ಗಡಿಯಲ್ಲಿ ಚೀನಾ ನಿಗೂಢ ನಡೆ, ಭಾರತದ ಮೇಲೆ ಮುಗಿಬೀಳಲು ಸಿದ್ಧತೆ?

By Kannadaprabha NewsFirst Published Oct 13, 2020, 10:02 AM IST
Highlights

ಚೀನಾ ತನ್ನ ಸೇನೆಯನ್ನು ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಮುಂಚೂಣಿ ಪ್ರದೇಶಗಳಲ್ಲಿ ಸರದಿಯ ಪ್ರಕಾರ ಬದಲಾಯಿಸುತ್ತಿದೆ| ಸೈನಿಕರನ್ನು ಅತ್ತಿಂದಿತ್ತ ಬದಲಿಸುತ್ತಿದೆ ಕುತಂತ್ರಿ ಚೀನಾ| ಚಳಿಗಾಲದಲ್ಲಿ ಭಾರತ ಮೇಲೆ ಮುಗಿಬೀಳಲು ಸಿದ್ಧತೆ?

 

ನವದೆಹಲಿ(ಅ.13): ಚೀನಾ ತನ್ನ ಸೇನೆಯನ್ನು ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಮುಂಚೂಣಿ ಪ್ರದೇಶಗಳಲ್ಲಿ ಸರದಿಯ ಪ್ರಕಾರ ಬದಲಾಯಿಸುತ್ತಾ ಚಳಿಗಾಲದಲ್ಲೂ ಭಾರತದ ಎದುರು ಯುದ್ಧಸನ್ನದ್ಧ ಸ್ಥಿತಿಯಲ್ಲಿರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಳೆದ ಆರೇಳು ತಿಂಗಳಿನಿಂದ ಭಾರತದ ಜೊತೆಗಿನ ಮಾತುಕತೆಯ ಸಂದರ್ಭದಲ್ಲೆಲ್ಲ ತನ್ನ ಸೇನೆಯನ್ನು ಹಿಂಪಡೆಯಲು ಸಿದ್ಧ ಎಂದು ಹೇಳುತ್ತಾ ಬಂದಿದ್ದರೂ ಸೇನೆ ಹಿಂಪಡೆಯಲು ಆ ದೇಶಕ್ಕೆ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಭಾರತೀಯ ಸೇನೆಯ ಉನ್ನತ ಮೂಲಗಳು ಹೇಳಿವೆ.

ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್‌ 3 ಮತ್ತು 4ರ ನಡುವಿನ ಪ್ರದೇಶದಲ್ಲಿ ಎರಡು ವಾರಗಳಿಗೊಮ್ಮೆ ಚೀನಾ ತನ್ನ 200 ಸೈನಿಕರನ್ನು ಬದಲಾಯಿಸುತ್ತಿರುವುದು ಪತ್ತೆಯಾಗಿದೆ. ಈ ರೀತಿಯ ಬದಲಾವಣೆ ಕೇವಲ ಉತ್ತರ ದಂಡೆಯಲ್ಲಿ ಮಾತ್ರವಲ್ಲ, ಭಾರತದ ಜೊತೆಗೆ ಚೀನಾ ಸಂಘರ್ಷ ನಡೆಸುತ್ತಿರುವ ಲಡಾಖ್‌ನ ಎಲ್ಲಾ ಸೆಕ್ಟರ್‌ಗಳಲ್ಲೂ ನಡೆಯುತ್ತಿದೆ. ತನ್ಮೂಲಕ ತನ್ನ ಮೇಲೆ ಕಣ್ಣಿಡುತ್ತಿರುವ ಭಾರತವನ್ನು ದಾರಿತಪ್ಪಿಸಲು ಚೀನಾ ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಲ್‌ಎಸಿಯಲ್ಲಿ ಚೀನಾ 50,000 ಯೋಧರನ್ನು ನಿಯೋಜಿಸಿದೆ ಎಂದು ಭಾರತ ಅಂದಾಜಿಸಿತ್ತು. ಆದರೆ, ಈಗ ಸರದಿಯ ಪ್ರಕಾರ ಸೈನಿಕರನ್ನು ಬದಲಾಯಿಸುತ್ತಿರುವುದು ತಿಳಿದ ಮೇಲೆ ಚೀನಾದ ಸೈನಿಕರು ಎಷ್ಟಿರಬಹುದು ಎಂದು ಹೊಸತಾಗಿ ಅಂದಾಜಿಸಬೇಕಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.

click me!