
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಆರೋಗ್ಯ ಮತ್ತು ಸಾವಿನ ಕುರಿತಾದ ವದಂತಿಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸರಣಿ ಪೋಸ್ಟ್‌ಗಳು, ಪಯೋಂಗ್ಯಾಂಗ್‌ನಲ್ಲಿ ಬೃಹತ್ ಅಧಿಕಾರ ಬದಲಾವಣೆ ನಡೆದಿದೆ ಹಾಗೂ ಆಡಳಿತ ವ್ಯವಸ್ಥೆ ಕುಸಿಯುವ ಭೀತಿಯಲ್ಲಿ ಚೀನಾ ಮಿಲಿಟರಿ ಪ್ರವೇಶಿಸಿದೆ ಎಂದು ಪ್ರತಿಪಾದಿಸುತ್ತಿವೆ. ಆದರೆ ಈ ಆರೋಪಗಳ ಹಿಂದೆ ಇರುವ ಸತ್ಯಾಂಶವೇನು ಎಂಬ ಪ್ರಶ್ನೆ ಈಗ ಅಂತರರಾಷ್ಟ್ರೀಯ ರಾಜಕೀಯ ವಲಯದಲ್ಲಿ ದೊಡ್ಡ ಪ್ರಶ್ನೆ ಹುಟ್ಟು ಹಾಕಿದೆ.
ಚೀನಾ ಡೆಮಾಕ್ರಸಿ ಪಾರ್ಟಿಯ ಅಧ್ಯಕ್ಷ ವಾಂಜುನ್ ಕ್ಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕಿಮ್ ಜಾಂಗ್-ಉನ್ ತೀವ್ರ ಮೆದುಳಿನ ರಕ್ತಸ್ರಾವದಿಂದ ಕೋಮಾ ಸ್ಥಿತಿಗೆ ತಲುಪಿದ್ದರು. ಉತ್ತರ ಕೊರಿಯಾದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದ ಕಾರಣ ಬೀಜಿಂಗ್‌ನ ಪೀಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ನಿಪುಣ ವೈದ್ಯರ ತಂಡವನ್ನು ಕರೆಯಿಸಲಾಗಿತ್ತು. ತದನಂತರ ಕಿಮ್ ಅವರನ್ನು ತುರ್ತು ಶಸ್ತ್ರಚಿಕಿತ್ಸೆಗೆ ಬೀಜಿಂಗ್‌ಗೆ ಕರೆದೊಯ್ಯಲಾಯಿತಾದರೂ, ನಿರ್ಣಾಯಕ ಚಿಕಿತ್ಸಾ ಸಮಯ ಮೀರಿದ್ದರಿಂದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಕ್ಸಿ ಹೇಳಿದ್ದಾರೆ.
ಇದಷ್ಟೇ ಅಲ್ಲದೆ, ಕಿಮ್ ಅವರ ಮೃತದೇಹವನ್ನು ಈಗಾಗಲೇ ರಹಸ್ಯವಾಗಿ ಉತ್ತರ ಕೊರಿಯಾಕ್ಕೆ ತರಲಾಗಿದ್ದು, ದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ಏಳದಂತೆ ಅಧಿಕೃತ ಘೋಷಣೆಯನ್ನು ತಡೆಹಿಡಿಯಲಾಗಿದೆ ಎಂದು ಕ್ಸಿ ಹೇಳಿದ್ದಾರೆ.
ಕಿಮ್ ಜಾಂಗ್-ಉನ್ ಸಾವಿನ ನಂತರ ಅವರ ಪುತ್ರಿ ಕಿಮ್ ಜು-ಎ ಬದಲಿಗೆ, ಅವರ ಸಹೋದರಿ ಕಿಮ್ ಯೋ-ಜಾಂಗ್ ಆಡಳಿತದ ಸಂಪೂರ್ಣ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ದೇಶದ ಮಿಲಿಟರಿಯ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಕಿಮ್ ಯೋ-ಜಾಂಗ್ ದಕ್ಷಿಣ ಕೊರಿಯಾದ ವಿರುದ್ಧ ಆಕ್ರಮಣಕಾರಿ ನಿಲುವನ್ನು ತಳೆದಿದ್ದಾರೆ ಎಂಬ ವರದಿಗಳು ಬಂದಿವೆ.
ದಕ್ಷಿಣ ಕೊರಿಯಾ ಗಡಿಯಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರವನ್ನು ತೀವ್ರಗೊಳಿಸುವುದು, ಎಚ್ಚರಿಕೆಯ ಗುಂಡುಗಳನ್ನು ಹಾರಿಸುವುದು ಮತ್ತು ಯುದ್ಧತಂತ್ರದ ದಾಳಿ ವ್ಯವಸ್ಥೆಯನ್ನು ನವೀಕರಿಸುವ ಮೂಲಕ ತಮ್ಮ ಅಧಿಕಾರವನ್ನು ಬಲಪಡಿಸಲು ಯತ್ನಿಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉತ್ತರ ಕೊರಿಯಾದಲ್ಲಿ ಅಂತರ್ಯುದ್ಧ ಅಥವಾ ಅಧಿಕಾರಕ್ಕಾಗಿ ಸಶಸ್ತ್ರ ಹೋರಾಟ ನಡೆಯುವ ಭೀತಿಯಿಂದ, ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಚೀನಾ ಸುಮಾರು 9000 ಸೈನಿಕರನ್ನು ಪಯೋಂಗ್ಯಾಂಗ್‌ಗೆ ರವಾನಿಸಿದೆ ಎಂದು ವಾಂಜುನ್ ಕ್ಸಿ ಆರೋಪಿಸಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ನಾರ್ದರ್ನ್ ಥಿಯೇಟರ್ ಕಮಾಂಡ್ ಪಡೆಯನ್ನು 'ಲೆವೆಲ್-III' ಹೈ ಅಲರ್ಟ್‌ನಲ್ಲಿ ಇರಿಸಲಾಗಿದ್ದು, ಮಿಲಿಟರಿ ನೆಲೆಗಳಿಂದ ಸಿಬ್ಬಂದಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎನ್ನಲಾಗಿದೆ.
ಉತ್ತರ ಕೊರಿಯಾದ ಬೆಳವಣಿಗೆಗಳ ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆರೋಗ್ಯದ ಬಗ್ಗೆಯೂ ವಾಂಜುನ್ ಕ್ಸಿ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಜಿನ್‌ಪಿಂಗ್ ಪಾರ್ಶ್ವವಾಯುವಿಗೆ ಈಡಾಗಿದ್ದರು ಹಾಗೂ ಬೀಜಿಂಗ್‌ಗೆ ಮರಳಿದ ನಂತರ ಅವರಿಗೆ ಹೃದಯರಕ್ತನಾಳದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ. ಕಿಮ್ ಜಾಂಗ್-ಉನ್ ಮತ್ತು ಕ್ಸಿ ಜಿನ್‌ಪಿಂಗ್ ಇಬ್ಬರೂ ಒಂದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರು ಎಂದು ಕ್ಸಿ ಹೇಳಿದ್ದಾರೆ.
ಈ ಎಲ್ಲಾ ಆರೋಪಗಳು ಮತ್ತು ಊಹಾಪೋಹಗಳ ನಡುವೆಯೂ, ಕಿಮ್ ಜಾಂಗ್-ಉನ್ ಅವರ ನಿಧನ ಅಥವಾ ಚೀನಾ ಸೈನ್ಯ ನಿಯೋಜನೆಯ ಬಗ್ಗೆ ಯಾವುದೇ ಅಧಿಕೃತ ಆಧಾರಗಳು ಲಭ್ಯವಾಗಿಲ್ಲ. ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು ಇತ್ತೀಚೆಗೆ ಕಿಮ್ ಜಾಂಗ್-ಉನ್ ಅವರು ತಮ್ಮ ಪತ್ನಿ ರಿ ಸೋಲ್-ಜು ಮತ್ತು ಪುತ್ರಿ ಕಿಮ್ ಜು-ಎ ಅವರೊಂದಿಗೆ ರಾಷ್ಟ್ರೀಯ ಉಡುಪು ಮತ್ತು ಪಾದರಕ್ಷೆಗಳ ಪ್ರದರ್ಶನದಲ್ಲಿ ಭಾಗವಹಿಸಿರುವ ಕಾರ್ಯಕ್ರಮಗಳ ಚಿತ್ರಗಳನ್ನು ಬಿಡುಗಡೆ ಮಾಡಿವೆ.
ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ಸಹ ಕಿಮ್ ಸಕ್ರಿಯರಾಗಿದ್ದಾರೆ ಎಂದೇ ಹೇಳುತ್ತಿವೆ. ಪ್ರಪಂಚದ ಅತ್ಯಂತ ರಹಸ್ಯಮಯ ದೇಶಗಳಲ್ಲಿ ಒಂದಾದ ಉತ್ತರ ಕೊರಿಯಾದ ಸುತ್ತ ಇಂತಹ ವದಂತಿಗಳು ಹುಟ್ಟುವುದು ಹೊಸದೇನಲ್ಲವಾದರೂ, ಈ ಬಾರಿಯ ಬೆಳವಣಿಗೆಗಳನ್ನು ಜಾಗತಿಕ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ