
ಫ್ರಾನ್ಸ್ (ಜೂ. 17) ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೋನಾಲ್ಡ್ ಟ್ರಂಪ್ ಭೇಟಿ ಬಳಿಕ ನೀಡಿದ ಹೇಳಿಕೆಗಳು ಭಾರಿ ವೈರಲ್ ಆಗುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಕುರಿತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಸದ್ದು ಮಾಡುತ್ತಿದೆ. ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನಾವು ಭಾರತದ ನೆರವಿಗೆ ನಿಲ್ಲುತ್ತೇವೆ. ಆದರೆ ಭಾರತದಲ್ಲಿ ಮೋದಿ ಪ್ರಧಾನಿಯಾಗಿ ಇರಬೇಕು. ಬೇರೆ ನಾಯಕರಿದ್ದರೆ ಈ ಬಗ್ಗೆ ನಾನು ಗ್ಯಾರೆಂಟಿ ಕೊಡಲಾರೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೋನಾಲ್ಡ್ ಟ್ರಂಪ್ ಭಾರತ ಹಾಗೂ ಮೋದಿ ಮೇಲೆಟ್ಟಿರುವ ವಿಶ್ವಾಸ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾತು ಹೇಳಿದ್ದಾರೆ. ಇದೀಗ ಡೋನಾಲ್ಡ್ ಟ್ರಂಪ್ ಹೇಳಿದ ಮಾತುಗಳು ಭಾರಿ ವೈರಲ್ ಆಗುತ್ತಿದೆ. "ಭಾರತದ ಜೊತೆ ನಮಗೆ ಅತ್ಯುತ್ತಮ ಮತ್ತು ಅದ್ಭುತವಾದ ಬಾಂಧವ್ಯವಿದೆ. ಅಧಿಕೃತವಾಗಿ ನಮ್ಮ ನಡುವೆ ಯಾವುದೇ ಪರಸ್ಪರ ರಕ್ಷಣಾ ಒಪ್ಪಂದ (Mutual Defense Pact) ಇಲ್ಲದೇ ಇರಬಹುದು, ಆದರೆ ನಾನೊಂದು ಮಾತು ಹೇಳುತ್ತೇನೆ; ಒಂದು ವೇಳೆ ಭಾರತದ ಮೇಲೆ ಯಾರಾದರೂ ದಾಳಿ ನಡೆಸಿದರೆ, ಭಾರತಕ್ಕೆ ನೆರವಾಗಲು ಅಮೆರಿಕ ಖಂಡಿತಾ ಅಲ್ಲಿ ಇರಲಿದೆ" ಎಂದು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮೋದಿ ಅತ್ಯಂತ ಸುಂದರ ವ್ಯಕ್ತಿ. ನನಗೆ ದೇವಧೂತನಂತೆ ಕಾಣುತ್ತಾರೆ. ಆದರೆ ರಾಜತಾಂತ್ರಿಕತೆಯಲ್ಲಿ ಮೋದಿ ಅತ್ಯಂತ ಕಠೋರ ಹಾಗೂ ಕಠಿಣ, ಎದುರಾಳಿಗಳನ್ನು ಮಣಿಸುತ್ತಾರೆ. ಚಾಣಾಕ್ಷ ಸಂಧಾನಕಾರ ಎಂದು ಟ್ರಂಪ್ ಹೊಗಳಿದ್ದರು.
ಇವಿಯಾನ್‌ನ ಐಷಾರಾಮಿ ರೆಸಾರ್ಟ್‌ನಲ್ಲಿ ಉಭಯ ನಾಯಕರ ನಡುವೆ ನಡೆದ ಈ ದ್ವಿಪಕ್ಷೀಯ ಮಾತುಕತೆಯು ಕೇವಲ ಔಪಚಾರಿಕ ಭೇಟಿಯಾಗಿರಲಿಲ್ಲ. ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ಭಾರತೀಯ ನಾವಿಕರ ಹಿತಾಸಕ್ತಿ ಕಾಪಾಡುವ ಕುರಿತು ಉಭಯ ನಾಯಕರು ಗಂಭೀರ ಚರ್ಚೆ ನಡೆಸಿದ ಬೆನ್ನಲ್ಲೇ ಈ ರಕ್ಷಣಾ ಭರವಸೆ ಹೊರಬಿದ್ದಿದೆ. ಯಾವುದೇ ಅಧಿಕೃತ ಒಪ್ಪಂದದ ಮುದ್ರೆ ಇಲ್ಲದೆಯೇ ಜಗತ್ತಿನ ಏಕೈಕ ಸೂಪರ್ ಪವರ್ ರಾಷ್ಟ್ರವಾದ ಅಮೆರಿಕ, ಭಾರತದ ಭದ್ರತೆಗೆ ಇಷ್ಟೊಂದು ದೊಡ್ಡ ಮಟ್ಟದ ಗ್ಯಾರಂಟಿ ನೀಡಿರುವುದು ಚೀನಾ ಮತ್ತು ಪಾಕಿಸ್ತಾನದಂತಹ ನೆರೆ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದೆ.
ಸಾಮಾನ್ಯವಾಗಿ ಅಮೆರಿಕವು ನೇಟೋ (NATO) ಸದಸ್ಯ ರಾಷ್ಟ್ರಗಳಿಗೆ ಮಾತ್ರ ಇಂತಹ ರಕ್ಷಣಾ ಭರವಸೆಗಳನ್ನು ನೀಡುತ್ತದೆ. ಆದರೆ, ಈಗ ಯಾವುದೇ ಲಿಖಿತ ಮಿಲಿಟರಿ ಒಪ್ಪಂದವಿಲ್ಲದೆ ಭಾರತದ ಬೆಂಬಲಕ್ಕೆ ನಿಲ್ಲುವುದಾಗಿ ಟ್ರಂಪ್ ಘೋಷಿಸಿರುವುದು ಪ್ರಧಾನಿ ಮೋದಿ ಅವರ ಜಾಗತಿಕ ರಾಜತಾಂತ್ರಿಕತೆಗೆ ಸಿಕ್ಕ ಭಾರಿ ಯಶಸ್ಸು ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ