
ಅಬುಧಾಬಿ (ಆ.19): ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಅಮೆರಿಕ-ಇರಾನ್ ಸಂಘರ್ಷ(US-Iran war)ದ ನಡುವೆಯೇ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಬಿಕ್ಕಟ್ಟು ಶುರುವಾಗಿದೆ. ಇರಾನ್ ಜೊತೆಗಿನ ಎಲ್ಲಾ ರೀತಿಯ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಲ್ಲಿಸುತ್ತಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ. ಟೆಹ್ರಾನ್‌ನಿಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ತಮ್ಮ ದೇಶದತ್ತ ಬಂದಿವೆ ಎಂಬ ವರದಿಗಳ ನಂತರ ಯುಎಇ ಈ ಕಠಿಣ ಕ್ರಮ ಕೈಗೊಂಡಿದೆ.
ಆಗಸ್ಟ್ 18, ಮಂಗಳವಾರ ಸಂಜೆ ಯುಎಇ ವಿದೇಶಾಂಗ ಸಚಿವಾಲಯವು ಇರಾನ್ ಮೇಲೆ ಸಂಪೂರ್ಣ ಆರ್ಥಿಕ ನಿರ್ಬಂಧ ವಿಧಿಸುವ ನಿರ್ಧಾರ ಪ್ರಕಟಿಸಿತು. 'ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಶಾಂತಿಗೆ ಧಕ್ಕೆ ತರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ' ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇರಾನ್‌ನಿಂದ ಹಾರಿದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯುಎಇಯ ವಾಯು ರಕ್ಷಣಾ ವ್ಯವಸ್ಥೆ ಪತ್ತೆ ಮಾಡಿತ್ತು. ಇದರಲ್ಲಿ ಒಂದು ಕ್ಷಿಪಣಿ ದೇಶದ ಸಮುದ್ರ ಗಡಿಯಿಂದ ಹೊರಗೆ ಬಿದ್ದರೆ, ಮತ್ತೊಂದು ಗಡಿಯೊಳಗೆ ಬಿದ್ದಿದೆ. ಈ ಘಟನೆ ನಂತರ, ಅಧಿಕಾರಿಗಳು ದೇಶದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಫೋನ್ ಮೂಲಕ ಎಚ್ಚರಿಕೆ ನೀಡಿದ್ದರು. ಮೇ ತಿಂಗಳ ನಂತರ ಯುಎಇಯನ್ನು ಗುರಿಯಾಗಿಸಿ ನಡೆದ ಮೊದಲ ನೇರ ಕ್ಷಿಪಣಿ ದಾಳಿ ಇದಾಗಿದೆ.
ಆದರೆ, ಈ ಕ್ಷಿಪಣಿ ದಾಳಿಯಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ. 'ಈ ಆರೋಪಗಳು ನೆರೆಹೊರೆಯ ಸಂಬಂಧಗಳ ತತ್ವಗಳಿಗೆ ವಿರುದ್ಧವಾಗಿದೆ' ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಗಾಯಿ ತಿಳಿಸಿದ್ದಾರೆ.
ಯುಎಇ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಘೋಷಿಸಿರುವ ಆರ್ಥಿಕ ನಿರ್ಬಂಧ ಯೋಜನೆಗಳನ್ನು ಜಾರಿಗೆ ತರಲು ಯುಎಇ ಈ ರೀತಿ ಮಾಡುತ್ತಿದೆ ಎಂದು ಟೆಹ್ರಾನ್ ಆರೋಪಿಸಿದೆ.
ಯುಎಇಯ ಈ ನಿರ್ಧಾರವು ಈಗಾಗಲೇ ಸಂಕಷ್ಟದಲ್ಲಿರುವ ಇರಾನ್ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಿದೆ. ಚೀನಾ ನಂತರ ಇರಾನ್‌ನ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶ ಯುಎಇ. ಎರಡೂ ದೇಶಗಳ ನಡುವೆ ವಾರ್ಷಿಕವಾಗಿ 27 ಬಿಲಿಯನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ನಡೆಯುತ್ತಿತ್ತು.
ಇರಾನ್‌ನ ವಾರ್ಷಿಕ ಆಮದುಗಳಲ್ಲಿ ಮೂರನೇ ಒಂದು ಭಾಗದಷ್ಟು ಯುಎಇ ಮೂಲಕವೇ ಬರುತ್ತಿತ್ತು. ಅಂತರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಲು ಮತ್ತು ಸ್ವಿಫ್ಟ್ (SWIFT) ನಿಯಂತ್ರಣಗಳನ್ನು ಬೈಪಾಸ್ ಮಾಡಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಇರಾನ್‌ಗೆ ದುಬೈ ಪ್ರಮುಖ ಕೇಂದ್ರವಾಗಿತ್ತು.
ಹೀಗಾಗಿ, ಅಮೆರಿಕ ವಿಧಿಸಿರುವ ನಿರ್ಬಂಧಗಳಿಗಿಂತಲೂ ಯುಎಇಯ ಈ ವ್ಯಾಪಾರ ನಿಷೇಧವು ಇರಾನ್‌ಗೆ ಹೆಚ್ಚು ಹಾನಿ ಉಂಟುಮಾಡಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಇರಾನ್ ಜೊತೆ ಸುಧಾರಿಸುತ್ತಿದ್ದ ಆರ್ಥಿಕ ಮತ್ತು ವಿಮಾನಯಾನ ಸೇವೆಗಳು ಸೇರಿದಂತೆ ರಾಜತಾಂತ್ರಿಕ ಸಂಬಂಧಗಳಿಗೆ ಈ ಘಟನೆಯಿಂದ ಮತ್ತೆ ಹಿನ್ನಡೆಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಈಗಾಗಲೇ ಉದ್ವಿಗ್ನ ಪರಿಸ್ಥಿತಿ ಇರುವಾಗ, ಯುಎಇಯ ಈ ಹೊಸ ಆರ್ಥಿಕ ನಿರ್ಬಂಧವು ಈ ವಲಯವನ್ನು ಮತ್ತಷ್ಟು ಅನಿಶ್ಚಿತತೆಗೆ ತಳ್ಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ