
ಇಸ್ಲಾಮಾಬಾದ್ (ಏ.8) ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮಧ್ಯೆ ಸಂಧಾನಕಾರನ ಪಾತ್ರ ವಹಿಸಲು ಹೋದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಅವರು ಹಂಚಿಕೊಂಡಿರುವ ಒಂದು ಪೋಸ್ಟ್ ಪಾಕಿಸ್ತಾನದ ವಿದೇಶಾಂಗ ನೀತಿಯನ್ನ ಬಾಹ್ಯ ಶಕ್ತಿಗಳ ನಿಯಂತ್ರಿಸುತ್ತಿವೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಮಂಗಳವಾರ ಪಾಕಿಸ್ತಾನ ಪ್ರಧಾನಿ ಷರೀಫ್ ಇರಾನ್ ಬಿಕ್ಕಟ್ಟಿನ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆದರೆ, ಆ ಪೋಸ್ಟ್ ಅಂತಿಮವಾಗಿ ಪ್ರಕಟವಾಗುವ ಒಂದು ನಿಮಿಷ ಮೊದಲು ಎಡಿಟ್ ಹಿಸ್ಟರಿಯಲ್ಲಿ 'Draft – Pakistan's PM Message on X ಎಂದಿದೆ. ಈ ವಾಕ್ಯ ಮೇಲ್ಭಾಗದಲ್ಲಿ ಕಂಡುಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಹೊತ್ತಿಸಿದ್ದು, ಈ ಮೆಸೇಜ್ ಪಾಕಿಸ್ತಾನ ಸರ್ಕಾರ ಸಿದ್ಧಪಡಿಸಿದ್ದಲ್ಲ ಎಂಬ ಚರ್ಚೆಗೆ ಕಾರಣವಾಗಿದೆ.
ಡ್ರಾಪ್ ಸೈಟ್ ಸಬ್‌ಸ್ಟ್ಯಾಕ್‌ನ ಸಂಸ್ಥಾಪಕ ರಯಾನ್ ಗ್ರಿಮ್ ಈ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದ್ದಾರೆ. 'ಷರೀಫ್ ಅವರ ಸ್ವಂತ ಸಿಬ್ಬಂದಿ ಬರೆದಿದ್ದರೆ ಅವರನ್ನು 'ಪಾಕಿಸ್ತಾನದ ಪ್ರಧಾನಿ' ಎಂದು ಉಲ್ಲೇಖಿಸುವ ಸಾಧ್ಯತೆ ಕಡಿಮೆ. ಈ ಸಂದೇಶವನ್ನು ಯುಎಸ್ ಅಥವಾ ಇಸ್ರೇಲ್ ಬರೆದಿರಬಹುದು' ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ನಲ್ಲಿ ಪ್ರಧಾನಿಯನ್ನು ಇಂಗ್ಲಿಷ್‌ನಲ್ಲಿ ಮೂರನೇ ವ್ಯಕ್ತಿಯಂತೆ ಉಲ್ಲೇಖಿಸಿರುವುದು, ಇದನ್ನು ಪಾಕಿಸ್ತಾನಿ ಅಧಿಕಾರಿಗಳು ಬರೆದಿಲ್ಲ ಎಂಬುದಕ್ಕೆ ಸಾಕ್ಷಿಯಂತಿದೆ ಎಂದು ನೆಟ್ಟಿಗರು ಸಂಶಯ ವ್ಯಕ್ತಪಡಿಸಿದ್ದಾರೆ.
ಇದೆಲ್ಲ ಬೆಳವಣಿಗೆಯ ಹಿನ್ನೆಲೆ
ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇಡೀ ಇರಾನ್ ನಾಗರಿಕತೆಯನ್ನು ನಾಶಪಡಿಸುವುದಾಗಿ ಟ್ರಂಪ್ ಬೆದರಿಕೆಯೊಡ್ಡಿದ್ದರು. ಅದಕ್ಕಾಗಿ ನಿನ್ನೆ ರಾತ್ರಿ ಎಂಟು ಗಂಟೆವರೆಗೆ ಗಡುವು ನೀಡಿದ್ದರು. ಈ ಗಡುವ ಮುಗಿಯುವ ತಾಸಿನ ಮೊದಲೇ ಎರಡು ದೇಶಗಳ ನಡುವೆ ಸಂಧಾನಕಾರನಾಗಿ ಮಧ್ಯಪ್ರವೇಶಿಸಿ ಷರೀಫ್, 'ರಾಜತಾಂತ್ರಿಕತೆಗೆ ಅವಕಾಶ ನೀಡಲು ಟ್ರಂಪ್ ಮಂಗಳವಾರದ ಗಡುವನ್ನು ವಿಸ್ತರಿಸಬೇಕು ಮತ್ತು ಇರಾನ್ ಸದ್ಭಾವನೆಯ ಸಂಕೇತವಾಗಿ ಜಲಮಾರ್ಗವನ್ನು ತೆರೆಯಬೇಕು' ಎಂದು ವಿನಂತಿಸಿದ್ದರು. ಆದರೆ, ಈ ವಿನಂತಿಯ ಹಿಂದಿನ 'ಸ್ಕ್ರಿಪ್ಟ್' ಈಗ ವಿವಾದದ ಕೇಂದ್ರಬಿಂದುವಾಗಿದೆ.
ನರಕವಾಗುತ್ತಾ ಇರಾನ್? ಹೆಚ್ಚಿದ ಆತಂಕ
ಅಮೆರಿಕ ಈಗಾಗಲೇ ಮೂರು ಬಾರಿ ಗಡುವನ್ನು ವಿಸ್ತರಿಸಿದ್ದರೂ, ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಮತ್ತು ಇರಾನ್‌ಗೆ 'ನರಕ ತೋರಿಸುತ್ತೇವೆ' ಟ್ರಂಪ್ ಎಚ್ಚರಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ವರದಿಗಳ ಪ್ರಕಾರ ಇರಾನ್ ಮಾತುಕತೆಗಳನ್ನು ಕಡಿತಗೊಳಿಸಿದೆ ಎನ್ನಲಾಗಿದ್ದರೂ, ಟೆಹ್ರಾನ್ ಟೈಮ್ಸ್ ಮಾತ್ರ ಮಾತುಕತೆಯ ಹಾದಿ ಇನ್ನೂ ಮುಕ್ತವಾಗಿದೆ ಎಂದು ಸೂಚಿಸಿದೆ.
ಇಷ್ಟೆಲ್ಲ ವಿವಾದವಾದ್ರೂ ಪಾಕ್ ಪ್ರಧಾನಿ ಕಚೇರಿ ಮೌನ
ಈ ಭಾರಿ ರಾಜತಾಂತ್ರಿಕ ಎಡವಟ್ಟಿನ ಕುರಿತು ಅಂತಾರಾಷ್ಟ್ರೀಯ ಮಾಧ್ಯಮವಾದ 'ಫೋರ್ಬ್ಸ್' ಈ ಬಗ್ಗೆ ಪ್ರತಿಕ್ರಿಯೆ ಕೇಳಿದರೂ, ಶೆಹಬಾಜ್ ಷರೀಫ್ ಅವರ ಕಚೇರಿಯಿಂದ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಈ ಮೌನವು ಪಾಕಿಸ್ತಾನದ ರಾಜತಾಂತ್ರಿಕ ಸಂವಹನದಲ್ಲಿ ಬಾಹ್ಯ ಶಕ್ತಿಗಳ ಹಸ್ತಕ್ಷೇಪವಿದೆ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ