
ಸಿಡ್ನಿ (ಡಿ.15): ಧಾರ್ಮಿಕ ಕಾರ್ಯಕ್ರಮವೊಂದರ ನಿಮಿತ್ತ ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಕಡಲತೀರದಲ್ಲಿ ಜಮಾವಣೆಯಾಗಿದ್ದ ಸುಮಾರು 2,000 ಯಹೂದಿಗಳ ಮೇಲೆ ಇಬ್ಬರು ಉಗ್ರರು, ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ರೀತಿಯೇ ಭೀಕರ ಗುಂಡಿನ ದಾಳಿ ನಡೆಸಿದ್ದಾರೆ. ಇದರ ಪರಿಣಾಮ 12 ಮಂದಿ ಸಾವನ್ನಪ್ಪಿ, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪೊಲೀಸರು ಪ್ರತಿದಾಳಿ ನಡೆಸಿ ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದಾರೆ. ಮತ್ತೊಬ್ಬ ಉಗ್ರನನ್ನು ಬಂಧಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಗಾಯಾಳು ಉಗ್ರನನ್ನು ಸಿಡ್ನಿಯಲ್ಲಿ ಡ್ರೈವರ್ ಆಗಿದ್ದ ನವೀದ್ ಅಕ್ರಂ (43) ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದವನು ಎಂದು ಇಸ್ರೇಲಿನ ‘ಜೆರುಸಲೇಂ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ. ಆದರೆ ಮೃತ ಉಗ್ರನ ಮೂಲ ದೇಶ ಯಾವುದು? ಇಬ್ಬರಿಗೂ ಯಾವ ಉಗ್ರ ಸಂಘಟನೆ ಸಂಪರ್ಕವಿತ್ತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಘಟನೆಯನ್ನು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತದ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
ಆಗಿದ್ದೇನು?: ಯಹೂದಿಗಳ ‘ಹನಕ್ಕಾ’ ಎಂಬ ಧಾರ್ಮಿಕ ಹಬ್ಬ 8 ದಿನಗಳ ಕಾಲ ನಡೆಯುತ್ತದೆ. ಭಾನುವಾರ ಹಬ್ಬದ ಮೊದಲ ದಿನವಾಗಿದ್ದು, 1000-2000 ಯಹೂದಿಗಳು ಹಬ್ಬದ ಆಚರಣೆಗಾಗಿ ಸಿಡ್ನಿಯ ಬೋಂಡಿ ಕಡಲತೀರದಲ್ಲಿ ಸೇರಿದ್ದರು. ಸಂಜೆ 6:30ರ ಸುಮಾರಿಗೆ (ಆಸ್ಟ್ರೇಲಿಯಾ ಕಾಲಮಾನ) ಇಬ್ಬರು ಬಂದೂಕುಧಾರಿಗಳು ಸ್ಥಳಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. 50 ಬಾರಿ ಗುಂಡು ಹಾರಿಸಿರುವುದು ವರದಿಯಾಗಿದೆ. ಉಗ್ರರು ಮಕ್ಕಳು ಮತ್ತು ವೃದ್ಧರನ್ನೇ ಗುರಿಯಾಗಿಸಿ ದಾಳಿ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ವೇಳೆ ಅನೇಕರು ಸ್ಥಳದಲ್ಲೇ ಸಾವಿಗೀಡಾದರೆ, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಬಂದೂಕು ದಾಳಿಗೆ ಬೆಚ್ಚಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಆರೋಪಿ ನವೀದ್ ಅಕ್ರಂ ಎಂದು ಪತ್ತೆ: ಗುಂಡಿನ ದಾಳಿ ನಡೆಸಿದ ಒಬ್ಬ ಆರೋಪಿಯನ್ನು, ಸಿಡ್ನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ನವೀದ್ ಅಕ್ರಂ (24) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಸಿಡ್ನಿಯ ಬೊನ್ನಿರಿಗ್‌ನ ಈತನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈತನ ಕುಟುಂಬ ವರ್ಷದ ಹಿಂದಷ್ಟೇ ಈ ಮನೆಯನ್ನು ಕೊಂಡುಕೊಂಡಿತ್ತು ಎಂದು ತಿಳಿದುಬಂದಿದೆ. ಈತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಬ್ಬದ ಆಚರಣೆಯಲ್ಲಿ ಮೈಮರೆತಿದ್ದ ಯಹೂದಿಗಳ ಮೇಲೆ ಗುಂಡಿನ ಮಳೆಗರೆಯುತ್ತಿದ್ದ ಪಾಕಿಸ್ತಾನ ಮೂಲದ ದಾಳಿಕೋರನಿಂದ ಅಹ್ಮದ್ ಅಲ್ ಅಹ್ಮದ್ ಎಂಬ ವ್ಯಕ್ತಿ ಗನ್ ಕಸಿದು ಹಲವರ ಜೀವ ಉಳಿಸಿದ್ದಾರೆ. 43 ವರ್ಷದ ಉಗ್ರ ನವೀದ್ ಅಕ್ರಂ ಗುಂಡಿನ ದಾಳಿ ನಡೆಸುತ್ತಿದ್ದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹಿಂದಿನಿಂದ ನುಗ್ಗಿದ ಅಹ್ಮದ್, ಆತನ ಬಂದೂಕು ಕಸಿದು ನೆಲಕ್ಕುರುಳಿಸಿದರು. ಬಳಿಕ ಆತನಿಗೆ ಬಂದೂಕು ತೋರಿಸಿ ಹೆದರಿಸಿದರು. ಈಗ ನವೀದ್‌ನನ್ನು ಬಂಧಿಸಲಾಗಿದೆ. ಅಹ್ಮದ್ ಸಾಹಸಕ್ಕೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.
ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ನಡೆದ ಭಯಾನಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ದುಃಖದ ಸಮಯದಲ್ಲಿ ನಾವು ಆಸ್ಟ್ರೇಲಿಯಾ ಪರ ನಿಲ್ಲುತ್ತೇವೆ. ಭಯೋತ್ಪಾದನೆ ಬಗ್ಗೆ ಭಾರತ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಭಯೋತ್ಪಾದನೆ ವಿರುದ್ಧದ ಎಲ್ಲ ಬಗೆಯ ಹೋರಾಟವನ್ನು ಬೆಂಬಲಿಸುತ್ತದೆ.
- ನರೇಂದ್ರ ಮೋದಿ, ಪ್ರಧಾನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ