ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹೊಸ ಮಾದರಿಯ ವೈರಸ್‌ ಇನ್ನೂ 7 ದೇಶಗಳಲ್ಲಿ ಪತ್ತೆ!

By Suvarna NewsFirst Published Dec 22, 2020, 7:14 AM IST
Highlights

ಹೈಸ್ಪೀಡ್‌ ಕೊರೋನಾಗೆ ಜಗತ್ತು ತಲ್ಲಣ!| ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹೊಸ ಮಾದರಿಯ ವೈರಸ್‌ ಇನ್ನೂ 7 ದೇಶಗಳಲ್ಲಿ ಪತ್ತೆ| ಇನ್ನಷ್ಟು ದೇಶಗಳಲ್ಲಿ ಆತಂಕ| ಬ್ರಿಟನ್‌ಗೆ 16 ದೇಶದಿಂದ ವಿಮಾನಯಾನ ರದ್ದು

ಲಂಡನ್(ಡಿ.22): ಬ್ರಿಟನ್‌ನಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿರುವ ಕೊರೋನಾ ವೈರಸ್‌ನ ಹೊಸ ಮಾದರಿ, ಇನ್ನೂ 7 ದೇಶಗಳಲ್ಲಿ ಕಾಣಿಸಿಕೊಂಡಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಹೊಸ ಮಾದರಿಯ ವೈರಸ್‌, ಈ ಹಿಂದಿನ ಮಾದರಿಗಳಿಗಿಂತ ಶೇ.70ರಷ್ಟುವೇಗವಾಗಿ ಹಬ್ಬುವ ಸಾಮರ್ಥ್ಯ ಇರುವ ಕಾರಣ ಹಲವಾರು ದೇಶಗಳಲ್ಲಿ ಎರಡನೇ ಅಲೆಯ ಭೀತಿ ಎದುರಾಗಿದೆ. ಇನ್ನೇನು ಲಸಿಕೆ ಲಭ್ಯವಾಗಿ ಸೋಂಕು ನಿಯಂತ್ರಣವಾದೀತು ಎಂಬ ಹಂತದಲ್ಲೇ ಎದುರಾದ ಈ ಆತಂಕ ಇಡೀ ಜಗತ್ತನ್ನು ಮತ್ತೊಮ್ಮೆ ತಲ್ಲಣಗೊಳಿಸಿದೆ.

ಈಗಾಗಲೇ ಮಾರುಕಟ್ಟೆಗೆ ಬಂದಿರುವ ಕೊರೋನಾ ಲಸಿಕೆಗಳು, ಈ ಹೊಸ ಮಾದರಿಯ ವೈರಸ್‌ ಮೇಲೆ ಕೂಡಾ ಪರಿಣಾಮಕಾರಿಯಾಗಿರಲಿದೆ ಎಂದು ವಿವಿಧ ದೇಶಗಳ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಬ್ರಿಟನ್‌ ಸೇರಿದಂತೆ ಕೆಲ ದೇಶಗಳಲ್ಲಿ ಕೊರೋನಾ ಸೋಂಕಿತರಿಗೆ ಲಸಿಕೆಯ 2 ಡೋಸ್‌ಗಳ ಪೈಕಿ ಈವರೆಗೆ ಒಂದನ್ನು ಮಾತ್ರವೇ ನೀಡಿರುವ ಕಾರಣ, ಹೊಸ ವೈರಸ್‌ಗಳ ಮೇಲೆ ಲಸಿಕೆಯ ಪರಿಣಾಮ ಇನ್ನೂ ಸಾಬೀತಾಗಬೇಕಿದೆ.

Latest Videos

ಇನ್ನೂ 7 ದೇಶದಲ್ಲಿ ಪತ್ತೆ:

ತನ್ನ ದೇಶದಲ್ಲಿ ಕೊರೋನಾದ ಹೊಸ ಮಾದರಿ ಪತ್ತೆಯಾಗಿದೆ ಎಂದು ಘೋಷಿಸಿ ಬ್ರಿಟನ್‌ ಸರ್ಕಾರ ದೇಶದಲ್ಲಿ ಹಲವು ಹೊಸ ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ, ಇಟಲಿ, ಡೆನ್ಮಾರ್ಕ್, ನೆದರ್ಲೆಂಡ್‌, ಆಸ್ಪ್ರೇಲಿಯಾ, ಬೆಲ್ಜಿಯಂ, ಟರ್ಕಿ ದೇಶಗಳು ಕೂಡಾ ತಮ್ಮ ದೇಶಗಳಲ್ಲಿ ಇಂಥ ಹೊಸ ಮಾದರಿ ಪತ್ತೆಯಾಗಿರುವ ಮಾಹಿತಿ ಬಹಿರಂಗಪಡಿಸಿವೆ.

ಅದರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಹೊಸ ಮಾದರಿಯ ವೈರಸ್‌ನಿಂದಾಗಿ 2ನೇ ಅಲೆ ಕಾಣಿಸಿಕೊಂಡಿದೆ. ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆ ಸೇರುವವರು ಹಾಗೂ ಮರಣ ಹೊಂದುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಾರ್‌, ಬೀಚ್‌ಗಳನ್ನು ಬಂದ್‌ ಮಾಡಲಾಗಿದೆ. ಜೊತೆಗೆ ಬ್ರಿಟನ್‌ನಲ್ಲಿ ಕಂಡು ಬಂದ ವೈರಸ್‌ಗಿಂತ ಆಫ್ರಿಕಾದಲ್ಲಿ ಪತ್ತೆಯಾಗಿರುವ ವೈರಸ್‌ ವಿಭಿನ್ನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ನಡುವೆ ಬ್ರಿಟನ್‌ನಲ್ಲಿ ಹೊಸ ಸೋಂಕು ಭಾರೀ ಆತಂಕ ಹುಟ್ಟುಹಾಕಿರುವ ಬೆನ್ನಲ್ಲೇ 15ಕ್ಕೂ ಹೆಚ್ಚು ದೇಶಗಳು ಬ್ರಿಟನ್‌ಗೆ ತೆರಳುವ ಮತ್ತು ಬ್ರಿಟನ್‌ನಿಂದ ಆಗಮಿಸುವ ವಿಮಾನಗಳ ಮೇಲೆ ನಿಷೇಧ ಹೇರಿವೆ.

ಲಸಿಕೆ ವಿತರಣೆಗೆ ಅಡ್ಡಿ ಆತಂಕ

ಹಲವು ದೇಶಗಳು ಬ್ರಿಟನ್‌ಗೆ ವಿಮಾನ ಸಂಚಾರ ನಿಷೇಧ ಹೇರಿದ ಹಿನ್ನೆಲೆಯಲ್ಲಿ, ಬ್ರಿಟನ್‌ನಲ್ಲಿ ಜಾರಿಗೊಂಡಿರುವ ಕೊರೋನಾ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಬ್ರಿಟನ್‌ಗೆ ಸದ್ಯ ಬೆಲ್ಜಿಯಂನಿಂದ ಲಸಿಕೆ ಬರುತ್ತಿದೆ. ಆದರೆ ಬೆಲ್ಜಿಯಂ ಬ್ರಿಟನ್‌ಗೆ ವಿಮಾನ, ರೈಲು ಸಂಚಾರ ನಿಷೇಧಿಸಿರುವ ಕಾರಣ ಲಸಿಕೆ ಲಭ್ಯತೆಯ ಕೊರತೆ ಎದುರಾಗುವ ಆತಂಕ ಸರ್ಕಾರವನ್ನು ಕಾಡಿದೆ.

ಮಾರಣಾಂತಿಕವಲ್ಲ: ವಿವೇಕ್‌ ಮೂರ್ತಿ

ವಾಷಿಂಗ್ಟನ್‌: ಬ್ರಿಟನ್‌ನಲ್ಲಿ ಪತ್ತೆಯಾಗಿರುವ, ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್‌ನ ಹೊಸ ಮಾದರಿ ಅತ್ಯಂತ ಮಾರಣಾಂತಿಕವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಅಮೆರಿಕದ ನಿಯೋಜಿತ ಸರ್ಜನ್‌ ಜನರಲ್‌, ಮಂಡ್ಯ ಮೂಲದ ಡಾ| ವಿವೇಕ್‌ ಮೂರ್ತಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಪತ್ತೆ?

ದಕ್ಷಿಣ ಆಫ್ರಿಕಾ, ಇಟಲಿ, ಡೆನ್ಮಾರ್ಕ್, ನೆದರ್ಲೆಂಡ್‌, ಆಸ್ಪ್ರೇಲಿಯಾ, ಬೆಲ್ಜಿಯಂ, ಟರ್ಕಿ

ಎಲ್ಲಿಂದ ಬ್ರಿಟನ್‌ಗೆ ವಿಮಾನ ರದ್ದು?

ಭಾರತ, ಕೆನಡಾ, ಸೌದಿ ಅರೇಬಿಯಾ, ಜರ್ಮನಿ, ಇಟಲಿ, ಬೆಲ್ಜಿಯಂ, ಡೆನ್ಮಾರ್ಕ್, ಐರಿಶ್‌ ರಿಪಬ್ಲಿಕ್‌, ಟರ್ಕಿ, ಐರ್ಲೆಂಡ್‌, ಫ್ರಾನ್ಸ್‌ , ನೆದರ್ಲೆಂಡ್‌, ಆಸ್ಟ್ರಿಯಾ, ಇಸ್ರೇಲ್‌, ಬಲ್ಗೇರಿಯಾ, ಅರ್ಜೆಂಟೀನಾ, ಇರಾನ್‌

ಸಾಮಾನ್ಯಕ್ಕಿಂತ ಶೇ.70 ವೇಗ!

ಸಾಮಾನ್ಯ ಮಾದರಿಯ ಕೊರೋನಾ ವೈರಸ್‌ಗಿಂತ ಬ್ರಿಟನ್‌ನ ಹೊಸ ಸ್ವರೂಪದ ವೈರಸ್‌ ಶೇ.70ರಷ್ಟುಅಧಿಕ ವೇಗದಲ್ಲಿ ಹಬ್ಬುತ್ತದೆ. ಒಂದೇ ವಾರದಲ್ಲಿ ಬ್ರಿಟನ್‌ನಲ್ಲಿ ನಿತ್ಯದ ಸೋಂಕು, ಸಾವಿನ ಪ್ರಮಾಣ ದ್ವಿಗುಣಗೊಂಡಿದೆ. ಡಿ.13ರ ಭಾನುವಾರದವರೆಗಿನ 1 ವಾರದಲ್ಲಿ 18447 ಕೇಸ್‌, 114 ಸಾವು ದಾಖಲಾಗಿದ್ದರೆ, ಡಿ.20ರ ಭಾನುವಾರವರೆಗಿನ ವಾರದಲ್ಲಿ 35928 ಕೇಸ್‌, 326 ಸಾವು ಸಂಭವಿಸಿದೆ. ಮೊದಲೇ ವೇಗವಾಗಿ ಹಬ್ಬುವ ವೈರಸ್‌ ಎಂಬ ಕುಖ್ಯಾತಿ ಹೊಂದಿದ್ದ ಕೊರೋನಾ, ಇದೀಗ ರೂಪಾಂತರಗೊಂಡ ಸ್ಥಿತಿಯಲ್ಲಿ ಮತ್ತಷ್ಟುವೇಗ ಪಡೆದಿರುವುದು ಸಹಜವಾಗಿ ಆತಂಕ ಮೂಡಿಸಿದೆ.

click me!