ದಕ್ಷಿಣ ಕೊರಿಯಾ ವಿಮಾನ ದುರಂತಕ್ಕೂ ಕೆಲವೇ ಕ್ಷಣ ಮುನ್ನ ಆಪ್ತರಿಗೆ ಪ್ರಯಾಣಿಕ ಕಳುಹಿಸಿದ ಸಂದೇಶ ಬಯಲಾಗಿದೆ. ಹೃದಯವಿದ್ರಾವಕ ಸಂದೇಶ ಇದೀಗ ಹಲವರ ಮನಸ್ಸು ಭಾರವಾಗಿಸಿದೆ.
ಸೌತ್ ಕೊರಿಯಾ(ಡಿ.29) ದಕ್ಷಿಣ ಕೊರಿಯಾದಲ್ಲಿ ನಡೆದ ವಿಮಾನ ದುರಂತದ ಒಂದೊಂದು ಕಣ್ಣೀರ ಕತೆಗಳು ಹೊರಬರುತ್ತಿದೆ. 181 ಪ್ರಯಾಣಿಕರ ಹೊತ್ತು ಸಾಗಿದ ವಿಮಾನ ಅಪಘಾತಕ್ಕೀಡಾಗಿ 179 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಬದುಕುಳಿದಿದ್ದಾರೆ. ಹಕ್ಕಿ ವಿಮಾನಕ್ಕೆ ಡಿಕ್ಕಿ ಹೊಡೆದ ಬೆನ್ನಲ್ಲೇ ವಿಮಾನದ ನಿಯಂತ್ರಣ ಕಳೆದುಕೊಂಡಿದೆ. ಎಂಜಿನ್ ಹಾಗೂ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ತುರ್ತು ಭೂಸ್ಪರ್ಶ ಮಾಡಿದಾಗ ವಿಮಾನ ದುರಂತ ಕಂಡಿದೆ. ಆದರೆ ವಿಮಾನ ಅಪಘಾತಕ್ಕೂ ಕೆಲವೇ ಕ್ಷಣಗಳ ಮುನ್ನ ಪ್ರಯಾಣಿಕ ಕಳುಹಿಸಿದ ಕೊನೆಯ ಸಂದೇಶ ಹಲವರ ಮನಸ್ಸು ಭಾರ ಮಾಡಿದೆ. ಸೌತ್ ಕೊರಿಯಾದ ಬಿಬಿಸಿ ಸಂಸ್ಥೆ ಪ್ರಯಾಣಿಕನ ಕೊನೆಯ ಮಾತುಗಳನ್ನು ಪ್ರಕಟಿಸಿದೆ.
181 ಪ್ರಯಾಣಿಕರು ಥಾಯ್ಲೆಂಡ್‌ನ ಬ್ಯಾಂಗ್‌ಕಾಕ್‌ನಿಂದ ಸೌತ್ ಕೊರಿಯಾದ ಮುವಾನ್ ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಜೆಜು ಏರ್‌ಫ್ಲೈಟ್ ಮೂಲಕ ಪ್ರಯಾಣ ಆರಂಭಗೊಂಡಿತ್ತು. ಆದರೆ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಆಗಮಿಸುತ್ತಿದ್ದಂತೆ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದೆ. ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿಯಾದ ಕಾರಣ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಇತ್ತ ಲ್ಯಾಂಡಿಂಗ್ ಗೇರ್ ಕೂಡ ನಿರ್ವಹಣೆ ಸ್ಥಗಿತಗೊಂಡಿದೆ. ಹಕ್ಕಿ ಡಿಕ್ಕಿಯಾದ ಬೆನ್ನಲ್ಲೇ ವಿಮಾನದಲ್ಲಿ ಭಾರಿ ಶಬ್ದವಾಗಿದೆ. ವಿಮಾನ ಅಲುಗಾಡಿದೆ. ನಿಯಂತ್ರಣ ಕಳೆದುಕೊಂಡಿದೆ. ಪರಿಸ್ಥಿತಿ ಗಂಭೀರವಾಗಿದೆ.
ಈ ವೇಳೆ ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕ ತನ್ನ ಆಪ್ತರಿಗೆ ಸಂದೇಶ ಕಳುಹಿಸಿದ್ದಾನೆ. ಟೆಕ್ಸ್ಟ್ ಮೆಸೇಜ್ ಮೂಲಕ ಪ್ರಯಾಣಿಕ ಈ ಮಾಹಿತಿ ನೀಡಿದ್ದಾನೆ. ಹಕ್ಕಿಯೊಂದು ವಿಮಾನದ ರೆಕ್ಕೆಗೆ ಬಡಿದಿದೆ ಎಂದು ಸಂದೇಶ ಕಳುಹಿಸಿದ್ದಾನೆ. ಇದರ ಬೆನ್ನಲ್ಲೇ ವಿಮಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡುತ್ತಿರುವಂತೆ ಪ್ರಯಾಣಿಕ ಟೆಕ್ಸ್ಟ್ ಮೂಲಕ ಮತ್ತೊಂದು ಸಂದೇಶ ಕಳುಹಿಸಿದ್ದಾನೆ. ನನ್ನ ಕೊನೆಯ ಮಾತುಗಳನ್ನು ಹೇಳಿ ಬಿಡಲೇ ಎಂದು ಸಂದೇಶ ಕಳುಹಿಸಿದ್ದಾನೆ.
ಕೊನೆಯ ಮಾತುಗಳೇನು ಅನ್ನೋದು ಕಳುಹಿಸುವ ಮೊದಲು ವಿಮಾನ ಅಪಘಾತಕ್ಕೀಡಾಗಿದೆ. ಕೊನೆಯ ಮಾತು ಹೇಳುತ್ತೇನೆ ಎಂದು ಸಂದೇಶವೇ ಪ್ರಯಾಣಿಕನ ಅಂತಿಮ ಮಾತಾಗಿದೆ. ಈ ಅಪಘಾತದಲ್ಲಿ ಈ ಸಂದೇಶ ಕಳುಹಿಸಿದ ಪ್ರಯಾಣಿಕ ಸೇರಿದಂತೆ 179 ಮಂದಿ ಮೃತಪಟ್ಟಿದ್ದಾರೆ. ಈತನ ಸಂದೇಶ ಇದೀಗ ಕುಟುಂಬಸ್ಥರ ಆಕ್ರಂದನ ಹೆಚ್ಚಿಸಿದೆ. ತಮ್ಮ ಆಪ್ತರಿಗಾಗಿ ಕಣ್ಣೀರಿಡುತ್ತಿದ್ದಾರೆ.
ವಿಮಾನ ದುರಂತದಲ್ಲಿ ಮಡಿದ ಆಪ್ತರ ಕಳೇಬರಹ ಗುರುತಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. 179 ಮೃತರ ಪಕಿ ಕೇವಲ 65 ಮೃತದೇಹಗಳನ್ನು ಮಾತ್ರ ಗುರುತಿಸಲಾಗಿದೆ. ಇನ್ನುಳಿದ ಮೃತದೇಹದ ಗುರುತು ಸಿಗದಂತಾಗಿದೆ. ಈ ವರ್ಷ ಕಂಡ ಅತೀ ಭೀಕರ ದುರಂತ ಇದಾಗಿದೆ. ಇತ್ತ ಘಟನೆ ತನಿಖೆ ಚುರುಗೊಂಡಿದೆ. ವಿಮಾನದ ಬ್ಲಾಕ್ ಬಾಕ್ಸ್ ಪತ್ತೆ ಹಚ್ಚಿ ಡಿಕೋಡಿಂಗ್ ಪ್ರಕ್ರಿಯೆ ಆರಂಂಭಗೊಂಡಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ದೊಡ್ಡ ಗಾತ್ರದ ಹಕ್ಕಿ ವಿಮಾನದ ರೆಕ್ಕೆಗೆ ಬಡಿದ ಕಾರಣ ಅವಘಡ ಸಂಭವಿಸಿದೆ. ಇದರಿಂದ ವಿಮಾನದ ಲ್ಯಾಂಡಿಂಗ್ ಗೇರ್ ಕಾರ್ಯನಿರ್ವಹಿಸುತ್ತಿರಲಿಲ್ಲ. ತುರ್ತು ಲ್ಯಾಂಡಿಂಗ್ ಅನಿವಾರ್ಯವಾಗಿತ್ತು. ಆದರೆ ಬೆಲ್ಲಿ ಲ್ಯಾಂಡಿಂಗ್ ಯಶಸ್ವಿಯಾಗಲಿಲ್ಲ ಎಂದಿದ್ದಾರೆ. ಇದೇ ವೇಳೆ ಕೆಲ ಸಿಬ್ಬಂದಿಗಳು ವಿಮಾನ ನಿಲ್ದಾಣದ ಸುತ್ತ ಮುತ್ತ ಯಾವುದೇ ಹಕ್ಕಿಗಳು ಇರಲಿಲ್ಲ. ಕೊನೆಯ ಕ್ಷಣದಲ್ಲಿ ದೊಡ್ಡ ಗಾತ್ರದ ಹಕ್ಕಿ ಆಗಸದಲ್ಲಿ ಹಾರಾಡಿದೆ. ಇದು ಅಪಘಾತಕ್ಕೆ ಕಾರಣವಾಗಿದೆ ಎಂದಿದ್ದಾರೆ. ವಿಮಾನ ಅಪಘಾತದಲ್ಲಿ ಬದುಕುಳಿರುವ ಇಬ್ಬರಿಗೆ ತುರ್ತು ನಿಘಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.