ಮೆಕ್ಕಾ ಮಸೀದಿಯಲ್ಲಿ ಕಿಸ್‌ ಆರೋಪ: ಇಬ್ಬರು ಬಾಂಗ್ಲಾದೇಶಿಯರನ್ನು ರಹಸ್ಯವಾಗಿ ಗಲ್ಲಿಗೇರಿಸಿದ ಸೌದಿ ಅರೇಬಿಯಾ

Published : Oct 20, 2026, 10:16 PM IST
saudi arabia executes bangladeshi citizens

ಸಾರಾಂಶ

ಸೌದಿ ಅರೇಬಿಯಾದ ಮೆಕ್ಕಾ ಮಸೀದಿಯಲ್ಲಿ 'ಅನೈತಿಕ ಕೃತ್ಯ' ಎಸಗಿದ ಆರೋಪದ ಮೇಲೆ ಇಬ್ಬರು ಬಾಂಗ್ಲಾದೇಶಿ ವಲಸೆ ಕಾರ್ಮಿಕರನ್ನು ರಹಸ್ಯವಾಗಿ ಗಲ್ಲಿಗೇರಿಸಲಾಗಿದೆ. ಬಾಂಗ್ಲಾ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ, ಪಾರದರ್ಶಕತೆ ಇಲ್ಲದೆ ಈ ಮರಣದಂಡನೆ ಜಾರಿಗೊಳಿಸಲಾಗಿದೆ.

ಢಾಕಾ/ರಿಯಾದ್ (ಅ.20): ಇಸ್ಲಾಂ ಧರ್ಮದ ಪವಿತ್ರ ನಗರವಾದ ಮೆಕ್ಕಾದ ಮಸೀದಿಯೊಂದರಲ್ಲಿ "ಅನೈತಿಕ ಕೃತ್ಯ" ಎಸಗಿದ್ದಾರೆಂಬ ಆರೋಪದ ಮೇಲೆ ಇಬ್ಬರು ಬಾಂಗ್ಲಾದೇಶಿ ವಲಸೆ ಕಾರ್ಮಿಕರನ್ನು ಸೌದಿ ಅರೇಬಿಯಾ ಸರ್ಕಾರ ರಹಸ್ಯವಾಗಿ ಗಲ್ಲಿಗೇರಿಸಿದೆ. ಈ ಘಟನೆಯು ಬಾಂಗ್ಲಾದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ವಿಚಾರಣೆ, ಯಾವುದೇ ಪಾರದರ್ಶಕತೆ ಇಲ್ಲದಿರುವುದು, ಅಪರಾಧದ ನಿಖರ ಸ್ವರೂಪವನ್ನು ಬಹಿರಂಗಪಡಿಸದಿರುವುದು ಹಾಗೂ ಇಬ್ಬರು ಪ್ರಜೆಗಳನ್ನು ಗಲ್ಲಿಗೇರಿಸಿದ ನಂತರವಷ್ಟೇ ಢಾಕಾಗೆ (ಬಾಂಗ್ಲಾದೇಶ ಸರ್ಕಾರಕ್ಕೆ) ಮಾಹಿತಿ ನೀಡಿರುವುದು ಈ ಭಾರಿ ರಾಜತಾಂತ್ರಿಕ ಹಾಗೂ ಮಾನವ ಹಕ್ಕುಗಳ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.

ಸೌದಿ ಮಾಧ್ಯಮಗಳ ಪ್ರಕಾರ, ಅಕ್ಟೋಬರ್ 14 ರಂದು ಮೆಕ್ಕಾದ ಮಸೀದಿಯೊಂದರಲ್ಲಿ ಎಸಗಲಾದ "ಅನೈತಿಕ ಕೃತ್ಯಗಳಿಗಾಗಿ" ಈ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಮರಣದಂಡನೆ ವಿಧಿಸಲಾಯಿತು. ಆದರೆ, ಈ ಕೃತ್ಯ ಏನೆಂಬುದರ ಬಗ್ಗೆ ಸೌದಿ ಅರೇಬಿಯಾ ಸರ್ಕಾರ ಯಾವುದೇ ಅಧಿಕೃತ ವಿವರಗಳನ್ನು ನೀಡಿಲ್ಲ.

ಏನಿದು ಅಪರಾಧ? ಹಣೆಗೆ ಕೊಟ್ಟ ಮುತ್ತು ಮರಣದಂಡನೆಗೆ ಕಾರಣವಾಯಿತೇ?

ಮೃತರನ್ನು ನಜ್ರುಲ್ ಇಸ್ಲಾಂ ಅಬ್ದುಲ್ ಬಸೀರ್ (Nazrul Islam Abdul Basir) ಮತ್ತು ಸಿಟಿ ಅಖ್ತರ್ (Siti Akhtar) ಎಂದು ಸೌದಿ ಆಂತರಿಕ ಸಚಿವಾಲಯವನ್ನು ಉಲ್ಲೇಖಿಸಿ ಮಾಧ್ಯಮಗಳು ಗುರುತಿಸಿವೆ. ಆದರೆ, ಸೌದಿ ಆಡಳಿತ ಮಂಡಳಿ ಇವರು ಯಾವಾಗ ಬಂಧನಕ್ಕೊಳಗಾದರು, ವಿಚಾರಣೆ ಹೇಗೆ ನಡೆಯಿತು ಅಥವಾ ಇವರು ಎಸಗಿದ ನಿಖರ ಅಪರಾಧವೇನು ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಈ ಇಬ್ಬರೂ ಪ್ರೇಮಿಗಳು ಅಥವಾ ದಂಪತಿಯಾಗಿದ್ದು, ಮಸೀದಿಯ ಆವರಣದಲ್ಲಿ ನಜ್ರುಲ್ ತನ್ನ ಜೊತೆಗಾರ್ತಿಯ ಹಣೆಗೆ ಮುತ್ತು ನೀಡಿದ್ದ. ಇದೇ ಕಾರಣಕ್ಕೆ ಮರಣದಂಡನೆ ವಿಧಿಸಲಾಗಿದೆ ಎಂಬ ವದಂತಿಗಳು ಹರಡಿವೆ. ಆದರೆ ಸೌದಿ ಸರ್ಕಾರ ಯಾವುದೇ ವಿವರ ನೀಡದಿರುವುದರಿಂದ ಈ ಸತ್ಯಾಸತ್ಯತೆ ಸ್ಪಷ್ಟವಾಗಿಲ್ಲ.

ಸೌದಿ ಅರೇಬಿಯಾವು ಮರಣದಂಡನೆ ಜಾರಿಗೊಳಿಸುವಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಹ್ಯೂಮನ್ ರೈಟ್ಸ್ ವಾಚ್ (Human Rights Watch) ವರದಿಯ ಪ್ರಕಾರ, 2025 ರಲ್ಲಿ ಕನಿಷ್ಠ 356 ಜನರನ್ನು ಸೌದಿಯಲ್ಲಿ ಗಲ್ಲಿಗೇರಿಸಲಾಗಿದೆ. ಸೌದಿಯ 'ತಅಝೀರ್' (Ta'zir - ನ್ಯಾಯಾಧೀಶರ ವಿವೇಚನಾಧಿಕಾರಕ್ಕೊಳಪಟ್ಟ ಶಿಕ್ಷೆ) ಕಾನೂನಿನಡಿ ಈ ಇಬ್ಬರು ಬಾಂಗ್ಲಾದೇಶಿಯರಿಗೆ ಮರಣದಂಡನೆ ವಿಧಿಸಲಾಗಿದ್ದು, ರಾಜ ಮನೆತನದ ಆದೇಶದ ಮೇರೆಗೆ ಗಲ್ಲಿಗೇರಿಸಲಾಗಿದೆ.

ಸೌದಿಯಲ್ಲಿ ಸಫಾಯಿ ಕಾರ್ಮಿಕನಾಗಿದ್ದ ನಜ್ರುಲ್ - ಗಲ್ಲಿಗೇರಿಸಿದ ಸುದ್ದಿ ಕೇಳಿ ಅತ್ತೆ ಸಾವು!

ಬಾಂಗ್ಲಾದೇಶದ ಚಟ್ಟೋಗ್ರಾಮ್ ವಿಭಾಗದ ಬ್ರಾಹ್ಮಣಬಾರಿಯಾ ಮೂಲದ ನಜ್ರುಲ್ ಇಸ್ಲಾಂ, 2022 ರ ನವೆಂಬರ್‌ನಲ್ಲಿ ಸೌದಿಗೆ ತೆರಳಿದ್ದ. ಆತ ಮೆಕ್ಕಾದ 'ಮಸೀದ ಅಲ್-ಹರಾಮ್'ನಲ್ಲಿ ಸಫಾಯಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಎಂಟು ತಿಂಗಳ ನಂತರ ಅಂದರೆ 2023 ರಲ್ಲಿ ಸೌದಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ನಜ್ರುಲ್ ಕುಟುಂಬಸ್ಥರು ಅಕ್ಟೋಬರ್ 11 ರಂದು ಕೊನೆಯ ಬಾರಿಗೆ ಆತನೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು. ಆದರೆ ಅಕ್ಟೋಬರ್ 14 ರಂದು ಆತನನ್ನು ಗಲ್ಲಿಗೇರಿಸಲಾಗಿದೆ ಎಂಬ ಆಘಾತಕಾರಿ ಸುದ್ದಿ ಬಂದಿದೆ. ಈ ಸುದ್ದಿ ಕೇಳಿ ಆತನ 65 ವರ್ಷದ ಅತ್ತೆ ಆಬೇದಾ ಬೇಗಂ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ!

ನಜ್ರುಲ್ ತಂದೆ ಅಬ್ದುಲ್ ಬಸೀರ್ ಮಾತನಾಡಿ, "ನನ್ನ ಮಗನಿಗೆ ಸೌದಿಯಲ್ಲಿ ನ್ಯಾಯಸಮ್ಮತ ವಿಚಾರಣೆಯೇ ಸಿಗಲಿಲ್ಲ. ಆತ ಅತ್ಯಂತ ಸಜ್ಜನನಾಗಿದ್ದ. ಸೌದಿಯ ಪಾಕಿಸ್ತಾನಿ ಸಹೋದ್ಯೋಗಿಯೊಬ್ಬನ ಜೊತೆ ಆತನಿಗೆ ಗಲಾಟೆಯಾಗಿತ್ತು, ಆತನೇ ಸಂಚು ರೂಪಿಸಿ ನನ್ನ ಮಗನನ್ನು ಸಿಲುಕಿಸಿದ್ದಾನೆ" ಎಂದು ಆರೋಪಿಸಿದ್ದಾರೆ. ಇನ್ನು ಕೊಲೆಯಾದ ಮಹಿಳೆ ಸಿಟಿ ಅಖ್ತರ್ ನಜ್ರುಲ್‌ನ ಹೆಂಡತಿಯಲ್ಲ, ಅವರು ಜೊತೆಗೆ ಕೆಲಸ ಮಾಡುತ್ತಿದ್ದರು ಎಂದು ನಜ್ರುಲ್ ತಂದೆ ತಿಳಿಸಿದ್ದರೆ, ಇಬ್ಬರ ನಡುವೆ 'ಅಫೇರ್' ಇತ್ತು ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.

ಬಾಂಗ್ಲಾದೇಶ ಸರ್ಕಾರಕ್ಕೆ ಸಿಗದ ಸುಳಿವು - ವಿಯೆನ್ನಾ ಒಪ್ಪಂದ ಉಲ್ಲಂಘನೆ?

ಈ ರಹಸ್ಯ ಗಲ್ಲಿಗೇರಿಸುವಿಕೆ ಬಾಂಗ್ಲಾದೇಶ ಸರ್ಕಾರ ಹಾಗೂ ರಾಜತಾಂತ್ರಿಕರನ್ನು ತೀವ್ರ ಕೆರಳಿಸಿದೆ. ವಿಯೆನ್ನಾ ಒಪ್ಪಂದದ (Vienna Convention on Consular Relations) ಆರ್ಟಿಕಲ್ 36 ಮತ್ತು 37 ರ ಪ್ರಕಾರ, ವಿದೇಶಿ ಪ್ರಜೆಯನ್ನು ಬಂಧಿಸಿದಾಗ ಅಥವಾ ಮರಣದಂಡನೆ ವಿಧಿಸಿದಾಗ ಆಯಾ ದೇಶದ ರಾಯಭಾರಿ ಕಚೇರಿಗೆ ತಕ್ಷಣ ಮಾಹಿತಿ ನೀಡುವುದು ಕಡ್ಡಾಯ.

ಆದರೆ, ಬಾಂಗ್ಲಾದೇಶದ ವಿದೇಶಾಂಗ ನಿಯೋಗಕ್ಕೆ ಸೌದಿ ಅರೇಬಿಯಾ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಜೆಡ್ಡಾದಲ್ಲಿರುವ ಬಾಂಗ್ಲಾ ಕಾನ್ಸುಲೇಟ್‌ಗೆ ಸೆಪ್ಟೆಂಬರ್‌ನಲ್ಲಿ ಜೈಲಿನಲ್ಲಿರುವ ಬಾಂಗ್ಲಾ ಪ್ರಜೆಗಳ ಪಟ್ಟಿ ಸಿಕ್ಕಿತ್ತಾದರೂ, ಅದರಲ್ಲಿ ಇವರಿಬ್ಬರ ಹೆಸರುಗಳ ಮುಂದೆ 'ವ್ಯಭಿಚಾರ' ಮತ್ತು 'ಐಸಿಟಿ ಅಪರಾಧ' ಎಂದು ಮಾತ್ರ ಬರೆಯಲಾಗಿತ್ತು. ಆದರೆ ಅವರಿಗೆ ಮರಣದಂಡನೆ ಕಾಯ್ದಿರಿಸಲಾಗಿರುವ ವಿಷಯವನ್ನು ಮುಚ್ಚಿಡಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ವಿದೇಶಾಂಗ ರಾಜ್ಯ ಸಚಿವೆ ಶಮಾ ಓಬೇದ್ ಇಸ್ಲಾಂ ಹಾಗೂ ಸಚಿವ ಹುಮಾಯೂನ್ ಕಬೀರ್, "ಸೌದಿ ಸರ್ಕಾರದ ಈ ನಡೆಯು ತೀವ್ರ ನಿರಾಶಾದಾಯಕವಾಗಿದೆ. ವಿಯೆನ್ನಾ ಒಪ್ಪಂದದ ಸದಸ್ಯ ದೇಶವಾಗಿದ್ದರೂ ಸೌದಿ ಸರ್ಕಾರ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತು ಢಾಕಾದಲ್ಲಿರುವ ಸೌದಿ ರಾಯಭಾರಿಗೆ ಸಮನ್ಸ್ ನೀಡಿ ಅಧಿಕೃತ ಸ್ಪಷ್ಟನೆ ಕೋರಲಾಗಿದೆ" ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ವ್ಯಕ್ತವಾದ ತೀವ್ರ ಆಕ್ರೋಶ

ಯಾವುದೇ ಸಾರ್ವಜನಿಕ ಸಾಕ್ಷ್ಯಾಧಾರಗಳಿಲ್ಲದೆ, ರಹಸ್ಯ ನ್ಯಾಯಾಲಯದ ಮೂಲಕ ಇಬ್ಬರು ಬಡ ವಲಸೆ ಕಾರ್ಮಿಕರನ್ನು ಕೊಂದು ಮುಗಿಸಿರುವ ಸೌದಿ ಅರೇಬಿಯಾದ ನೀತಿಯ ವಿರುದ್ಧ ಮಾನವ ಹಕ್ಕುಗಳ ಹೋರಾಟಗಾರರು ವ್ಯಾಪಕವಾಗಿ ಆಕ್ರೋಶ ಹೊರಹಾಕಿದ್ದಾರೆ. "ತಮ್ಮ ವಿರುದ್ಧ ಹೊರಿಸಲಾದ ಆರೋಪಗಳಿಗೆ ಉತ್ತರಿಸಲು ಅಥವಾ ವಕೀಲರನ್ನು ಪಡೆಯಲು ಅವಕಾಶ ನೀಡದೆ, ತಮ್ಮ ದೇಶದ ಸರ್ಕಾರಕ್ಕೂ ತಿಳಿಸದೆ ಎರಡು ಜೀವಗಳನ್ನು ತೆಗೆದಿರುವುದು ಕ್ರೂರ ಹಾಗೂ ನ್ಯಾಯಸಮ್ಮತತೆಯ ಭಾರಿ ಉಲ್ಲಂಘನೆ" ಎಂದು ಆಕ್ಸ್‌ಫರ್ಡ್ ಮೂಲದ ವಕೀಲ ರೇಹಾನ್ ರಶೀದ್ ಕಟುವಾಗಿ ಟೀಕಿಸಿದ್ದಾರೆ. ಪ್ರಸ್ತುತ ಬಾಂಗ್ಲಾದೇಶ ಮತ್ತು ಸೌದಿ ಅರೇಬಿಯಾ ನಡುವಿನ ವಿಮಾನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ, ಗಲ್ಲಿಗೇರಿಸಿರುವ ಇಬ್ಬರ ಮೃತದೇಹಗಳನ್ನು ಸ್ವದೇಶಕ್ಕೆ ತರುವುದು ಕೂಡ ವಿಳಂಬವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದುಬೈನಲ್ಲಿ ಒಂದೇ ಒಂದು ನದಿಯಿಲ್ಲ, ಆದರೂ ಕೊರತೆಯಿಲ್ಲ ನೀರು: ಕೋಟಿ ಕೋಟಿ ಲೀಟರ್ ಕುಡಿಯುವ ನೀರು ಬರುವುದಾದರೂ ಎಲ್ಲಿಂದ?
'ಇನ್ನು ಕೆಲವೇ ಗಂಟೆ ಬದುಕಬಹುದು' ಎಂದ ವೈದ್ಯರು; AI ಬಳಸಿ ತಾಯಿಯ ಜೀವ ಉಳಿಸಲು ನೆರವಾದ ಮಗ!