ಅಫ್ಘಾನಿಸ್ತಾನದಲ್ಲಿ ತಾಲಿಬಾಲ್ ಆಡಳಿತ ಆರಂಭವಾದ ದಿನದಿಂದಲೂ ತನ್ನ ಒಂದಲ್ಲಾ ಒಂದು ನಿರ್ಧಾರಗಳಿಂದ ಜನರ ನೆಮ್ಮದಿಗೆ ಭಂಗ ತರುವಂಥ ಕೆಲಸ ಮಾಡುತ್ತಿದೆ. ಇತ್ತೀಚೆಗೆ ತಾಲಿಬಾನ್ ಹೊಸ ಆದೇಶ ನೀಡಿದ್ದು, ಅದರ ಅನ್ವಯ ಅಫ್ಘಾನಿಸ್ತಾನದ ಹೆಣ್ಣುಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವಂತಿಲ್ಲ. ಈ ನಿರ್ಧಾರ, ಹುಡುಗರಿಗೆ ಅನ್ವಯ ಆಗೋದಿಲ್ಲ.
ಕಾಬೂಲ್ (ಆ.27): ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೆಣ್ಣಮಕ್ಕಳು ವಿದೇಶಕ್ಕೆ ತೆರಳುವುದನ್ನು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ನಿರ್ಬಂಧಿಸಿದೆ. ಕಜಾಕಿಸ್ತಾನ ಹಾಗೂ ಕತಾರ್ ದೇಶಗಳಿಗೆ ಸಾಮಾನ್ಯವಾಗಿ ಅಫ್ಘಾನಿಸ್ತಾನದ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದರು. ಇದಕ್ಕೆ ತಾಲಿಬಾನ್ ಸರ್ಕಾರ ನಿಷೇಧ ಹೇರಿದ್ದು ಕೇವಲ ಗಂಡುಮಕ್ಕಳು ಮಾತ್ರವೇ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬಹುದು ಎಂದು ಹೇಳಿದೆ. ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಮೊದಲು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿತು. ತಾಲಿಬಾನ್ ಸರ್ಕಾರವು ಹುಡುಗಿಯರಿಗಾಗಿ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಮೊದಲ ಹಂತದಲ್ಲಿ ಮುಚ್ಚಿತ್ತು. ಆದರೆ, ದೇಶದಲ್ಲಿ ಮಹಿಳೆಯರ ಪ್ರತಿಭಟನೆಗಳು ತೀವ್ರವಾದ ಬೆನ್ನಲ್ಲಿಯೇ 6ನೇ ತರಗತಿಯವರೆಗೆ ಮಹಿಳೆಯರಿಗೂ ಶಾಲೆಯನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಇತ್ತೀಚೆಗೆ, ಅಫ್ಘಾನಿಸ್ತಾನದ ಗೃಹ ಸಚಿವ ಮತ್ತು ತಾಲಿಬಾನ್‌ನ ಸಹ-ಉಪ ನಾಯಕ ಸಿರಾಜುದ್ದೀನ್ ಹಕ್ಕಾನಿ ಅವರು ಹೈಸ್ಕೂಲ್ ತೆರೆಯುವ ಭರವಸೆ ನೀಡಿದ್ದರು. ಆದರೆ ಇದೀಗ ಉನ್ನತ ಶಿಕ್ಷಣದ ವಿರುದ್ಧ ಹೊಸ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಅದರೊಂದಿಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಬದುಕು ಇನ್ನಷ್ಟು ನರಕವಾಗುವುದು ನಿಶ್ಚಿತವಾಗಿದೆ.
ಹೆಣ್ಣುಮಕ್ಕಳಿದ್ದರೆ ಮನೆಗೆ ಕಡಿಮೆ ಅಹಾರ: ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡ, ತಾಲಿಬಾನ್ ತನ್ನ ಹೇಳಿಕೆಯಲ್ಲಿ ಹೇಳಿದ್ದ ಪ್ರಮುಖವಾದ ಮಾತು, ತಾವು ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತೇವೆ ಎನ್ನುವುದು. ಆದರೆ, ಕಳೆದ ಒಂದು ವರ್ಷದಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಯನ್ನು ಇಡೀ ಜಗತ್ತು ಮೂಖವಾಗಿ ನೋಡುತ್ತಿದೆ. ಹೆಣ್ಣುಮಕ್ಕಳು ಇರುವ ಕುಟುಂಬಕ್ಕೆ ತೀರಾ ಕಡಿಮೆ ಆಹಾರವನ್ನು ನೀಡಲಾಗುತ್ತಿದೆ. ಇನ್ನು ಗಂಡುಮಕ್ಕಳಿದ್ದ ಕುಟುಂಬಕ್ಕೆ ಹೆಚ್ಚು ಆಹಾರ, ಪಡಿತರ ನೀಡುವ ಮೂಲಕ ತಾರತಮ್ಯ ಎಸಗಲಾಗುತ್ತಿದೆ.
ನಿರಂತರವಾಗಿ ಹಕ್ಕುಗಳ ಮೇಲೆ ಮಿತಿ: ಕಾಬೂಲ್ ವಶಪಡಿಸಿಕೊಂಡ ನಂತರ ಮಹಿಳೆಯರ ಹಕ್ಕುಗಳ ಬಗ್ಗೆ ತಾಲಿಬಾನ್ ಮಾತನಾಡಿತ್ತು. ನಾವು 1996 ರ ಆಡಳಿತದಂತೆ ಈ ಬಾರಿ ಮಹಿಳೆಯರ ಹಕ್ಕುಗಳೊಂದಿಗೆ ಆಟವಾಡುವುದಿಲ್ಲ. ಅವರು ಇಸ್ಲಾಮಿನ ವ್ಯಾಪ್ತಿಯಲ್ಲಿ ಉಳಿಯುವ ಮೂಲಕ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತೇವೆ ಎಂದಿತ್ತು. ಆದರೆ ಪ್ರತಿದಿನ ತಾಲಿಬಾನ್ ಮಹಿಳೆಯರ ಹಕ್ಕುಗಳನ್ನು ಮಿತಿಗೊಳಿಸುತ್ತಿದೆ. ಶಾಲೆಗಳನ್ನು ಮುಚ್ಚುವುದು, ಮಹಿಳೆಯರಿಗೆ ಸರ್ಕಾರಿ ಕಚೇರಿಗಳ ಬಾಗಿಲುಗಳನ್ನು ಮುಚ್ಚುವ ಮೂಲಕ ತಾಲಿಬಾನ್ ತನ್ನ ಹಳೆಯ ಸ್ವರೂಪಕ್ಕೆ ಬರುತ್ತಿದೆ.
ತಾಲಿಬಾನ್ ಈವರೆಗೂ ನೀಡಿರುವ ಪ್ರಮುಖ ಆರ್ಡರ್‌ಗಳು
- ಮಾರ್ಚ್‌ನಲ್ಲಿ ತಾಲಿಬಾನ್ ಮಹಿಳೆಯರು ಏಕಾಂಗಿಯಾಗಿ ವಿಮಾನ ಪ್ರಯಾಣ ಮಾಡುವಂತಿಲ್ಲ ಎಂದು ಹೇಳಿತ್ತು. ತಾಲಿಬಾನ್ ಜಾರಿಗೆ ತಂದಿರುವ ಈ ಆದೇಶದಲ್ಲಿ ಪುರುಷನ (ಪೋಷಕ ಅಥವಾ ಪತಿ) ಸಮ್ಮುಖದಲ್ಲಿ ಮಾತ್ರ ಮಹಿಳೆಯರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು.
- ತಾಲಿಬಾನ್ ಆಡಳಿತವು ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಮಹಿಳೆಯರು ಹಾಗೂ ಪುರುಷರು ಜೊತೆಯಾಗಿ ಹೋಗುವಂತಿಲ್ಲ ಎಂದು ಹೇಳಿದೆ. ಹೊಸ ತೀರ್ಪಿನ ಪ್ರಕಾರ, ಪುರುಷರು ಈಗ ಬುಧವಾರದಿಂದ ಶನಿವಾರದವರೆಗೆ ಮತ್ತು ಮಹಿಳೆಯರು ಭಾನುವಾರದಿಂದ ಮಂಗಳವಾರದವರೆಗೆ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋಗಲು ಸಾಧ್ಯವಾಗುತ್ತದೆ ಎಂದು ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.
ತಾಲಿಬಾನ್ ಸರ್ಕಾರಕ್ಕೆ ಒಂದು ವರ್ಷ: 365 ದಿನದಲ್ಲಿ ಗಾಂಧಾರದಲ್ಲಿ ಬದಲಾಗಿದ್ದೇನೇನು?
- ಮಹಿಳೆಯರು ಸಾರ್ವಜನಿಕವಾಗಿ ಮುಖ ಮುಚ್ಚಿಕೊಳ್ಳಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಬೇಕು ಎಂದು ತಾಲಿಬಾನ್ ಆದೇಶ ಹೊರಡಿಸಿತ್ತು. ಮಹಿಳಾ ಆಂಕರ್ ಸುದ್ದಿ ನಿರೂಪಣೆ ಮಾಡುವಾಗ ಮುಖ ಮುಚ್ಚಿಕೊಳ್ಳುವಂತೆ ತಾಲಿಬಾನ್ ಆದೇಶಿಸಿದೆ.
- ಅಫ್ಘಾನಿಸ್ತಾನದ ಅತ್ಯಂತ ದೂರದ ನಗರವಾದ ಹೆರಾತ್‌ನಲ್ಲಿರುವ ತಾಲಿಬಾನ್ ಅಧಿಕಾರಿಗಳು ಮಹಿಳೆಯರಿಗೆ ಪರವಾನಗಿ ನೀಡದಂತೆ ಎಲ್ಲಾ ಡ್ರೈವಿಂಗ್ ಸಂಸ್ಥೆಗಳಿಂದ ಆದೇಶವನ್ನು ಹೊರಡಿಸಿದ್ದಾರೆ.
ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್ ನಾಯಕ ರಹೀಮುಲ್ಲಾ ಹಕ್ಕಾನಿ ಸಾವು!
- ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಿ ತಾಲಿಬಾನ್ ಸರ್ಕಾರ ಆದೇಶ ಹೊರಡಿಸಿದೆ. ತಾಲಿಬಾನ್ ಹೊರಡಿಸಿದ ಹೇಳಿಕೆಯಲ್ಲಿ, ಪುರುಷ ಸಂಬಂಧಿ ಇಲ್ಲದೆ ದೂರದ ಪ್ರಯಾಣ ಮಾಡುವ ಮಹಿಳೆಯರನ್ನು ಪ್ಯಾಸೆಂಜರ್ ಕಾರಿನಲ್ಲಿ ಹಾಕಬಾರದು ಎಂದು ಹೇಳಲಾಗಿದೆ.