ತಾಲಿಬಾನ್‌ ಸಂಪೂರ್ಣ ವಶದತ್ತ ಆಷ್ಘಾನಿಸ್ತಾನ!

By Suvarna NewsFirst Published Aug 15, 2021, 7:23 AM IST
Highlights

* ರಾಜಧಾನಿಗೆ 11 ಕಿ.ಮೀ. ದೂರದಲ್ಲಿ ಉಗ್ರರು

* ತಾಲಿಬಾನ್‌ ಸಂಪೂರ್ಣ ವಶದತ್ತ ಆಷ್ಘಾನಿಸ್ತಾನ

* ಆಫ್ಘನ್‌ ಯೋಧರ ಜತೆ ನಿರ್ಣಾಯಕ ಕದನ

ಕಾಬೂಲ್‌(ಆ.15): ಆಷ್ಘಾನಿಸ್ತಾನದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಭಾಗವನ್ನು ಸಂಪೂರ್ಣ ವಶಪಡಿಸಿಕೊಂಡಿರುವ ತಾಲಿಬಾನ್‌ ಉಗ್ರರು ಇದೀಗ ರಾಜಧಾನಿ ಕಾಬೂಲ್‌ನಿಂದ ಕೇವಲ 11 ಕಿ.ಮೀ. ದೂರದಲ್ಲಿ ಭೀಕರ ದಾಳಿ ಆರಂಭಿಸಿದ್ದು, ಇಡೀ ದೇಶ ಅವರ ಕೈವಶವಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಸಂಪೂರ್ಣ ಆಷ್ಘಾನಿಸ್ತಾನವನ್ನು 7 ದಿನದಲ್ಲಿ ವಶಪಡಿಸಿಕೊಳ್ಳುತ್ತೇವೆ ಎಂದು ಹೇಳಿದ ಮರುದಿನವೇ ಶನಿವಾರ ಬೆಳಿಗ್ಗೆ ತಾಲಿಬಾನಿಗಳ ದಾಳಿ ತೀವ್ರಗೊಂಡಿದ್ದು, ಶನಿವಾರ ಮತ್ತೆರಡು ಪ್ರಾಂತ್ಯಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇದರೊಂದಿಗೆ 34 ಪ್ರಾಂತ್ಯಗಳ ಪೈಕಿ ತಾಲಿಬಾನಿಗಳು 19 ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ಪಡೆದಂತಾಗಿದೆ.

ಇದರ ಬೆನ್ನಲ್ಲೇ, ಹಲವು ತಿಂಗಳ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿರುವ ಆಷ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ, ‘9/11 ದಾಳಿಯ ನಂತರ ಅಮೆರಿಕದ ಪಡೆಗಳು ತಾಲಿಬಾನ್‌ ಉಗ್ರರ ಹುಟ್ಟಡಗಿಸಲು ಕಳೆದ 20 ವರ್ಷಗಳಿಂದ ಪಟ್ಟಪರಿಶ್ರಮ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಸರ್ಕಾರದೊಳಗೆ, ಹೊರಗೆ, ರಾಜಕೀಯ ನಾಯಕರ ಜೊತೆಗೆ, ವಿವಿಧ ಸಮುದಾಯಗಳ ಜೊತೆಗೆ ಹಾಗೂ ಅಂತಾರಾಷ್ಟ್ರೀಯ ಸ್ನೇಹಿತರ ಜೊತೆಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಸದ್ಯದಲ್ಲೇ ನಿಮ್ಮ ಜೊತೆಗೆ ಫಲಿತಾಂಶ ಹಂಚಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

ಕಾಬೂಲ್‌ ಬಾಗಿಲಲ್ಲಿ ಉಗ್ರರು:

ಶನಿವಾರ ಬೆಳಿಗ್ಗೆ ದಾಳಿಯನ್ನು ಇನ್ನಷ್ಟುತೀವ್ರಗೊಳಿಸಿರುವ ತಾಲಿಬಾನ್‌ ಉಗ್ರರು, ಕಾಬೂಲ್‌ಗೆ ಅಂಟಿಕೊಂಡಿರುವ ಪ್ರಾಂತ್ಯವನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಹಲವು ದಿಕ್ಕಿನಿಂದ ಅವರು ಕಾಬೂಲ್‌ನತ್ತ ನುಗ್ಗುತ್ತಿದ್ದು, ಮಜರ್‌-ಎ-ಶರೀಫ್‌ ನಗರದ ಹೊರವಲಯದಲ್ಲಿ ಸದ್ಯ ಭೀಕರ ಸಂಘರ್ಷ ನಡೆಸುತ್ತಿದ್ದಾರೆ.

ಇದೇ ವೇಳೆ, ಲೋಗಾರ್‌ ಪ್ರಾಂತ್ಯ ಹಾಗೂ ಪಾಕಿಸ್ತಾನ ಗಡಿಯ ಪಕ್ತಿಕಾ ನಗರವೂ ತಾಲಿಬಾನಿಗಳ ಪಾಲಾಗಿದೆ. ಉತ್ತರ ಆಷ್ಘಾನಿಸ್ತಾನದ ಮಝರ್‌ ಎ ಷರೀಫ್‌ ನಗರದಲ್ಲೂ ಉಗ್ರರು ಹಾಗೂ ಭದ್ರತಾ ಪಡೆಗಳ ಮಧ್ಯೆ ಗುಂಡಿನ ಕಾಳಗ ನಡೆದಿದೆ.

ಆಷ್ಘಾನಿಸ್ತಾನದ ದೊಡ್ಡ ನಗರಗಳಾದ ಹೇರತ್‌ ಹಾಗೂ ಕಂದಹಾರನ್ನು ಈಗಾಗಲೇ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ.

ವಿಶ್ವಸಂಸ್ಥೆ ಆತಂಕ:

ಇದರ ಮಧ್ಯೆ, ಆಷ್ಘಾನಿಸ್ತಾನದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂತೋನಿಯೋ ಗುತೆರಸ್‌, ‘ಆಷ್ಘಾನಿಸ್ತಾನದ ಸ್ಥಿತಿ ಕೈಮೀರುತ್ತಿದೆ. ಮಿಲಿಟರಿ ಬಲದ ಮೂಲಕ ತಾಲಿಬಾನಿಗಳು ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ನಿಲ್ಲಿಸಬೇಕು. ಇದರಿಂದ ನಿರಂತರ ನಾಗರಿಕ ದಂಗೆಯನ್ನು ಹುಟ್ಟುಹಾಕಿದಂತಾಗುತ್ತದೆ ಅಷ್ಟೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

click me!