
ಕೀವ್(ಮಾ.08): ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದ ಆರಂಭವಾಗಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಿಯೋಗಗಳು ಸೋಮವಾರ 3ನೇ ಸುತ್ತಿನ ಶಾಂತಿ ಮಾತುಕತೆ ಆರಂಭಿಸಿವೆ. ಈ ವೇಳೆ ಉಕ್ರೇನ್‌ಗೆ ರಷ್ಯಾ ನಾಲ್ಕು ಷರತ್ತುಗಳನ್ನು ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದ ಮಾತುಕತೆಯಲ್ಲಿ ಉಭಯ ದೇಶಗಳು ಪರಸ್ಪರ ಹಲವು ಷರತ್ತುಗಳನ್ನು ವಿಧಿಸಿದ್ದರಿಂದ ಸಂಧಾನ ಮಾತುಕತೆ ವಿಫಲವಾಗಿತ್ತು. ಎರಡನೇ ಮಾತುಕತೆಯ ವೇಳೆ ಉಕ್ರೇನ್ ವಿಧಿಸಿದ್ದ ಷರತ್ತುಗಳಿಗೆ ರಷ್ಯಾ ಒಪ್ಪಿಗೆ ನೀಡದಿದ್ದರೂ, ನಾಗರಿಕರ ಸ್ಥಳಾಂತರ ವೇಳೆ ಕದನ ವಿರಾಮ ಘೋಷಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಆದರೆ ಮರಿಯುಪೋಲ್‌ನಲ್ಲಿ ರಷ್ಯಾ ನಡೆಸಿದ ದಾಳಿಯಿಂದಾಗಿ ಈ ಒಪ್ಪಂದವು ಮುರಿದುಬಿದ್ದಿತ್ತು.
4 ಷರತ್ತುಗಳು
1. ತಕ್ಷಣ ಸೇನಾ ಕಾರ್ಯಾಚರಣೆ ನಿಲ್ಲಿಸಬೇಕು:
ನಾವು ಉಕ್ರೇನ್ ಅನ್ನು ನಿಶ್ಶಸ್ತ್ರೀಕರಣ ಮಾಡುವ ಹಂತದಲ್ಲಿದ್ದೇವೆ. ಒಂದು ವೇಳೆ ಉಕ್ರೇನ್ ತನ್ನ ಸೇನಾ ಕಾರ್ಯಚರಣೆ ಸ್ಥಗಿತಗೊಳಿಸಿದರೆ ನಾವು ಒಂದೇ ಒಂದು ಗುಂಡನ್ನೂ ಹಾರಿಸುವುದಿಲ್ಲ ಎಂದು ಭರವಸೆ ನೀಡುತ್ತೇವೆ.
2. ಯಾವುದೇ ಗುಂಪು ಸೇರಬಾರದು
ಉಕ್ರೇನ್ ತಟಸ್ಥವಾಗಿ ಉಳಿಯುವ ನಿರ್ಧಾರ ಪ್ರಕಟಿಸಬೇಕು. ಯಾವುದೇ ಹಂತದಲ್ಲಿ ತಾನು ಯಾವುದೇ ಹೊಸ ಸಂಘಟನೆಯನ್ನು ಸೇರುವುದಿಲ್ಲ ಎಂದು ಸಂವಿಧಾನಕ್ಕೆ ತಿದ್ದುಪಡಿ ತರಬೇಕು.
3. ಬಂಡುಕೋರ ರಾಜ್ಯಕ್ಕೆ ಮಾನ್ಯತೆ
ಬಂಡುಕೋರರ ವಶದಲ್ಲಿರುವ ಪ್ರಾಂತ್ಯಗಳಾದ ಡೊನೆಸ್ಟೆಕ್ ಮತ್ತು ಲುಗಾನ್ಸ್$್ಕ ಗಳನ್ನು ಸ್ವತಂತ್ರ್ಯ ರಾಜ್ಯಗಳೆಂದು ಘೋಷಿಸಿ ಅವುಗಳಿಗೆ ಮಾನ್ಯತೆ ನೀಡಬೇಕು.
4. ಕ್ರೆಮಿಯಾಕ್ಕೆ ಮಾನ್ಯತೆ
2014ರಲ್ಲಿ ತಾನು ಉಕ್ರೇನ್ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ಕ್ರೆಮಿಯಾವನ್ನು ರಷ್ಯಾದ ಭಾಗವೆಂದು ಒಪ್ಪಬೇಕು. ಇವುಗಳಿಗೆ ಒಪ್ಪಿದರೆ ತಕ್ಷಣವೇ ನಾವು ಯುದ್ಧ ನಿಲ್ಲಿಸಲಿದ್ದೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ