
ದುಬೈ: ಜಾಗತಿಕ ತೈಲ ಬಿಕ್ಕಟ್ಟಿನ ನಡುವೆಯೇ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟವಾದ ಒಪೆಕ್ ಮತ್ತು ಒಪೆಕ್ + ನಿಂದ ಮೇ 1ರಿಂದ ಹೊರ ಬರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ. 1967ರಿಂದಲೂ ಒಪೆಕ್‌ನ ಸದಸ್ಯ ರಾಷ್ಟ್ರವಾಗಿದ್ದ ಯುಎಇನ ನಿರ್ಧಾರ, ಜಾಗತಿಕ ತೈಲ ಬೆಲೆಯ ಮೇಲೆ ಪರಿಣಾಮ ಬೀರಲಿದೆ.
ಇತ್ತೀಚೆಗೆ ನೆರೆಯ ಸೌದಿ ಅರೇಬಿಯಾದೊಂದಿಗೆ ಹದೆಗೆಟ್ಟ ಸಂಬಂಧ, ಉತ್ಪಾದನೆಗಳ ಮೇಲೆ ನಿರ್ಬಂಧ, ಆರ್ಥಿಕ ಪೈಪೋಟಿ ವದಂತಿಗಳ ನಡುವೆ ಯುಎಇ ಈ ನಿರ್ಧಾರ ಕೈಗೊಂಡಿದೆ. ಒಪೆಕ್‌ನ ಅತ್ಯಂತ ವಿಶ್ವಾಸಾರ್ಹ ಸದಸ್ಯ ರಾಷ್ಟ್ರವಾದ ಈ ನಿರ್ಧಾರವು ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ತೈಲ ಮಾರುಕಟ್ಟೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಒಪೆಕ್ ಕೂಟದ ಕೆಲ ನಿಯಮಗಳು ತನ್ನ ಆರ್ಥಿಕ ಹಿತಾಸಕ್ತಿಗಳಿಗೆ ತೊಡಕಾಗುತ್ತಿದ್ದವು ಎಂಬ ಕಾರಣಕ್ಕೆ ಯುಎಇ ಅದರಿಂದ ಹೊರಬರಲು ನಿರ್ಧರಿಸಿದೆ ಎನ್ನಲಾಗಿದೆ.
ಈ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳು ರಫ್ತು ಮಾಡುವ ತೈಲದ ಪ್ರಮಾಣವನ್ನು ನಿರ್ಧರಿಸುತ್ತದೆ. ಇದರಿಂದಾಗಿ, ಸದ್ಯ ದಿನಕ್ಕೆ 34 ಲಕ್ಷ ಬ್ಯಾರಲ್‌ಗಳನ್ನು ರಫ್ತು ಮಾಡುತ್ತಿರುವ ದೇಶವು 2027ರ ವೇಳೆಗೆ ಇದನ್ನು 50 ಲಕ್ಷಕ್ಕೆ ಏರಿಸುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳುವತ್ತ ಕೆಲಸ ಮಾಡುತ್ತಿರುವ ಯುಎಇಗೆ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ. ರಫ್ತು ಪ್ರಮಾಣ ಸೇರಿದಂತೆ ತನ್ನ ದೀರ್ಘಕಾಲೀನ ಕಾರ್ಯತಂತ್ರ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು ಈ ಹೆಜ್ಜೆ ಇಡಲಾಗಿದೆ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
ಅತ್ತ ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದು ಒಪೆಕ್ ಕೂಟದ ಕರ್ತವ್ಯವಾದರೂ ಸದ್ಯದ ಮಧ್ಯಪ್ರಾಚ್ಯ ಯುದ್ಧದ ವೇಳೆ ಇದರ ಸದಸ್ಯರ ಉತ್ಪಾದನೆ ಶೇ.27ರಷ್ಟು ಭಾರೀ ಕುಸಿತ ಕಂಡಿತ್ತು. ಹಾಗಾಗಿ, ಕೂಟವು ತನ್ನ ಉದ್ದೇಶಕ್ಕೆ ಬದ್ಧವಾಗಿಲ್ಲ ಎಂಬ ಅಸಮಾಧಾನವೂ ಯುಎಇಗೆ ಇದ್ದಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ