ಡೆಲ್ಟಾ ವೈರಸ್‌ನಿಂದ ಬ್ರಿಟನ್‌ನಲ್ಲಿ 3ನೇ ಅಲೆ!

By Kannadaprabha NewsFirst Published Jun 21, 2021, 8:24 AM IST
Highlights

* ಡೆಲ್ಟಾ ವೈರಸ್‌ನಿಂದ ಬ್ರಿಟನ್‌ನಲ್ಲಿ 3ನೇ ಅಲೆ

* ಬ್ರಿಟನ್‌ನಲ್ಲಿ ಭಾರೀ ಆತಂಕಕ್ಕೆ ಕಾರಣವಾದ ಭಾರತದ ರೂಪಾಂತರಿ ತಳಿ

* 4 ತಿಂಗಳಲ್ಲೇ ಮೊದಲ ಬಾರಿಗೆ 10000ಕ್ಕಿಂತ ಹೆಚ್ಚಿನ ಪ್ರಕರಣ ದಾಖಲು

ಲಂಡನ್‌(ಜೂ.21): ಇನ್ನೇನು ಸೋಂಕು ನಿಯಂತ್ರಣಕ್ಕೆ ಬಂದ ಖುಷಿಯಲ್ಲಿ ಹಂತಹಂತವಾಗಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಿಸಿದ್ದ ಬ್ರಿಟನ್‌ನಲ್ಲಿ ಇದೀಗ 3ನೇ ಅಲೆ ಕಾಣಿಸಿಕೊಂಡಿರುವುದು ಖಚಿತಪಟ್ಟಿದೆ. ಶುಕ್ರವಾರ ಬ್ರಿಟನ್‌ನಲ್ಲಿ 11007 ಹೊಸ ಸೋಂಕಿತರು ಪತ್ತೆಯಾಗಿದ್ದು ಭಾರೀ ಆತಂಕ ಹುಟ್ಟುಹಾಕಿದೆ. ದೇಶದಲ್ಲಿ ನಿತ್ಯದ ಸೋಂಕಿತರ ಸಂಖ್ಯೆ 10000ದ ಗಡಿ ದಾಟಿದ್ದು ಕಳೆದ 4 ತಿಂಗಳಲ್ಲೇ ಇದೇ ಮೊದಲ ಬಾರಿಗೆ. ಅದರಲ್ಲೂ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿ ಡೆಲ್ಟಾವೈರಸ್‌, ಬ್ರಿಟನ್‌ನಲ್ಲಿ 3ನೇ ಅಲೆಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಲಸಿಕೆಯ ಕೋಟೆಯನ್ನೂ ನುಗ್ಗಬಲ್ಲದು ಎಂದು ಹೇಳಲಾಗುತ್ತಿರುವ ಮತ್ತು ವಿಶ್ವದಲ್ಲೇ ಅತ್ಯಂತ ಹೆಚ್ಚು ಸಾಂಕ್ರಾಮಿಕಕಾರಿ ಎಂದು ಪರಿಗಣಿಸಲ್ಪಟ್ಟಈ ವೈರಸ್‌ನಿಂದಾಗಿ, ನಾವೀಗ ವೈರಸ್‌ ಮತ್ತು ಲಸಿಕೆ ನಡುವಿನ ಸೆಣಸಾಟವನ್ನು ನೋಡುವಂತಾಗಿದೆ ಬ್ರಿಟನ್‌ನಲ್ಲಿ ಲಸಿಕಾ ಅಭಿಯಾನ ಕುರಿತ ಜಂಟಿ ಸಮಿತಿಯ ಸಲಹೆಗಾರ ಪ್ರೊ.ಆ್ಯಡಂ ಫಿನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಹೊಸ ಕೇಸುಗಳ ಪ್ರಮಾಣ ನಿಧಾನವಾಗಿಯಾದರೂ ಏರಿಕೆಯ ಹಾದಿಯಲ್ಲಿದೆ. ಅದು ಇನ್ನಷ್ಟುವೇಗ ಪಡೆಯಲಾರದು ಎಂದು ನಾವು ಆಶಿಸಬಹುದಷ್ಟೇ. ಹೀಗಾಗಿ ಒಂದಂದೂ ಖಚಿತ, ನಾವೀಗ 3ನೇ ಅಲೆಯಲ್ಲಿ ಇದ್ದೇವೆ. ಸೋಂಕಿನ ಪ್ರಮಾಣ ಹೆಚ್ಚಳ ಮತ್ತು ಸಾವನ್ನು ತಡೆಯಲು ನಮಗಿರುವ ಒಂದೇ ದಾರಿ, ಹೆಚ್ಚಿನ ಪ್ರಮಾಣದ ಜನರಿಗೆ ಲಸಿಕೆ ನೀಡುವುದು ಎಂದು ಪ್ರೊ.ಫಿನ್‌ ಹೇಳಿದ್ದಾರೆ.

ದೇಶದಲ್ಲಿ ಡೆಲ್ಟಾಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಶೀಘ್ರವೇ ಜಾರಿಗೊಳಿಸಲು ನಿರ್ಧರಿಸಲಾಗಿದ್ದ ಇನ್ನಷ್ಟುಅನ್‌ಲಾಕ್‌ ಪ್ರಕ್ರಿಯೆಯನ್ನು ಬ್ರಿಟನ್‌ ಸರ್ಕಾರ ಜು.19ರವರೆಗೂ ಮುಂದೂಡಿದೆ.

ಈಗ ಚೀನಾದಲ್ಲೂ ಡೆಲ್ಟಾ ಹಾವಳಿ

ಜಗತ್ತಿಗೆಲ್ಲಾ ಕೊರೋನಾ ಹಬ್ಬಿಸಿದ ಚೀನಾದಲ್ಲೂ ಇದೀಗೆ ಡೆಲ್ಟಾವೈರಸ್‌ ಹಾವಳಿ ಕಾಣಿಸಿಕೊಂಡಿದೆ. ಈ ರೂಪಾಂತರಿ ವೈರಸ್‌ಗೆ ತುತ್ತಾದವರು ತೀವ್ರ ಸ್ವರೂಪದ ಜ್ವರಕ್ಕೆ ತುತ್ತಾಗುತ್ತಿದ್ದು, ಬಹುಬೇಗ ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ ದಕ್ಷಿಣ ಚೀನಾ ಭಾಗದ ವೈದ್ಯರು ಎಚ್ಚರಿಸಿದ್ದಾರೆ. ವುಹಾನ್‌ನಲ್ಲಿ ಮೊದಲಿಗೆ ಕಾಣಿಸಿದ ವೈರಸ್‌ಗೆ ಹೋಲಿಸಿದರೆ ಈ ತಳಿ ಹಬ್ಬುವುದು ಬೇಗ ಆದರೆ ಸೋಂಕಿನ ಪ್ರಮಾಣ ಇಳಿಕೆಯಾಗುವ ಗತಿ ಅತ್ಯಂತ ನಿಧಾನ ಗ್ವಾಂಗ್‌ಝೌ ನಗರದ ಸನ್‌ ಯಾಟ್‌-ಸೆನ್‌ ವಿವಿಯ ಡಾ.ಗ್ವಾನ್‌ ಕ್ಸಿಯಾನ್‌ಡಾಂಗ್‌ ಹೇಳಿದ್ದಾರೆ.

ಡೆಲ್ಟಾ ಏಕೆ ಅಪಾಯಕಾರಿ

- ಇದು ಅತ್ಯಂತ ವೇಗವಾಗಿ ಹಬ್ಬುತ್ತದೆ, ವೈರಸ್‌ ಲೋಡ್‌ ಹೆಚ್ಚು

- ಸೋಂಕಿತರು ಗಂಭೀರ ಸ್ವರೂಪಕ್ಕೆ ತಿರುಗುವ ಅಪಾಯ ಅಧಿಕ

- 1, 2 ಡೋಸ್‌ ತೆಗೆದುಕೊಂಡವರ ಮೇಲೂ ದಾಳಿ ನಡೆಸುತ್ತೆ

click me!