
ಕಾಬೂಲ್(ಆ.22): ಮಹಿಳೆಯರು ಬುರ್ಖಾ ಧರಿಸದಿದ್ದರೆ ಶರಿಯಾ ನಿಯಮಗಳ ಉಲ್ಲಂಘನೆ ಎಂದು ಛಡಿ ಏಟಿನ ಶಿಕ್ಷೆ ನೀಡುವ ತಾಲಿಬಾನಿ ಉಗ್ರರು, ಇದೀಗ ಅಮಾಯಕ ಯುವತಿಯರನ್ನು ಲೈಂಗಿಕ ಗುಲಾಮಗಿರಿಗೆ ಬಳಸಿಕೊಳ್ಳುವ ಸಲುವಾಗಿ ಶವಪೆಟ್ಟಿಗೆಯಲ್ಲಿಟ್ಟು ವಿದೇಶಗಳಿಗೆ ರವಾನೆ ಮಾಡುತ್ತಿದ್ದಾರೆ ಎಂಬ ಅತ್ಯಂತ ಹೇಯ ಸಂಗತಿ ಬೆಳಕಿಗೆ ಬಂದಿದೆ. ಇದರೊಂದಿಗೆ ಮಹಿಳೆಯರನ್ನು ಸಮಾನವಾಗಿ ಕಾಣುತ್ತೇವೆ ಎಂದು ತಾಲಿಬಾನಿಗಳು ಆಡುತ್ತಿರುವುದೆಲ್ಲ ಬರೀ ನಾಟಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ದೇಶವನ್ನು ವಶಕ್ಕೆ ತೆಗೆದುಕೊಂಡ ಒಂದೇ ವಾರದಲ್ಲಿ ತಾಲಿಬಾನಿಗಳು ದುಂಡಾವರ್ತನೆ ಆರಂಭಿಸಿದ್ದಾರೆ. ಅವರು ಮಹಿಳೆಯರ ಮೇಲೆ ನಾನಾ ರೀತಿಯ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಉಗ್ರರಿಗೆ ಹೆದರಿ ದೇಶ ಬಿಟ್ಟು ಪಲಾಯನ ಮಾಡಿ ಸದ್ಯ ಅಮೆರಿಕದಲ್ಲಿ ಆಶ್ರಯ ಪಡೆದಿರುವ ನಿವೃತ್ತ ನ್ಯಾಯಾಧೀಶೆ ನಜಿಲಾ ಅಯೂಬಿ ಬಹಿರಂಗಪಡಿಸಿದ್ದಾರೆ. ಅವರ ಈ ಹೇಳಿಕೆಗಳು ಉಗ್ರರ ಕ್ರೌರ್ಯದ ಮತ್ತಷ್ಟುಮುಖವನ್ನು ಬಯಲು ಮಾಡಿವೆ.
ಗುಂಡಿನ ದಾಳಿಗೆ ಬೆಚ್ಚಿ ರನ್‌ವೇಗೆ ಓಡಿದ್ರು: ಆಫ್ಘನ್‌ನಲ್ಲಿ ಕನ್ನಡಿಗನ ಕರಾಳ ಅನುಭವ
ಲೈಂಗಿಕ ಕಿರುಕುಳ ಸಾಮಾನ್ಯ:
ಕಳೆದ ಕೆಲ ದಿನಗಳಿಂದ ತಾಲಿಬಾನಿಗಳು ಯುವತಿಯರನ್ನು ಶವಪೆಟ್ಟಿಗೆಯಲ್ಲಿಟ್ಟು ಹಲವು ದೇಶಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಅವರನ್ನೆಲ್ಲಾ ಲೈಂಗಿಕ ಗುಲಾಮಗಿರಿಗಾಗಿ ವಿದೇಶಗಳಿಗೆ ಮಾರಾಟ ಮಾಡಲಾಗಿದೆ. ಅಷ್ಟುಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಉಗ್ರರು ಆಫ್ಘನ್ ಮಹಿಳೆಯರನ್ನು ಗುಲಾಮರಂತೆ ಇಟ್ಟುಕೊಂಡು ಅವರನ್ನು ಆಹಾರ ಮಾಡಿಕೊಡಲು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಪ್ರಕರಣದಲ್ಲಿ ಮಹಿಳೆ ರುಚಿಯಾಗಿ ಅಡುಗೆ ಮಾಡಿಲ್ಲ ಎಂದು ಆಕೆಯನ್ನು ಜೀವಂತವಾಗಿ ದಹಿಸಿದ್ದಾರೆ. ಇನ್ನು ಮಹಿಳೆಯರಿಗೆ ಲೈಂಗಿಕ ಕಿರುಕುಳ ಪ್ರಕರಣಗಳಂತೂ ಸಾಮಾನ್ಯ ಎಂದು ಹೇಳಿದ್ದಾರೆ.
ಅಲ್ಲದೆ ದೇಶ ತಮ್ಮ ವಶವಾಗುತ್ತಲೇ ಯುವತಿಯರನ್ನು ಮದುವೆಯಾಗುವಂತೆ ಉಗ್ರರು ಪೀಡಿಸುತ್ತಿದ್ದಾರೆ. ಒಪ್ಪದೇ ಇದ್ದವರ ಮೇಲೆ ಹಲ್ಲೆ ನಡೆಸುವ, ಅವರಿಗೆ ಲೈಂಗಿಕ ಕಿರುಕುಳ ನಿಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಅಂಥ ಯುವತಿಯರ ಪೋಷಕರಿಗೂ ಉಗ್ರರು ಬೆದರಿಕೆ ಹಾಕುತ್ತಿದ್ದಾರೆ ಎಂದು ನಜಿಲಾ ಅಯೂಬಿ ಹೇಳಿದ್ದಾರೆ.
ಅಫ್ಘಾನ್ ಸಹಾಯವಾಣಿ ಕೇಂದ್ರಕ್ಕೆ 5 ದಿನದಲ್ಲೇ 9,200 ಪ್ರಶ್ನೆಗಳು!
ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಿದ್ದಕ್ಕಾಗಿ ತಮಗೆ ಉಗ್ರರಿಂದ ಜೀವ ಬೆದರಿಕೆ ಇತ್ತು. ಹೀಗಾಗಿ ನಾನು ದೇಶ ಬಿಟ್ಟು ಪಲಾಯನ ಮಾಡುವಂತಾಯಿತು ಎಂದು ಅಯೂಬಿ ಹೇಳಿದ್ದಾರೆ.
ಅಯೂಬಿ ಹೇಳಿದ್ದೇನು?
- ತಾಲಿಬಾನಿಗಳು ಯುವತಿಯರನ್ನು ಶವಪೆಟ್ಟಿಗೆಯಲ್ಲಿಟ್ಟು ಹಲವು ದೇಶಗಳಿಗೆ ಕಳಿಸುತ್ತಿದ್ದಾರೆ
- ಈ ಯುವತಿಯರನ್ನು ಲೈಂಗಿಕ ಗುಲಾಮಗಿರಿಗಾಗಿ ವಿದೇಶಿಗರಿಗೆ ಮಾರಾಟ ಮಾಡಲಾಗಿದೆ
- ತಾಲಿಬಾನಿಗಳು ಮಹಿಳೆಯರನ್ನು ಗುಲಾಮರಂತೆ ಇಟ್ಟುಕೊಂಡು ಅಡುಗೆ ಮಾಡಿಸುತ್ತಿದ್ದಾರೆ
ಅಫ್ಘಾನಿಸ್ತಾನ ಜನ ಕಂಗಾಲು: ಆಶ್ರಯ ನೀಡಿ ಮಾನವೀಯತೆ ಮೆರೆದ ಭಾರತ, ಇತರ ದೇಶಗಳು!
- ಅಡುಗೆ ಚೆನ್ನಾಗಿ ಮಾಡಿಲ್ಲ ಎಂದು ಇತ್ತೀಚೆಗೆ ಒಬ್ಬಳನ್ನು ಜೀವಂತವಾಗಿ ದಹಿಸಿದ್ದಾರೆ
- ತಮ್ಮನ್ನು ಮದುವೆಯಾಗಲು ಒಪ್ಪದ ಯುವತಿಯರನ್ನು ಪೀಡಿಸಿ, ದೌರ್ಜನ್ಯ ಎಸಗುತ್ತಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ