* ತನ್ನ ವಿರುದ್ಧ ಮಾತನಾಡಿದ್ದಕ್ಕೆ ಆಕ್ರೋಶ
* ತಜಕಿಸ್ತಾನ್ ಗಡಿಗೆ ತಾಲಿಬಾನ್ ಆತ್ಮಾಹುತಿ ಪಡೆ ನಿಯೋಜನೆ
ಕಾಬೂಲ್(ಅ.04): ಅಫ್ಘಾನಿಸ್ತಾನವನ್ನು(Afghanistan) ವಶಪಡಿಸಿಕೊಂಡ ನಂತರ ತಾಲಿಬಾನ್ ನಡೆಸುತ್ತಿರುವ ದೌರ್ಜನ್ಯಗಳ ಕುರಿತು ಮಾತನಾಡಿದ್ದ ನೆರೆಯ ತಜಕಿಸ್ತಾನ್(Tajikistan) ದೇಶದ ವಿರುದ್ಧ ಸಿಡಿದೆದ್ದಿರುವ ತಾಲಿಬಾನ್ ಉಗ್ರರು, ಇದೀಗ ಆ ದೇಶದ ಭಾಗದಲ್ಲಿ ಆತ್ಮಾಹುತಿ ಬಾಂಬ್ ಪಡೆಯನ್ನು ನಿಯೋಜಿಸಿದೆ.
ಅಫ್ಘಾನಿಸ್ತಾನವನ್ನು ಮರುವಶಪಡಿಸಿಕೊಳ್ಳುವಲ್ಲಿ ಮುಖ್ಯವಾಗಿ ಕಾರಣವಾದ ಲಷ್ಕರ್ ಎ ಮನ್ಸೂರಿ ಎಂಬ ವಿಶೇಷ ಆತ್ಮಾಹುತಿ ಪಡೆಯನ್ನು ಅದು ನಿಯೋಜಿಸಿದೆ.
ತಾಲಿಬಾನ್ ವಿರುದ್ಧ ಹೋರಾಡುತ್ತಿರುವ ಪಂಜಶೀರ್(Panjshir) ಪ್ರಾಂತ್ಯದ ಸೈನಿಕರಿಗೆ ತಜಕಿಸ್ತಾನ್ ಆಶ್ರಯ ನೀಡಿತ್ತು. ಅಲ್ಲದೆ, ತಾಲಿಬಾನ್(Taliban) ಆಡಳಿತದಲ್ಲಿ ಮತ್ತಷ್ಟುಬುಡಕಟ್ಟು ಜನರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿತ್ತು. ಜೊತೆಗೆ ಬಹಳಷ್ಟುಉಗ್ರಗಾಮಿ ಪಡೆಗಳು ಬೆಳೆಯಲು ತಾಲಿಬಾನ್ ಸಹಕಾರ ನೀಡುತ್ತಿದೆ.
ಅಫ್ಘಾನಿಸ್ತಾನ ಜಾಗತಿಕವಾಗಿ ಉಗ್ರಗಾಮಿಗಳ ಆಶ್ರಯ ತಾಣವಾಗುತ್ತಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಜಕಿಸ್ತಾನ್ ಹೇಳಿತ್ತು. ತಮ್ಮ ಆಂತರಿಕ ವಿಷಯದಲ್ಲಿ ಉಳಿದ ದೇಶಗಳು ತಲೆ ಹಾಕಬಾರದು ಎಂದಿರುವ ತಾಲಿಬಾನ್ ತಜಕಿಸ್ತಾನ್ ಗಡಿಯಲ್ಲಿ ಆತ್ಮಾಹುತಿ ಬಾಂಬರ್ ಪಡೆಯನ್ನು ನಿಯೋಜಿಸಿದೆ.
ತಾಲಿಬಾನ್ ಮತ್ತು ತಜಕಿಸ್ತಾನದ ನಡುವೆ ಬಹಿರಂಗವಾಗಿ ಮಾತಿನ ಸಮರ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂಥದ್ದೊಂದು ಬೆಟಾಲಿಯನ್ ನಿಯೋಜನೆಯ ಘೋಷಣೆಯನ್ನು ತಾಲಿಬಾನ್ ಮಾಡಿದ್ದು ಮಹತ್ವದ ಬೆಳವಣಿಗೆಯೆನಿಸಿದೆ. ಅದರಲ್ಲೂ ಅಫ್ಘಾನ್-ತಜಿಕಿಸ್ತಾನ್ ಗಡಿಯಲ್ಲೇ ನಿಯೋಜಿಸಲು ಮುಂದಾಗಿದೆ. ಇತ್ತೀಚೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ತಜಿಕ್ ಅಧ್ಯಕ್ಷ ಎಮೋಮಾಲಿ ರಹಮಾನ್, ಅಫ್ಘಾನಿಸ್ತಾನದಲ್ಲಿ ಎದುರಾಗಿರುವ ರಾಜಕೀಯ ಮತ್ತು ಮಿಲಿಟರಿ ಅಸ್ಥಿರತೆಯನ್ನು, ವಿವಿಧ ಉಗ್ರ ಸಂಘಟನೆಗಳು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ.
ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಅಫ್ಘಾನಿಸ್ತಾನ ಮತ್ತೊಮ್ಮೆ ವೇದಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಹೇಳಿದ್ದರು. ಅದಕ್ಕೆ ತಿರುಗೇಟು ನೀಡಿದ್ದ, ಅಫ್ಘಾನಿಸ್ತಾನದ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ. ಇಲ್ಲಿನ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ತಾಲಿಬಾನ್ ಯಾವುದೇ ಅನ್ಯ ದೇಶಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿತ್ತು. ಅದಾದ ಬೆನ್ನಲ್ಲೇ ಈಗ ತಜಕಿಸ್ತಾನದ ಗಡಿಯಲ್ಲಿ ಸೂಸೈಡ್ ಬಾಂಬರ್ ಬೆಟಾಲಿಯನ್ ನಿಯೋಜನೆ ಮಾಡಲು ತಾಲಿಬಾನ್ ಮುಂದಾಗಿದೆ.