ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗಿನ ‘ಮಣ್ಣು ಉಳಿಸಿ’ (Save Soil) ಬೈಕ್ ರ್ಯಾಲಿ ಅಭಿಯಾನಕ್ಕೆ ಸದ್ಗುರು ಇಂದು ಚಾಲನೆ ನೀಡಲಿದ್ದಾರೆ. ಒಟ್ಟು ನೂರು ದಿನಗಳ ಬೈಕ್ ರ್ಯಾಲಿಯನ್ನು ಸದ್ಗುರುಗಳು ಏಕಾಂಗಿಯಾಗಿ ಸಂಚರಿಸಲಿದ್ದಾರೆ.
ಕರ್ನಾಟಕ ಜೀವನಾಡಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಭಿಯಾನ ಹಮ್ಮಿಕೊಂಡಿದ್ದ ಸದ್ಗುರು ಅವರ ನೇತೃತ್ವದ ಈಶ ಫೌಂಡೇಶನ್ ಇದೀಗ ‘ಮಣ್ಣು ಉಳಿಸಿ’ ಬೈಕ್ ರ್ಯಾಲಿ ಜಾಗೃತಿ ಜಾಗತಿಕ ಅಭಿಯಾನಕ್ಕೆ ಮಾ.21ರಂದು ಚಾಲನೆ ನೀಡಲಿದೆ. ಈ ಹಿನ್ನೆಲೆಯಲ್ಲಿ ಬೈಕ್ ರ್ಯಾಲಿ ಉದ್ದೇಶ ಏನು? ಎಲ್ಲಿಂದ ಎಲ್ಲಿಗೆ ರ್ಯಾಲಿ, ಯಾವ ಯಾವ ದೇಶಗಳ ಬೆಂಬಲ ಇದೆ ಎಂಬ ಮಾಹಿತಿ ಇಲ್ಲಿದೆ.
ಎಲ್ಲಿಂದ ಎಲ್ಲಿಗೆ ಬೈಕ್ ರ್ಯಾಲಿ?
ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗಿನ ‘ಮಣ್ಣು ಉಳಿಸಿ’ (‘Save Soil) ಬೈಕ್ ರ್ಯಾಲಿ ಜಾಗೃತಿ ಅಭಿಯಾನಕ್ಕೆ ಸದ್ಗುರು ಅವರು ಮಾ.21ರ ಸೋಮವಾರ ಚಾಲನೆ ನೀಡಲಿದ್ದಾರೆ. ಒಟ್ಟು ನೂರು ದಿನಗಳ ಬೈಕ್ ರ್ಯಾಲಿಯನ್ನು ಸದ್ಗುರುಗಳು ಏಕಾಂಗಿಯಾಗಿ ಸಂಚರಿಸಲಿದ್ದಾರೆ. ಅಭಿಯಾನದಡಿ ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗಿನ 35,000 ಕಿ.ಮೀ. ಕ್ರಮಿಸುವ ಮೂಲಕ ಬರ್ಲಿನ್, ಪ್ಯಾರಿಸ್, ಜಿನೇವಾ ಸೇರಿದಂತೆ 26 ರಾಷ್ಟ್ರಗಳಲ್ಲಿ ಬೈಕ್ ರ್ಯಾಲಿ ನಡೆಸಿ ಸುಮಾರು 350 ಕೋಟಿ ಜನರಿಗೆ ಮಣ್ಣಿನ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ. ರ್ಯಾಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಕೊನೆಗೊಳ್ಳಲಿದೆ.
ಬೈಕ್ ರ್ಯಾಲಿ ಏಕೆ?
ವಿವಿಧ ಕಾರಣಗಳಿಂದಾಗಿ ಸಾಕಷ್ಟುಪ್ರಮಾಣದಲ್ಲಿ ನಾಶವಾಗುತ್ತಿರುವ ಮತ್ತು ಗುಣಮಟ್ಟಕಳೆದುಕೊಳ್ಳುತ್ತಿರುವ ಮಣ್ಣಿನ ರಕ್ಷಣೆಗೆ ಜಾಗತಿಕವಾಗಿ ಗಮನ ಸೆಳೆಯುವುದು ಹಾಗೂ ಈ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವುದು ‘ಮಣ್ಣು ರಕ್ಷಿಸಿ’ ಆಂದೋಲನದ ಮುಖ್ಯ ಉದ್ದೇಶ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸದ್ಗುರು, ಮಣ್ಣಿನ ಸವಕಳಿಯು ಆಹಾರ ಉತ್ಪಾದನೆ, ಹವಾಮಾನ ಸ್ಥಿರತೆ ಮತ್ತು ಈ ಭೂಮಿಯ ಮೇಲಿನ ಜೀವಕ್ಕೆ ಅಪಾಯವನ್ನುಂಟುಮಾಡುವ ಮಟ್ಟವನ್ನು ಸಮೀಪಿಸುತ್ತಿದೆ. ಭೂಮಿಯ ಮೇಲಿನ ಅತ್ಯಂತ ಉತ್ಸಾಹಭರಿತ ವಸ್ತು ಮಣ್ಣು ಎಂಬುದನ್ನು ನಾವು ಮರೆತಿದ್ದೇವೆ. ಮಣ್ಣು ಪ್ರತಿಯೊಬ್ಬರ ಜೀವನಕ್ಕೂ ಆಧಾರ. ಹೀಗಾಗಿ ಮಣ್ಣು ಉಳಿಸಿ ಎಂಬ ಜಾಗತಿಕ ಆಂದೋಲನ ಆರಂಭಿಸಲಾಗಿದೆ. ಕೃಷಿಯೋಗ್ಯ ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರಗಳು ರಾಷ್ಟ್ರೀಯ ನೀತಿಗಳನ್ನು ಜಾರಿಗೆ ತರುವಂತೆ ಮನವೊಲಿಸುವ ಅಭಿಯಾನ ಇದಾಗಿದೆ. ಜೊತೆಗೆ ಮಣ್ಣಿನ ನಾಶದಿಂದ ಭವಿಷ್ಯದಲ್ಲಿ ಉಂಟಾಗಲಿರುವ ಸಮಸ್ಯೆ ಕುರಿತು ರೈತರಲ್ಲಿ, ವಿವಿಧ ದೇಶಗಳ ಮುಖ್ಯಸ್ಥರಿಗೆ ಅಭಿಯಾನವು ಮನದಟ್ಟು ಮಾಡಲಿದೆ ಎಂದು ತಿಳಿಸಿದ್ದಾರೆ.
ಗಣ್ಯರು, ಹಲವು ದೇಶಗಳಿಂದ ಬೆಂಬಲ
ಮಣ್ಣಿನ ರಕ್ಷಣೆ ನೀತಿ ರೂಪಿಸುವ ಕುರಿತು ಈಶ ಫೌಂಡೇಶನ್ ಕಳೆದ ಎಂಟು ತಿಂಗಳಿಂದ ಭಾರತ ಸರ್ಕಾರದ ನಾಯಕರು, ಸಚಿವರ ಜೊತೆಗೆ ಸಭೆ ನಡೆಸುತ್ತಿದೆ. ವಿಶ್ವದಾದ್ಯಂತ ಸಾಕ್ಷಿಪ್ರಜ್ಞೆ ಮೂಡಿಸಲಿರುವ ಅಭಿಯಾನಕ್ಕೆ ಜಾಗತಿಕ ನಾಯಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುನೈಟೆಡ್ ನೇಷನ್ಸ್ ಕನ್‌ವೆನ್ಷನ್ ಕಂಬಾತ್ ಡಿಸರ್ಟಿಫಿಕೇಷನ್ (ಯುಎನ್‌ಸಿಸಿಡಿ), ಯುನೈಟೆಡ್ ನೇಷನ್ ಎನ್ವಿರಾನ್‌ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ) ಮತ್ತು ವಲ್ಡ್ ಫುಡ್ ಪ್ರೋಗ್ರಾಂ ಕಂಪನಿಗಳು ಸದ್ಗುರುಗಳ ಮಹತ್ತರ ಜಾಗತಿಕ ಜಾಗೃತಿ ಅಭಿಯಾನಕ್ಕೆ ಪಾಲುದಾರಿಕೆ ಹೊಂದಿವೆ. ಅಲ್ಲದೆ ಕೆರಿಬಿಯನ್‌ನ 6 ರಾಷ್ಟ್ರಗಳು, ಭಾರತ ಸೇರಿ ಹಲವಾರು ದೇಶಗಳ ಸೆಲೆಬ್ರೆಟಿಗಳು ಈ ವಿಶೇಷ ಆಂದೋಲನದಲ್ಲಿ ಸದ್ಗುರು ಜೊತೆ ನಿಂತಿದ್ದಾರೆ.
ಶಿವರಾತ್ರಿಯಂದು ಘೋಷಣೆ
ಈ ವರ್ಷ ಕೊಯಮತ್ತೂರು ಈಶ ಯೋಗ ಕೇಂದ್ರದ ಆದಿಯೋಗಿ ಶಿವನ ಬೃಹತ್ ಪ್ರತಿಮೆ ಮುಂದೆ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಆಚರಣೆ ವೇಳೆ ಸದ್ಗುರು ‘ಮಣ್ಣು ರಕ್ಷಿಸಿ’ ಎಂಬ ಬೃಹತ್ ರಾರಯಲಿ ನಡೆಸುವುದಾಗಿ ಘೋಷಿಸಿದ್ದರು. ಇದಕ್ಕೆ ಅಲ್ಲಿ ನೆರೆದಿದ್ದ ಲಕ್ಷಾಂತರ ಜನರು ಬೆಂಬಲ ಸೂಚಿಸಿದ್ದರು.