ಭಾರತೀಯರು ತವರಿಗೆ ಕಳಿಸೋ ಹಣಕ್ಕೆ ಟ್ರಂಪ್‌ ಶೇ.1 ರಷ್ಟು ಟ್ಯಾಕ್ಸ್‌

Kannadaprabha News   | Kannada Prabha
Published : Jul 05, 2025, 04:34 AM IST
US President Donald Trump (Source: Reuters)

ಸಾರಾಂಶ

ಟ್ರಂಪ್‌ ಅವರ ಬಿಗ್‌ ಬ್ಯೂಟಿಫುಲ್‌ ಬಿಲ್‌ ಅಥವಾ ತೆರಿಗೆ ಮತ್ತು ವೆಚ್ಚ ಕಡಿತ ಬಿಲ್‌ಗೆ ಕೊನೆಗೂ ಅನುಮೋದನೆ ಸಿಕ್ಕಿದೆ. ಮುಂದಿನ ವರ್ಷ ಜ.1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ ಅಮೆರಿಕದಲ್ಲಿರುವ ವಲಸಿಗರು ಇನ್ನು ಮುಂದೆ ಸ್ವದೇಶಕ್ಕೆ ಕಳುಹಿಸುವ ಹಣದ ಮೇಲೆ ಶೇ.1ರಷ್ಟು ಹೊಸ ತೆರಿಗೆ ಬೀಳಲಿದೆ.

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬಿಗ್‌ ಬ್ಯೂಟಿಫುಲ್‌ ಬಿಲ್‌ ಅಥವಾ ತೆರಿಗೆ ಮತ್ತು ವೆಚ್ಚ ಕಡಿತ ಬಿಲ್‌ಗೆ ಕೊನೆಗೂ ಅನುಮೋದನೆ ಸಿಕ್ಕಿದೆ. ಮುಂದಿನ ವರ್ಷ ಜ.1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ ಅಮೆರಿಕದಲ್ಲಿರುವ ವಲಸಿಗರು ಇನ್ನು ಮುಂದೆ ಸ್ವದೇಶಕ್ಕೆ ಕಳುಹಿಸುವ ಹಣದ ಮೇಲೆ ಶೇ.1ರಷ್ಟು ಹೊಸ ತೆರಿಗೆ ಬೀಳಲಿದೆ.

ಈ ಹಿಂದೆ ಶೇ.5ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಹೇಳಲಾಗಿತ್ತಾದರೂ ಇದೀಗ ಅದನ್ನು ಶೇ.1ಕ್ಕಿಳಿಸಿದ್ದು, ಇದು ಭಾರತೀಯ ಮೂಲದ ವಲಸಿಗರಿಗೆ ನೆಮ್ಮದಿ ಮೂಡಿಸಿದೆ. ಇಷ್ಟಾದರೂ ಈ ಹೊಸ ತೆರಿಗೆಯಿಂದ ಭಾರತಕ್ಕೆ 4000 ಕೋಟಿ ರು.ನಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ.

ಏನಿದು ಬಿಲ್‌?: ಸುಮಾರು 900 ಪುಟಗಳ ಈ ಬಿಲ್‌ ರಿಪಬ್ಲಿಕನ್‌ ಪಕ್ಷದ ಆದ್ಯತೆಗಳಾದ ವೆಚ್ಚ ಕಡಿತ, ತೆರಿಗೆ ವ್ಯವಸ್ಥೆಯಲ್ಲಿನ ಬದಲಾವಣೆ ಸೇರಿ ಹಲವು ಮಹತ್ವದ ಅಂಶಗಳನ್ನು ಒಳಗೊಂಡಿವೆ. ಈ ಬಿಲ್‌ನಿಂದ ಅಮೆರಿಕದ ಶ್ರೀಮಂತ ಕುಟುಂಬಗಳಿಗೆ ವಾರ್ಷಿಕ 10 ಲಕ್ಷ ರು.ಗೂ ಹೆಚ್ಚಿನ ಉಳಿತಾಯವಾದರೆ, ಬಡವರಿಗೆ 1.36 ಲಕ್ಷದಷ್ಟು ಹೆಚ್ಚಿನ ಹೊರೆ ಬೀಳಲಿದೆ. ಆರೋಗ್ಯ ನೆರವು ಮತ್ತು ಆಹಾರ ನೆರವಿನಲ್ಲಿನ ಕಡಿತದಿಂದಾಗಿ ಬಡವರಿಗೆ ನಷ್ಟವಾಗಲಿದೆ.

ಭಾರತಕ್ಕೆ ಯಾಕೆ ಆತಂಕ?:

ಭಾರತಕ್ಕೆ ವಿಶ್ವದೆಲ್ಲೆಡೆಯಿಂದ ಎನ್‌ಆರ್‌ಐಗಳ ಮೂಲಕ ಹಣ ಹರಿದು ಬರುತ್ತದೆ. ವಿಶ್ವಬ್ಯಾಂಕ್‌ ವರದಿ ಪ್ರಕಾರ, 2023ರಲ್ಲಿ ಭಾರತಕ್ಕೆ 11 ಲಕ್ಷ ಕೋಟಿ ಹಣ ಎನ್‌ಆರ್‌ಐಗಳಿಂದ ವರ್ಗಾವಣೆಯಾಗಿದೆ. ಇದರಲ್ಲಿ ಸುಮಾರು 3 ಲಕ್ಷ ಕೋಟಿ ಅಮೆರಿಕವೊಂದರಿಂದಲೇ ವರ್ಗಾವಣೆಯಾಗುತ್ತದೆ. ಅಮೆರಿಕವೊಂದರಲ್ಲೇ 45 ಲಕ್ಷದಷ್ಟು ಭಾರತೀಯ ವಲಸಿಗರಿದ್ದು, ಇವರಲ್ಲಿ 29 ಲಕ್ಷದಷ್ಟು ಮಂದಿ ಭಾರತದಲ್ಲೇ ಹುಟ್ಟಿದವರು. ಅವರು ಅಲ್ಲಿ ದುಡಿದು ಸಂಪಾದಿಸಿದ ಹಣ ಸ್ವದೇಶದಲ್ಲಿರುವ ಕುಟುಂಬಕ್ಕೆ ಕಳುಹಿಸುವಾಗ ಇನ್ನು ಮುಂದೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಈ ಬಿಲ್‌ ಏನು ಹೇಳುತ್ತೆ?

ಎಚ್‌-1ಬಿ, ಎಚ್‌-2ಎ ವೀಸಾ ಹೊಂದಿದವರು, ಎಫ್‌-1 ವೀಸಾ ಪಡೆದ ವಿದ್ಯಾರ್ಥಿಗಳು, ಗ್ರೀನ್‌ ಕಾರ್ಡ್‌ ಹೊಂದಿದವರು ಸೇರಿ ಅಮೆರಿಕದ ಪ್ರಜೆಗಳಲ್ಲದವರು ಇನ್ನು ಮುಂದೆ ವಿದೇಶಗಳಿಗೆ ಕಳುಹಿಸುವ ನಗದು, ಮನಿ ಆರ್ಡರ್‌, ಕ್ಯಾಶಿಯರ್‌ ಚೆಕ್‌ಗಳು ಅಥವಾ ಇದೇ ರೀತಿಯ ಇತರೆ ಸಾಧನಗಳ ಮೂಲಕ ಕಳುಹಿಸುವ ಹಣದ ಮೇಲೆ ಶೇ.1ರಷ್ಟು ತೆರಿಗೆ ಪಾವತಿ ಕಡ್ಡಾಯ.

ಎನ್‌ಆರ್‌ಐಗಳು, ವಿದ್ಯಾರ್ಥಿಗಳಿಗೆ

ಶೇ.1ರಷ್ಟು ತೆರಿಗೆ ಪರಿಣಾಮ ಹೇಗೆ?

ಎಸ್‌ಬಿಐ ಯುಎಸ್‌ಎ, ಐಸಿಐಸಿಐ ಬ್ಯಾಂಕ್‌ಗಳು, ರಿಮಿಟ್ಲಿ, ವೈಸ್‌ ಮತ್ತು ವೆಸ್ಟರ್ನ್‌ ಯೂನಿಯನ್‌(ಅಮೆರಿಕದ ಕ್ರಿಡಿಟ್‌ ಅಥವಾ ಡಿಬಿಟ್‌ ಕಾರ್ಡ್‌ ಅಥವಾ ಬ್ಯಂಕ್‌ ಖಾತೆಯಿಂದ ವರ್ಗಾಯಿಸಿದರಷ್ಟೆ) ನಂಥ ಬ್ಯಾಂಕ್‌ ಆಧರಿತ ಡಿಜಿಟಲ್‌ ಹಣ ಪಾವತಿ ಮೇಲೆ ಈ ಹೊಸ ಕಾನೂನು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ವಿದ್ಯಾರ್ಥಿಗಳು, ಕಡಿಮೆ ಆದಾಯದ ಕೆಲಸಗಾರರು ಸಾಮಾನ್ಯವಾಗಿ ಸಣ್ಣ ಸಣ್ಣ ವರ್ಗಾವಣೆಗಳಿಗಾಗಿ ಕ್ಯಾಶ್‌ ಆಧಾರಿತ ಸೇವೆ ಅವಲಂಬಿಸಿರುತ್ತಾರೆ. ಇವರು ಪೂರ್ಣ ಬ್ಯಾಂಕಿಂಗ್‌ ಸೇವೆಗಳನ್ನು ಪಡೆದಿರುವುದಿಲ್ಲ. ಇಂಥವರಿಗೆ ತೆರಿಗೆ ಹೊರೆ ಬೀಳಲಿದೆ.

ವಿದೇಶಿ ಆದಾಯದ ಮೇಲೆ ತೆರಿಗೆ

ಎನ್‌ಆಐಗಳು ವಿದೇಶದಿಂದ ಬರುವ ಆದಾಯ ಅಂದರೆ ಭಾರತದಲ್ಲಿರುವ ಮನೆಗಳಿಂದ ಬರುವ ಬಾಡಿಗೆ ಆದಾಯದ ಮೇಲೆ ದ್ವಿತೆರಿಗೆ ತಾಪತಿಸುವ ಆತಂಕ ಇತ್ತು. ಆದರೆ ಈ ಬಿಲ್‌ನಲ್ಲಿ ವಿದೇಶದಿಂದ ಗಳಿಸಿದ ಸಂಪತ್ತಿಗೆ ಎರಡೆರಡು ಬಾರಿ ತೆರಿಗೆ ಪಾವತಿಸುವ ಆತಂಕ ದೂರವಾಗಿದೆ. ಭಾರತದಲ್ಲಿ ಆದಾಯಕ್ಕೆ ಆ ಆದಾಯಕ್ಕೆ ತೆರಿಗೆ ಪಾವತಿಸಿದ್ದರೆ ಹಿಂದಿನಂತೆ ಅಮೆರಿಕದಲ್ಲಿ ವಿನಾಯ್ತಿ ಪಡೆಯಬಹುದಾಗಿದೆ.

ಅರ್ಜಿ ಶುಲ್ಕ ಹೆಚ್ಚಳ

ವರ್ಕ್‌ ಪರ್ಮಿಟ್‌, ಆಶ್ರಯ ಕೋರಿ ಅರ್ಜಿ ಮತ್ತು ಇತರೆ ಮಾನವೀಯ ರಕ್ಷಣೆಗಳಿಗಾಗಿ ಸಲ್ಲಿಸುವ ಅರ್ಜಿಗಳ ಮೇಲಿನ ಅರ್ಜಿ ಶುಲ್ಕ ಹೆಚ್ಚಿಸಲಾಗಿದೆ. ಅಕ್ರಮವಾಗಿ ಗಡಿದಾಟಿ ಅಮೆರಿಕಕ್ಕೆ ಬಂದರೆ ಭಾರೀ ದಂಡ ವಿಧಿಸುವ ಪ್ರಸ್ತಾಪ ಬಿಲ್‌ನಲ್ಲಿದೆ. ಇದು ಭಾರತೀಯ ನೌಕರರ ಮೇಲೆ ಪರಿಣಾಮ ಬೀರಬಹುದಾಗಿದೆ.

- ಟ್ರಂಪ್‌ ಅವರ ಬಿಗ್‌ ಬ್ಯೂಟಿಫುಲ್‌ ಬಿಲ್‌ಗೆ ಒಪ್ಪಿಗೆ

- ಅಮೆರಿಕದ ತೆರಿಗೆ, ವೆಚ್ಚ ನೀತಿಯಲ್ಲಿ ಬದಲಾವಣೆ

- 2026ರಿಂದ ಜಾರಿಗೆ ಬರಲಿದೆ ಹೊಸ ತೆರಿಗೆ ನೀತಿ

- ಶೇ.5ರಷ್ಟು ತೆರಿಗೆ ಪಾವತಿ ಆತಂಕದಿಂದ ಮುಕ್ತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!