
ಲಂಡನ್(ಏ.15): ಬೆಂಗಳೂರಿನ ಇಸ್ಫೋಸಿಸ್ ಕಂಪನಿಯ ಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಬ್ರಿಟನ್‌ನ ಆರ್ಥಿಕ ಸಚಿವ ರಿಷಿ ಸುನಾಕ್ ಅವರ ಜನಪ್ರಿಯತೆಯ ರೇಟಿಂಗ್ ಮೊಟ್ಟಮೊದಲ ಬಾರಿ ಋುಣಾತ್ಮಕಕ್ಕೆ (ನೆಗೆಟಿವ್) ಕುಸಿದಿದೆ. ಬ್ರಿಟನ್‌ನ ಮುಂದಿನ ಪ್ರಧಾನಿ ಅಭ್ಯರ್ಥಿಯೆಂದೇ ಬಿಂಬಿತರಾದ ರಿಷಿಯ ರಾಜಕೀಯ ಭವಿಷ್ಯಕ್ಕೆ ಇದು ಭಾರೀ ಪೆಟ್ಟು ನೀಡಿದೆ.
ಸುನಾಕ್ ಪತ್ನಿ ಅಕ್ಷತಾ ಮೂರ್ತಿ ಅವರು ನಾನ್ ಡೊಮಿಸಿಲ್ (ನಿವಾಸೇತರ) ಸ್ಟೇಟಸ್ ಬಳಸಿ ಕೋಟ್ಯಾಂತರ ರು. ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡಿದ್ದವು. ಇದರ ಬೆನ್ನಲ್ಲೇ ರಿಷಿಯ ಜನಪ್ರಿಯತೆ -20ಕ್ಕೆ ಇಳಿಕೆಯಾಗಿದೆ ಎಂದು ‘ಸಾವಂತಾ ರೋಮ್‌ರೆಸ್’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ. ರಿಷಿಯ ಜನಪ್ರಿಯತೆ ಒಂದೇ ತಿಂಗಳಿನಲ್ಲಿ 26 ಅಂಕ ಕುಸಿದಿದ್ದು, ಇದು ಪ್ರಸ್ತುತ ಪ್ರಧಾನಿ ಬೋರಿಸ್ ಜಾನ್ಸ್‌ನ್‌ಗಿಂತಲೂ ಕಡಿಮೆಯಾಗಿದೆ.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಹಲವಾರು ಆರ್ಥಿಕ ನೆರವು ಘೋಷಿಸಿ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ್ದ ಹಿನ್ನೆಲೆಯಲ್ಲಿ ರಿಷಿಯವರ ಜನಪ್ರಿಯತೆಯಲ್ಲಿ ಭಾರೀ ಏರಿಕೆಯಾಗಿದ್ದು, ಅವರು ಭವಿಷ್ಯದ ಪ್ರಧಾನಿ ಎಂದೇ ಬಿಂಬಿತರಾಗಿದ್ದರು. ಆದರೆ ಬ್ರಿಟನ್‌ನಲ್ಲಿ ಜೀವನ ವೆಚ್ಚದ ಏರಿಕೆ, ಪತ್ನಿ ಅಕ್ಷತಾಳ ತೆರಿಗೆ ವಿವಾದ, ಲಾಕ್ಡೌನ್ ಸಮಯದಲ್ಲಿನ ಪಾರ್ಟಿ ಮಾಡಿ ಕಾನೂನು ಉಲ್ಲಂಘಿಸಿದ್ದು ಮೊದಲಾದವುಗಳ ಕಾರಣದಿಂದಾಗಿ ಅವರ ಪ್ರಧಾನಿ ಪಟ್ಟಸಿಗುವ ಸಾಧ್ಯತೆ ಏಕಾಏಕಿ ಕ್ಷೀಣಿಸಿದೆ.
ಅಕ್ಷತಾ ಮೂರ್ತಿ ತೆರಿಗೆ ಸ್ಥಾನಮಾನ ಸೋರಿಕೆ: ತನಿಖೆಗೆ ಬ್ರಿಟನ್ ಆದೇಶ
ಇಸ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಅವರು ಬ್ರಿಟನ್ನಿನಲ್ಲಿ ನಾನ್-ಡಾಮಿಸಿಲ್ (ನಿವಾಸೇತರ )ಸ್ಥಾನಮಾನ ಪಡೆಯುವ ಮೂಲಕ ವಿದೇಶದಲ್ಲಿ ಗಳಿಸುವ ಆಸ್ತಿಗೆ ತೆರಿಗೆ ವಿನಾಯಿತಿ ಪಡೆದಿರುವ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಬ್ರಿಟನ್ ಸರ್ಕಾರ ಆಂತರಿಕ ತನಿಖೆಗೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚಾನ್ಸಲರ್ ರಿಷಿ ಸುನಾಕ್ ಅವರ ಪತ್ನಿಯ ತೆರಿಗೆ ಸ್ಥಾನಮಾನದ ಕುರಿತ ಗೌಪ್ಯ ಮಾಹಿತಿ ಸೋರಿಕೆಯಾಗಿ ‘ದ ಇಂಡಿಪೆಂಡೆಂಟ್’ ದಿನಪತ್ರಿಕೆಗೆ ಲಭ್ಯವಾಗಿದ್ದು ಹೇಗೆ?, ಅಕ್ಷತಾ ಅವರ ತೆರಿಗೆ ಸ್ಥಾನಮಾನದ ಬಗ್ಗೆ ಯಾರಿಗೆ ಮಾಹಿತಿ ಇತ್ತು ಮತ್ತು ಯಾರಾದರೂ ಆ ಮಾಹಿತಿಯನ್ನು ಕೋರಿದ್ದರೇ ಎಂಬುದರ ಕುರಿತು ತನಿಖೆ ನಡೆಯಲಿದೆ. ವಿಪಕ್ಷ ಲೇಬರ್ ಪಕ್ಷವನ್ನು ಬೆಂಬಲಿಸುವ ಸರ್ಕಾರಿ ಅಧಿಕಾರಿಯಿಂದ ಮಾಹಿತಿ ಸೋರಿಕೆಯಾಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚೆಗೆ ರಿಷಿ ಸುನಾಕ್ ಬ್ರಿಟನ್ ನಾಗರಿಕರ ಆದಾಯ ತೆರಿಗೆಯನ್ನು ಹೆಚ್ಚಿಸಿದ್ದರು. ಈ ನಡುವೆ ಪತ್ನಿ ಅಕ್ಷತಾ ಮೂರ್ತಿ ಅವರು ವಿದೇಶಿ ಗಳಿಕೆಗೆ ತೆರಿಗೆ ವಿನಾಯ್ತಿ ಪಡೆದಿರುವ ವಿಷಯ ಮಾಧ್ಯಮದ ಮೂಲಕ ಬಹಿರಂಗವಾಗಿತ್ತು. ಹೀಗಾಗಿ ಈ ಬಗ್ಗೆ ವಿವರಣೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಈ ಬೆನ್ನಲ್ಲೇ ತಮ್ಮ ತೆರಿಗೆ ಸ್ಥಾನಮಾನ ಪತಿಯ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಕಾನೂನಿನ ಪ್ರಕಾರ ತೆರಿಗೆ ವಿನಾಯ್ತಿ ಇದ್ದರೂ ಭಾರತದಲ್ಲಿ ಗಳಿಸುವ ಆಸ್ತಿಗೆ ತೆರಿಗೆ ಪಾವತಿಸುವುದಾಗಿ ಅಕ್ಷತಾ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ