲ್ಲೇ ಗಡಿಯತ್ತ ಪ್ರಯಾಣ ಮಾಡಲು ಸಿದ್ಧರಿದ್ದೆವು. ಆದರೆ ರಷ್ಯಾದ ವೈಮಾನಿಕ ದಾಳಿಗಳು ತೀವ್ರವಾಗುತ್ತಿದ್ದಂತೆ ಭಾರತ ಸರ್ಕಾರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿಂದ ಹೊರಡದೇ ಇರಲು ಸೂಚನೆ ನೀಡಿತ್ತು. ಹೀಗಾಗಿ ನಾವು ಸುಮಿಯಲ್ಲೇ ಇದ್ದೇವೆ. ಆದರೆ ಇಂತಹ ವಿಕಟ ಪರಿಸ್ಥಿತಿಯಲ್ಲಿ ಇನ್ನೆಷ್ಟುದಿನಗಳಿರಲು ಸಾಧ್ಯ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಸುಮಿ ರಷ್ಯಾದ ಗಡಿಯ ಸಮೀಪದಲ್ಲಿದ್ದರೂ ಯುದ್ಧದ ತೀವ್ರತೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಗಡಿಯತ್ತ ಬರಲು ಸಾಧ್ಯವಾಗುತ್ತಿಲ್ಲ. ಆಹಾರದ ತೀವ್ರ ಕೊರತೆಯಿದ್ದು, ಹೊರಗಿನ ಮಂಜನ್ನು ತಂದು ಕರಗಿಸಿ ನೀರು ಮಾಡಿಕೊಂಡು ಕುಡಿಯುತ್ತಿದ್ದೇವೆ. ನಮ್ಮನ್ನು ತಕ್ಷಣ ಇಲ್ಲಿಂದ ಪಾರು ಮಾಡಿ ಎಂದು ವಿದ್ಯಾರ್ಥಿಗಳು ವಿಡಿಯೋ ಮಾಡಿ ಸರ್ಕಾರಕ್ಕೆ ವಿನಂತಿಸಿಕೊಂಡಿದ್ದರು. ತದನಂತರ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತವಾಗಿ ಪೋಲ್ಟವಾ ಮೂಲಕ ಪಶ್ಚಿಮ ಗಡಿಗಳಿಗೆ ಸ್ಥಳಾಂತರಿಸಲು ಪೋಲ್ಟಾವಾ ನಗರದಲ್ಲಿ ತಂಡವನ್ನು ನಿಯೋಜಿಸಿದ್ದು, ಶೀಘ್ರದಲ್ಲೇ ಸುಮಿಯಿಂದ ಹೊರಡಲು ಸಿದ್ಧರಾಗಿರಲು ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಆದರೆ ಈಗಾಗಲೇ ಯುದ್ಧ ಆರಂಭವಾಗಿ 10 ದಿನಗಳು ಕಳೆದರೂ ಉಕ್ರೇನಿನಲ್ಲಿರುವ ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ರವಾನಿಸಲು ಮಾನವೀಯ ಕಾರಿಡಾರ್ ನಿರ್ಮಾಣ ಮಾಡಲು ಎರಡೂ ಪಕ್ಷದವರು ಒಲವು ತೋರುತ್ತಿಲ್ಲ. ಹೀಗಾಗಿ ಸಂಘರ್ಷ ವಲಯದಲ್ಲಿರುವ ಭಾರತೀಯರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.
ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮನೆಗಳಲ್ಲಿ ಹಬ್ಬದ ವಾತಾವರಣ
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಪಟ್ಟಣದ ಇಬ್ಬರು ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಮೂಲಕ ರಕ್ಷಿಸಿ ಅವರ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿದ್ದು, ಎರಡು ಕುಟುಂಬಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ಧ ಆರಂಭವಾದಾಗಿನಿಂದ ತಾಯ್ನಾಡಿಗೆ ಬರಳಿ ಬರಲು ಯತ್ನಿಸಿ ವಿಫಲರಾಗಿ ಕಳೆದ 10 ದಿನಗಳಿಂದ ಸಮಯಕ್ಕೆ ಊಟ, ತಿಂಡಿ ನೀರು ಸಿಗದೆ ಅವ್ಯವಸ್ಥೆಯಲ್ಲಿ ಹಾಗೂ ಭಯದಲ್ಲೆ ಕಾಲ ಕಳೆದಿದ್ದ ಸಾವಿರಾರು ವಿದ್ಯಾರ್ಥಿಗಳಲ್ಲಿ ಪಟ್ಟಣದ ತನುಶ್ರೀ ಹಾಗೂ ಸುಭಾ ಎಂಬ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳೂ ಸಿಲುಕಿದ್ದರು. ಎರಡು ಕುಟುಂಬಸ್ಥರ ನಡುವೆ ನಿತ್ಯ ಸಂಪರ್ಕದಲ್ಲಿದ್ದರೂ ಆತಂಕದಲ್ಲೆ ತಮ್ಮ ಮಕ್ಕಳು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಬರಲು ದೇವರಲ್ಲಿ ಪ್ರಾರ್ಥನೆಯಲ್ಲಿದ್ದರು.
ಹತ್ತು ದಿನಗಳಿಂದ ಭಾರತದ ಸರ್ಕಾರ ಭಾರತದ ವಿದ್ಯಾರ್ಥಿಗಳನ್ನು ಏರ್‌ಲಿಪ್ಟ್ ಮಾಡುತ್ತಿದ್ದಾಗ ಅದರಲ್ಲಿ ನಮ್ಮ ಮಕ್ಕಳಿದ್ದಾರೆಯೇ ಎಂಬುದನ್ನು ಕಾದು ಕಾದು ಬಸವಳಿದಿದ್ದರು. ಕೊನೆಗೂ ಭಾನುವಾರ ಮನೆಗಳಿಗೆ ಬಂದಾಗ ಮನೆಯವರಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು. ವಿಷಯ ತಿಳಿದು ಸೋಮವಾರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್ ಮತ್ತು ಕೆ.ಚಂದ್ರಾರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಎರಡೂ ಕುಟುಂಬಗಳ ಮನೆಗಳಿಗೆ ತೆರಳಿ ಇಬ್ಬರೂ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಧೈರ್ಯ ತುಂಬಿದರಲ್ಲದೆ ಭಾರತ ಸರ್ಕಾರ ನಿಮ್ಮ ಎಲ್ಲಾ ನೆರವಿಗೆ ಇದೆ ಎಂದು ತಿಳಿಸಿದರು. ಉಕ್ರೇನ್‌ನಲ್ಲಿನ ಹತ್ತುದಿನಗಳ ಕಹಿ ಅನುಭವವನ್ನು ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ತನುಶ್ರೀ ಹಂಚಿಕೊಂಡರು.