
ಕಾಬೂಲ್(ಸೆ.07): ‘ಪಂಜ್‌ಶೀರ್‌ನ ಎಲ್ಲಾ 8 ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಇಡೀ ಪ್ರಾಂತ್ಯ ನಮ್ಮ ವಶಕ್ಕೆ ಬಂದಿದೆ. ಇದರೊಂದಿಗೆ ಅಷ್ಘಾನಿಸ್ತಾನದಲ್ಲಿನ ಯುದ್ಧ ಮುಗಿದಿದೆ’ ಎಂದು ತಾಲಿಬಾನ್ ಸಂಘಟನೆ ಸೋಮವಾರ ಹೇಳಿಕೆ ಘೋಷಿಸಿಕೊಂಡಿದೆ. ಅಲ್ಲದೆ ತನ್ನ ವಿರುದ್ಧ ತೊಡೆ ತಟ್ಟಿದ್ದ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ನೆರೆಯ ಕಜಕಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಿದೆ.
ಈವರೆಗೆ ಬಹುತೇಕ ಅಷ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಬಂದಿದ್ದರೂ ಪಂಜಶೀರ್ ಮಾತ್ರ ವಿರೋಧಿ ಪಡೆಗಳ ವಶದಲ್ಲಿತ್ತು. ಈ ಹಿನ್ನೆಲೆಯಲ್ಲಿ ತಾಲಿಬಾನ್ನ ಈ ಹೇಳಿಕೆಗೆ ಮಹತ್ವ ಬಂದಿದೆ.
ಆದರೆ ಈ ಹೇಳಿಕೆಗಳನ್ನು ಪಂಜಶೀರ್ನ ತಾಲಿಬಾನ್ ವಿರೋಧಿ ಪಡೆಗಳ ನಾಯಕ ಅಹಮದ್ ಮಸೌದ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ‘ನನ್ನ ರಕ್ತದ ಕೊನೆಯ ಹನಿ ಇರುವವರೆಗೂ ಹೋರಾಡುವೆ. ಈಗಲೂ ಹೋರಾಟ ಮುಂದುವರೆದಿದೆ’ ಎಂದಿರುವ ಮಸೌದ್, ಇಡೀ ದೇಶಾದ್ಯಂತ ತಾಲಿಬಾನಿಗಳ ವಿರುದ್ಧ ದಂಗೆ ಏಳುವಂತೆ ಜನರಿಗೆ ಕರೆ ನೀಡಿದ್ದಾರೆ.
ಮತ್ತೊಂದೆಡೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಅಮ್ರುಲ್ಲಾ ಸಲೇಹ್, ‘ನಾವು ಈಗಲೂ ಪಂಜ್‌ಶೀರ್ ಜನರಿಗಾಗಿ ಹೋರಾಡುತ್ತಿದ್ದೇವೆ ಮತ್ತು ಹೋರಾಟ ಮುಂದುವರೆಯಲಿದೆ’ ಎಂದು ಹೇಳಿದ್ದಾರೆ.
ವಶಕ್ಕೆ?:
ಇಡೀ ಅಫ್ಘಾನಿಸ್ತಾನ ವಶವಾಗಿ 20 ದಿನ ಕಳೆದರೂ ಉತ್ತರ ಕಾಬೂಲ್‌ನ ಪಂಜ್‌ಶೀರ್ ಕಣಿವೆ ಮಾತ್ರ ಇದುವರೆಗೆ ತಾಲಿಬಾನ್ ವಶವಾಗಿರಲಿಲ್ಲ. ಹೀಗಾಗಿ ಕಳೆದೊಂದು ವಾರದಿಂದ, ಪಂಜ್‌ಶೀರ್‌ಗೆ ತೆರಳುವ ಏಕೈಕ ರಸ್ತೆಮಾರ್ಗ ಮತ್ತು ಅಲ್ಲಿನ ಇಂಟರ್ನೆಟ್ ಸಂಪರ್ಕವನ್ನು ತಾಲಿಬಾನಿಗಳು ಕಟ್ ಮಾಡಿದ್ದರು. ಈ ಮೂಲಕ ಅಲ್ಲಿಯ ಜನರು ಆಹಾರ ಮತ್ತ ಮಾಹಿತಿ ಸಮಸ್ಯೆ ಎದುರಿಸುವಂತೆ ಮಾಡಿದ್ದರು. ಜೊತೆಗೆ ಪಾಕಿಸ್ತಾನದ ಸೇನೆ ನೆರವಿನಿಂದ ತಮ್ಮ ‘ಉಗ್ರರನ್ನು’ ಪಾಕ್ ವಿಮಾನಗಳ ಮೂಲಕ ಏರ್‌ಡ್ರಾಪ್ ಮಾಡಿ, ಹೋರಾಟ ನಡೆಸುತ್ತಿದ್ದರು.
ಈ ನಡುವೆ ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಪಂಜ್‌ಶೀರ್ ನಾಯಕ ಮಸೌದ್, ನಮ್ಮ ಮೇಲಿನ ದಾಳಿಯನ್ನು ನಿಲ್ಲಿಸಿದರೆ ನಾವು ನಮ್ಮ ಶಸ್ತಾ್ರಸ್ತ್ರಗಳನ್ನು ಕೆಳಗಿಳಿಸಿ ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್, ‘ಪಂಜ್‌ಶೀರ್‌ನ 8 ಜಿಲ್ಲೆಗಳ ಪೈಕಿ ಕಡೆಯದಾಗಿ ರೋಖಾ ಜಿಲ್ಲೆಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಇಡೀ ಪ್ರಾಂತ್ಯ ನಮ್ಮ ವಶಕ್ಕೆ ಬಂದಿದೆ. ಅಷ್ಘಾನಿಸ್ತಾನದಲ್ಲಿನ ಯುದ್ಧ ಮುಗಿದಿದೆ’ ಎಂದು ಹೇಳಿದ್ದಾನೆ.
ಪಂಜಶೀರ್ ಗವರ್ನರ್ ಬಂಗಲೆ ಆವರಣದಲ್ಲಿ ತಾಲಿಬಾನ್ ಧ್ವಜ ಹಾರಿಸಲಾದ ದೃಶ್ಯಗಳೂ ವೈರಲ್ ಆಗಿವೆ.
ದಂಗೆ ಏಳಿ:
ಈ ನಡುವೆ ತಾಲಿಬಾನಿಗಳ ವಿರುದ್ಧ ದೇಶಾದ್ಯಂತ ಜನರು ದಂಗೆ ಏಳಬೇಕು ಎಂದು ಪಂಜ್‌ಶೀರ್‌ನ ನಾಯಕ ಅಹಮದ್ ಮಸೌದ್ ಕರೆ ಕೊಟ್ಟಿದ್ದಾರೆ. ಜೊತೆಗೆ ಈಗಲೂ ಪಂಜ್‌ಶೀರ್‌ನಲ್ಲಿ ತಾಲಿಬಾನಿಗಳ ವಿರುದ್ಧ ನಮ್ಮ ಹೋರಾಟ ಮುಂದುವರೆದಿದೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಸೈನಿಕರು ಹೊಡೆದುರುಳಿಸಿದ್ದು ಎಂದು ಹೇಳಲಾದ ಪಾಕಿಸ್ತಾನ ಸೇನೆಯ ವಿಮಾನದ ಫೋಟೋ ಒಂದನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ