
ಅಮೆರಿಕ : 2024 ರ 'ಮಿಸ್ ಅಮೇರಿಕನ್ ಫೋರ್ಕ್' ಕಿರೀಟ ಮುಡಿಗೇರಿಸಿಕೊಂಡಿದ್ದ ಹಾಗೂ ಉತಾಹ್‌ನ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಬ್ರೈನ್ ಕಾರ್ನೆಸೆಕ್ಕಾ (21) ಭಾನುವಾರ ದುರಂತವಾಗಿ ಆತ್ಮHತ್ಯೆ ಮಾಡಿಕೊಂಡಿದ್ದಾರೆ. ಈ ಆಘಾತಕಾರಿ ಸುದ್ದಿಯನ್ನು ಅವರ ತಾಯಿ ಮೈಕೆಲ್ ಕಾರ್ನೆಸೆಕ್ಕಾ ದೃಢಪಡಿಸಿದ್ದಾರೆ.
ಕಳೆದ ಜುಲೈ 28 ರ ಮಂಗಳವಾರದಂದು ಉತಾಹ್‌ನ ಅಮೇರಿಕನ್ ಫೋರ್ಕ್‌ನಲ್ಲಿ ಬ್ರೈನ್ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಕ್ಯಾಂಡಲ್ ಲೈಟ್ ಶ್ರದ್ದಾಂಜಲಿಯಲ್ಲಿ (Candlelight Vigil) ಸ್ನೇಹಿತರು ಮತ್ತು ಕುಟುಂಬಸ್ಥರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅತ್ಯಂತ ಭಾವುಕರಾಗಿ ಮಾತನಾಡಿದ ತಾಯಿ ಮೈಕೆಲ್ ಕಾರ್ನೆಸೆಕ್ಕಾ, ಅವಳು ತನ್ನ ಅಮೂಲ್ಯವಾದ ಜೀವವನ್ನು ತಾನೇ ಅಂತ್ಯಗೊಳಿಸಿಕೊಂಡಿದ್ದಾಳೆ. ಆದರೆ, ಕೊನೆಯ ಕ್ಷಣದಲ್ಲಿ ಅವಳಿಗೆ ಎದುರಾದ ಆ ಪರಿಸ್ಥಿತಿಗಿಂತ ಅವಳ ಬದುಕು ತುಂಬಾ ದೊಡ್ಡದಾಗಿತ್ತು. ಅವಳು ಜೀವಿಸಿದ ಅದ್ಭುತ ಮತ್ತು ಸಾರ್ಥಕ ಜೀವನವನ್ನು ನಾವು ಸಂಭ್ರಮಿಸಲು ಬಯಸುತ್ತೇವೆ. ಬ್ರೈನ್ ತನ್ನ ಕುಟುಂಬ ಮತ್ತು ಸ್ನೇಹಿತರನ್ನು ಅಪಾರವಾಗಿ ಪ್ರೀತಿಸುತ್ತಿದ್ದಳು, ಯಾರಿಗೆ ಅಗತ್ಯವಿದ್ದರೂ ಸದಾ ನೆರವಿಗೆ ನಿಲ್ಲುತ್ತಿದ್ದಳು ಎಂದು ಕಣ್ಣೀರಿಟ್ಟರು.
ಬ್ರೈನ್ ಕಾರ್ನೆಸೆಕ್ಕಾ ಕೇವಲ ಸೌಂದರ್ಯದಿಂದ ಮಾತ್ರವಲ್ಲದೆ, ತನ್ನ ಸದ್ಗುಣಗಳಿಂದಲೂ ಜನರ ಮನಸ್ಸು ಗೆದ್ದಿದ್ದರು. 2024 ರಲ್ಲಿ ಮಿಸ್ ಅಮೇರಿಕನ್ ಫೋರ್ಕ್ ಪ್ರಶಸ್ತಿಯನ್ನು ಗೆದ್ದಿದ್ದ ಬ್ರೈನ್, ನಂತರ 2025 ರ 'ಮಿಸ್ ಉತಾಹ್' ಸ್ಪರ್ಧೆಯಲ್ಲಿ ಸಹ-ಸ್ಪರ್ಧಿಗಳ ಪ್ರೀತಿ ಗಳಿಸಿ 'ಮಿಸ್ ಕಾನ್ಜೆನಿಯಾಲಿಟಿ' (Miss Congeniality) ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ, ಮುಂಬರುವ ಆಗಸ್ಟ್ 22 ರಂದು ನಡೆಯಲಿರುವ ಪ್ರತಿಷ್ಠಿತ 'ಮಿಸ್ ಪ್ರೊವೊ' ಸ್ಪರ್ಧೆಯಲ್ಲಿ ಭಾಗವಹಿಸಲು ಸಂಪೂರ್ಣ ಸಿದ್ಧತೆ ನಡೆಸಿದ್ದರು.
ಕೇವಲ ಗ್ಲಾಮರ್ ರಂಗಕ್ಕೆ ಸೀಮಿತವಾಗದ ಬ್ರೈನ್, ಒಬ್ಬ ಯಶಸ್ವಿ ಪತ್ರಕರ್ತೆಯಾಗಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. 2024 ರಲ್ಲಿ ಅವರು 'ಎನ್ವಲಪ್ಸ್ ಆಫ್ ಹೋಪ್' (Envelopes of Hope) ಎಂಬ ವಿಶೇಷ ಉಪಕ್ರಮವನ್ನು ಪ್ರಾರಂಭಿಸಿದ್ದರು. ಈ ಸಂಸ್ಥೆಯ ಮೂಲಕ ಸ್ಥಳೀಯ ಸಮುದಾಯ ಮತ್ತು ಜೈಲಿನಲ್ಲಿರುವ ಕೈದಿಗಳ ನಡುವೆ ಮಾನವೀಯ ಸಂಪರ್ಕ ಹಾಗೂ ಸಂವಹನವನ್ನು ಬೆಳೆಸುವ ಮಹತ್ತರ ಕೆಲಸವನ್ನು ಅವರು ಮಾಡುತ್ತಿದ್ದರು.
ಇದರೊಂದಿಗೆ, ವಿಕಲಚೇತನ ಯುವತಿಯರು ಮತ್ತು ಹೆಣ್ಣುಮಕ್ಕಳಲ್ಲಿ ಸ್ವಾಭಿಮಾನ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ಶ್ರಮಿಸುವ 'ಉತಾಹ್ ಮಿಸ್ ಅಮೇಜಿಂಗ್' (Utah Miss Amazing) ಸಂಸ್ಥೆಯೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದರು.
ಬ್ರೈನ್ ನಿಧನಕ್ಕೆ ಸಂತಾಪ ಸೂಚಿಸಿರುವ 'ಉತಾಹ್ ಮಿಸ್ ಅಮೇಜಿಂಗ್' ಸಂಸ್ಥೆಯು, "ಬ್ರೈನ್ ಅವರ ದಯೆ, ಸಹಾನುಭೂತಿ ಮತ್ತು ಪರಿಶುದ್ಧ ಹೃದಯವು ಅವರು ಭೇಟಿಯಾದ ಪ್ರತಿಯೊಬ್ಬರ ಮೇಲೂ ಶಾಶ್ವತವಾದ ಪ್ರಭಾವ ಬೀರಿದೆ. ನಮ್ಮ ರಾಣಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವ ಮತ್ತು ಅವರನ್ನು ಬೆಂಬಲಿಸುವ ಅದ್ಭುತ ಕಲೆ ಅವಳಿಗೆ ಕರಗತವಾಗಿತ್ತು. ಮಿಸ್ ಅಮೇಜಿಂಗ್ ಸಂಸ್ಥೆಯು ಏನನ್ನು ಸಾಕಾರಗೊಳಿಸಲು ಬಯಸುತ್ತದೆಯೋ, ಅದಕ್ಕೆ ಬ್ರೈನ್ ಜೀವಂತ ಉದಾಹರಣೆಯಾಗಿದ್ದರು. ಅವರು ನಮ್ಮೊಂದಿಗೆ ಕಳೆದ ಸಮಯಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಅವರ ನೆನಪುಗಳ ಮೂಲಕ ಅವರ ಬೆಳಕು ಸದಾ ಬೆಳಗುತ್ತಿರುತ್ತದೆ" ಎಂದು ಭಾವುಕ ಹೇಳಿಕೆ ನೀಡಿದೆ.
ಈ ಕಠಿಣ ಪರಿಸ್ಥಿತಿಯಲ್ಲಿ ಕಾರ್ನೆಸೆಕ್ಕಾ ಕುಟುಂಬಕ್ಕೆ ಆರ್ಥಿಕ ಹಾಗೂ ಸಾಂಸಾರಿಕ ನೆರವು ನೀಡಲು ಬ್ರೈನ್ ಅವರ ಸೋದರಸಂಬಂಧಿ ಕ್ಯಾಸಿಡಿ ಜ್ಯಾಕ್‌ಮನ್ ಮುರ್ಡೋಕ್ ಅವರು 'ಗೋಫಂಡ್‌ಮಿ' (GoFundMe) ಪುಟವನ್ನು ತೆರೆದು ಧನಸಹಾಯ ಅಭಿಯಾನ ಆರಂಭಿಸಿದ್ದಾರೆ.
"ಬ್ರೈನ್ ಅವರ ಅನಿರೀಕ್ಷಿತ ನಿಧನದಿಂದ ನಮ್ಮ ಇಡೀ ಕುಟುಂಬ ತೀವ್ರ ಆಘಾತದಲ್ಲಿದೆ. ಅವಳ ಉದಾರತೆ ಮತ್ತು ಸಾಮಾಜಿಕ ಕೆಲಸಗಳ ಮೂಲಕ ಅವಳು ಅಸಂಖ್ಯಾತ ಜೀವಗಳನ್ನು ಮುಟ್ಟಿದ್ದಾಳೆ. ಅವಳ ನೆನಪನ್ನು ಗೌರವಿಸುವ ರೀತಿಯಲ್ಲಿ ಒಂದು ಅರ್ಥಪೂರ್ಣ ಸ್ಮಾರಕವನ್ನು ನಿರ್ಮಿಸಲು ನಾವು ಆಶಿಸುತ್ತೇವೆ. ಈ ನಿಧಿಯು ಕುಟುಂಬಕ್ಕೆ ಅಂತ್ಯಕ್ರಿಯೆಯ ವೆಚ್ಚವನ್ನು ಭರಿಸಲು ಮತ್ತು ಈ ದುಃಖದ ಸಮಯದಲ್ಲಿ ಅವಳ ಪ್ರೀತಿಪಾತ್ರರಿಗೆ ಸಾಂತ್ವನ ನೀಡಲು ಸಹಾಯ ಮಾಡುತ್ತದೆ" ಎಂದು ಮುರ್ಡೋಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಪ್ರಸ್ತುತ ಈ ಅಭಿಯಾನಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಸ್ಪಂದನೆ ಸಿಕ್ಕಿದ್ದು, ನಿಗದಿಪಡಿಸಲಾದ $40,000 ಯುಎಸ್ ಡಾಲರ್ ಗುರಿಯಲ್ಲಿ ಈಗಾಗಲೇ 294 ಕ್ಕೂ ಹೆಚ್ಚು ದಾನಿಗಳಿಂದ ಬರೋಬ್ಬರಿ $30,610 ಕ್ಕೂ ಅಧಿಕ ಹಣ ಸಂಗ್ರಹವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ