ತಾಲಿಬಾನ್‌ನಿಂದ ಪಾರಾಗಲು ಬಲವಂತದ ಮದುವೆ: ಸಾಕಷ್ಟು‘ವರದಕ್ಷಿಣೆ’ ಕೂಡ ಸಂದಾಯ!

Published : Sep 04, 2021, 09:03 AM IST
ತಾಲಿಬಾನ್‌ನಿಂದ ಪಾರಾಗಲು ಬಲವಂತದ ಮದುವೆ: ಸಾಕಷ್ಟು‘ವರದಕ್ಷಿಣೆ’ ಕೂಡ ಸಂದಾಯ!

ಸಾರಾಂಶ

* ಆಫ್ಘನ್‌ನಲ್ಲಿ ಮತ್ತಷ್ಟು ಆಘಾತಕಾರಿ ಸಂಗತಿ ಬೆಳಕಿಗೆ * ತಾಲಿಬಾನ್‌ನಿಂದ ಪಾರಾಗಲು ಬಲವಂತದ ಮದುವೆ! * ವಿದೇಶಕ್ಕೆ ಹೋಗುವ ಅರ್ಹರೊಂದಿಗೆ ವಿವಾಹ * ಯುವತಿಯರ ಕುಟುಂಬಗಳಿಂದ ಈ ಕೆಲಸ * ಅರ್ಹ ಪುರುಷರಿಗೆ ಸಾಕಷ್ಟು‘ವರದಕ್ಷಿಣೆ’ ಕೂಡ ಸಂದಾಯ

ಕಾಬೂಲ್‌(ಸೆ.04): ತಾಲಿಬಾನಿಗಳ ದುರಾಡಳಿತದಿಂದ ಪಾರಾಗಲು ವಿದೇಶಕ್ಕೆ ಪಲಾಯನಗೈದ ಹಲವು ಕುಟುಂಬಗಳು ಇಂಥದ್ದೊಂದು ಯತ್ನದ ವೇಳೆ ತಮ್ಮ ಹೆಣ್ಣು ಮಕ್ಕಳನ್ನು ಕಂಡಕಂಡವರಿಗೆ ಬಲವಂತವಾಗಿ ವಿಮಾನ ನಿಲ್ದಾಣದಲ್ಲೇ ಮದುವೆ ಮಾಡಿಕೊಟ್ಟಮತ್ತು ಈಗಲೂ ಮಾಡಿಕೊಡುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಆ.31ಕ್ಕೆ ಅಮೆರಿಕ ಸೇನೆ ಕಾಬೂಲ್‌ ತೊರೆಯುವ ಮುನ್ನ, ಸಾವಿರಾರು ಜನರನ್ನು ಕಾಬೂಲ್‌ ಏರ್‌ಪೋರ್ಟ್‌ನಿಂದ ತೆರವು ಮಾಡಿತ್ತು. ಇವರೆಲ್ಲಾ ಕಳೆದ 20 ವರ್ಷಗಳಲ್ಲಿ ಅಮೆರಿಕ ಸೇನೆಗೆ ನಾನಾ ರೀತಿಯಲ್ಲಿ ನೆರವಾದವರು. ಅವರನ್ನೆಲ್ಲಾ ಹಾಲಿ ಯುಎಇ ಸೇರಿದಂತೆ ತನ್ನ ಸೇನಾ ನೆಲೆ ಇರುವ ದೇಶಗಳಲ್ಲಿ ಇರಿಸಲಾಗಿದೆ. ಅವರ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿದ ಬಳಿಕ ಅವರನ್ನೆಲ್ಲಾ ಅಮೆರಿಕ ತನ್ನ ದೇಶಕ್ಕೆ ಕರೆದೊಯ್ಯಲಿದೆ.

ಹೀಗೆ ವಿದೇಶಕ್ಕೆ ತೆರಳಲು ಅರ್ಹತೆ ಪಡೆದವರ ಜೊತೆ ತಮ್ಮ ಹೆಣ್ಣು ಮಕ್ಕಳನ್ನು ಕೆಲ ಪೋಷಕರು ಬಲವಂತವಾಗಿ ವಿಮಾನ ನಿಲ್ದಾಣದ ಬಳಿಯ ತೆರವು ಕೇಂದ್ರದಲ್ಲೇ ಮದುವೆ ಮಾಡಿಕೊಟ್ಟವಿಷಯ ಇದೀಗ ಅಮೆರಿಕದ ಗಮನಕ್ಕೆ ಬಂದಿದೆ.

ವಿದೇಶಕ್ಕೆ ಹೋಗುವ ಅರ್ಹ ಪುರುಷರನ್ನು ತಮ್ಮ ಪುತ್ರಿಯರು ಮದುವೆ ಆದರೆ ಅವರು ಕೂಡ ಸುಲಭವಾಗಿ ವಿದೇಶಕ್ಕೆ ಹೋಗಬಹುದು. ಈ ಮೂಲಕ ಅಮೆರಿಕ ಹಾಗೂ ಯುಎಇಯಂಥ ರಾಷ್ಟ್ರಗಳಲ್ಲಿ ಸುಖವಾಗಿ ಇರಬಹುದು ಎಂಬುದು ಈ ಕುಟುಂಬಗಳ ಇರಾದೆ. ಹೀಗಾಗಿ ಬಲವಂತವಾಗಿ ತಮ್ಮ ಪುತ್ರಿಯರನ್ನು ಕುಟುಂಬಗಳು ‘ಅರ್ಹ’ ಪುರುಷರಿಗೆ ಮದುವೆ ಮಾಡಿಕೊಟ್ಟಿವೆ ಎಂದು ‘ಸಿಎನ್‌ಎನ್‌’ ವರದಿ ಮಾಡಿದೆ.

ಇಷ್ಟುಮಾತ್ರವಲ್ಲ, ತಮ್ಮ ಪುತ್ರಿಯರನ್ನು ಮದುವೆಯಾಗಿ ವಿದೇಶಕ್ಕೆ ಕರೆದುಕೊಂಡು ಹೋಗಿ ಎಂದು ‘ಅರ್ಹ’ ಪುರುಷರಿಗೆ ಭಾರೀ ಪ್ರಮಾಣದ ಹಣವನ್ನೂ ಈ ಕುಟುಂಬಗಳು ನೀಡಿವೆ ಎಂದು ವರದಿ ತಿಳಿಸಿದೆ. ಇನ್ನು ಕೆಲ ಪ್ರಕರಣಗಳಲ್ಲಿ ನೀವು ವಿದೇಶಕ್ಕೆ ಹೋಗುವವರೆಗೆ ನಮ್ಮ ಮಗಳನ್ನು ಪತ್ನಿ ಎಂದು ಒಪ್ಪಿಕೊಳ್ಳಿ ಎಂದು ಹಣ ನೀಡಿ ಒಪ್ಪಿಸಲಾಗಿದೆ. ಇವೆಲ್ಲಾ ಮಾನವ ಕಳ್ಳಸಾಗಣೆಯ ಭಾಗವೂ ಆಗಿರಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಅಂಥವರ ಪತ್ತೆ ಕೆಲಸ ಆರಂಭಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ