* ಅಪ್ಘಾನಿಸ್ತಾನದಲ್ಲಿ ಇರಾನ್ ಮಾದರಿ ಸರ್ಕಾರ
* ದೋಹಾ ಗ್ಯಾಂಗ್‌ಗೆ ಹೆಚ್ಚು ಮನ್ನಣೆ
* ಬರಾದರ್ ಆಫ್ಘನ್‌ನ ನೂತನ ಅಧ್ಯಕ್ಷ
* ಇಂದು ಸರ್ಕಾರ ರಚನೆ, ಮಹಿಳೆಯರಿಗೆ ಸರ್ಕಾರದಲ್ಲಿ ಸ್ಥಾನವಿಲ್ಲ
ಪೇಶಾವರ(ಆ.04): ಅಷ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ರಚನೆ ಪ್ರಕ್ರಿಯೆ ತುಸು ವಿಳಂಬಗೊಂಡಿದ್ದು, ಶುಕ್ರವಾರದ ಬದಲಿಗೆ ಶನಿವಾರ ರಚನೆಯಾಗಲಿದೆ. ಇದೇ ವೇಳೆ ತಾಲಿಬಾನಿ ಸಹ ಸಂಸ್ಥಾಪಕರಲ್ಲಿ ಒಬ್ಬನಾದ ಮುಲ್ಲಾ ಬರಾದರ್ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಧಾರ್ಮಿಕ ಮುಖಂಡ ಮುಲ್ಲಾ ಹೈಬತುಲ್ಲಾಹ್ ಅಖುಂಜಾದಾಗೆ ದೇಶದ ಪರಮೋಚ್ಚ ನಾಯಕನ ಸ್ಥಾನ ನೀಡಲಾಗಿರುವ ಕಾರಣ, ಇವರ ಅಡಿಯಲ್ಲೇ ಬರಾದರ್ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು ಇರಾನ್ ಮಾದರಿಯಲ್ಲಿ ರಚನೆಯಾಗಲಿರುವ ಸರ್ಕಾರದಲ್ಲಿ, ಶುರಾ ಅಥವಾ ಧಾರ್ಮಿಕ ಮಂಡಳಿ ಸರ್ಕಾರದಲ್ಲಿ ಕಾರ್ಯಾಂಗದ ಅಧಿಕಾರವನ್ನು ನಿರ್ವಹಿಸಲಿದ್ದು, ದೇಶದ ಆಡಳಿತವನ್ನು ನಿಯಂತ್ರಿಸಲಿದೆ. ಈ ಮಂಡಳಿ ತಾಲಿಬಾನ್‌ನ ಹಿರಿಯ ಮುಖಂಡರು ಮತ್ತು ಇತರ ಜನಾಂಗೀಯ ಗುಂಪುಗಳನ್ನು ಒಳಗೊಂಡಿರಲಿದೆ. ಆದರೆ, ಈ ಮಂಡಳಿಯಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸಿಲ್ಲ. ಸರ್ಕಾರದಲ್ಲಿ ಶೇ.80ರಷ್ಟುಮಂದಿ ತಾಲಿಬಾನ್‌ನ ದೋಹಾ ತಂಡದ ಮುಖಂಡರೇ ಇರಲಿದ್ದಾರೆ.
ಹಕ್ಕಾನಿ ನೆಟ್‌ವರ್ಕ್ ಕೂಡ ಸರ್ಕಾರದಲ್ಲಿ ಭಾಗಿಯಾಗಲಿದೆ. ತಾಲಿಬಾನ್ ಸ್ಥಾಪಕ ಮುಲ್ಲಾ ಓಮರ್ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ಹಾಗೂ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟನೆಕ್‌ಝೈಕ್ ಸರ್ಕಾರದಲ್ಲಿ ಹಿರಿಯ ಹುದ್ದೆಗಳನ್ನು ಪಡೆಯಲಿದ್ದಾರೆ. ಆದರೆ, ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಮತ್ತು ಮಾಜಿ ಸಿಇಒ ಅಬ್ದುಲ್ಲಾ ಅಬ್ದುಲ್ಲಾ ಅವರಿಗೆ ಮಂಡಳಿಯಲ್ಲಿ ಸ್ಥಾನ ದೊರೆಯುವುದು ಅನುಮಾನವಾಗಿದೆ.
ಅಷ್ಘಾನಿಸ್ತಾನ ಇಷ್ಟುದಿನ ಅಮೆರಿಕದ ಹಿಡಿತದಲ್ಲಿದ್ದ ಕಾರಣ ಕತಾರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್‌ನ ಹಿರಿಯ ಮುಖಂಡರು ಆಶ್ರಯ ಪಡೆದುಕೊಂಡಿದ್ದು, ರಾಜಕೀಯ ಕಚೇರಿಯನ್ನು ಹೊಂದಿದ್ದಾರೆ. ಕತಾರ್‌ನಿಂದಲೇ ತಮ್ಮಲ್ಲೇ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕತಾರ್‌ನಲ್ಲಿರುವ ತಾಲಿಬಾನ್ ಕಚೇರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.