ಭಾರತಕ್ಕೆ ತಾಲಿಬಾನ್ ಶಾಕ್: ಚೀನಾ ನಮ್ಮ ಪಾಲುದಾರ: ಹೂಡಿಕೆಗೆ ಆಫ್ಘನ್‌ ಮುಕ್ತ!

By Suvarna NewsFirst Published Sep 4, 2021, 7:50 AM IST
Highlights

* ನಮ್ಮ ಗಣಿ ಸಂಪತ್ತು ಬಳಸಬಹುದು: ತಾಲಿಬಾನ್‌

* ಚೀನಾ ನಮ್ಮ ಪಾಲುದಾರ: ಹೂಡಿಕೆಗೆ ಆಫ್ಘನ್‌ ಮುಕ್ತ

ಪೇಶಾವರ(ಸೆ.04): ಅಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ತಾಲಿಬಾನಿಗಳ ಬಗೆಗಿನ ಚೀನಾದ ಮೃದು ಧೋರಣೆ ಬಗ್ಗೆ ಸಾಕಷ್ಟುಅನುಮಾನಗಳು ಮೂಡುತ್ತಿರುವ ಬೆನ್ನಲ್ಲೇ, ಚೀನಾ ನಮ್ಮ ಅತ್ಯಂತ ಪ್ರಮುಖ ಪಾಲುದಾರ ದೇಶ ಎಂದು ತಾಲಿಬಾನ್‌ ಘೋಷಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನಿ ವಕ್ತಾರ ಝಬೀಹುಲ್ಲಾ ಮುಜಾಹಿದ್‌ ‘ಚೀನಾ ನಮ್ಮ ಮಹತ್ವದ ಪಾಲುದಾರ ದೇಶ. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಮತ್ತು ದೇಶ ಮರು ನಿರ್ಮಾಣಕ್ಕೆ ಅದು ಅಣಿಯಾಗಿದೆ. ಇದು ನಮ್ಮ ಪಾಲಿಗೆ ಅತ್ಯದ್ಭುತವಾದ ಅವಕಾಶ. ನಮ್ಮ ದೇಶದಲ್ಲಿ ಸಮೃದ್ಧವಾದ ತಾಮ್ರದ ಗಣಿಗಳಿವೆ. ಅದನ್ನು ಚೀನಾದ ನೆರವಿನೊಂದಿಗೆ ಪುನಾರಂಭಿಸಬಹುದು ಮತ್ತು ಆಧುನೀಕರಣಗೊಳಿಸಬಹುದು. ನಮಗೆ ಚೀನಾ ಇಡೀ ವಿಶ್ವಕ್ಕೆ ರಹದಾರಿ ಇದ್ದಂತೆ’ ಎನ್ನುವ ಮೂಲಕ ದೇಶವನ್ನು ಚೀನೀಯರಿಗೆ ಮುಕ್ತ ಮಾಡುವ ಸುಳಿವು ನೀಡಿದ್ದಾನೆ.

ಇದೇ ವೇಳೆ ‘ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌ ದೇಶಗಳನ್ನು ಚೀನಾದೊಂದಿಗೆ ಬಂದರು, ರಸ್ತೆ, ರೈಲು, ಹೆದ್ದಾರಿ, ಕೈಗಾರಿಕಾ ಪಾರ್ಕ್ ಮೂಲಕ ಜೋಡಿಸುವ ಚೀನಾದ ಒನ್‌ ಬೆಲ್ಟ್‌ ಒನ್‌ ರೋಡ್‌ ಯೋಜನೆಯನ್ನು ಕೂಡಾ ನಾವು ಬೆಂಬಲಿಸುತ್ತೇವೆ’ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಚೀನಾದ ಜೊತೆ ದೊಡ್ಡ ಮಟ್ಟದ ಮೈತ್ರಿಯ ಸುಳಿವು ನೀಡಿದ್ದಾನೆ.

click me!