*ಗೌರವ ಬ್ಲ್ಯಾಕ್‌ಬೆಲ್ಟ್ ಹಿಂಪಡೆದ ವರ್ಲ್ಡ್ ಟೇಕ್ವಾಂಡೋ!
*"ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯ" ಎಂದ ಸಂಸ್ಥೆ
*ರಷ್ಯಾ ಮತ್ತು ಬೆಲಾರಸ್‌ನಲ್ಲಿ ಟೇಕ್ವಾಂಡೋ ಕಾರ್ಯಕ್ರಮ ರದ್ದು
ಮಾಸ್ಕೋ (ಮಾ. 01): ಉಕ್ರೇನ್-ರಷ್ಯಾ ಸಂಧಾನ ಮಾತುಕತೆ ಅಷ್ಟುಫಲ ನೀಡದೇ ಇರುವ ಬೆನ್ನಲ್ಲೇ ಉಕ್ರೇನ್ ರಾಜಧಾನಿ ಕೀವ್ ಹಾಗೂ ದೇಶದ 2ನೇ ಅತಿ ದೊಡ್ಡ ನಗರ ಖಾರ್ಕೀವ್ ಮೇಲೆ ರಷ್ಯಾ ಭಾರೀ ಬಾಂಬ್ ದಾಳಿ ನಡೆಸಿದೆ. ಹೀಗಾಗಿ ರಷ್ಯಾ-ಉಕ್ರೇನ್ ನಡುವೆ ಘೋರ ಯುದ್ಧ 6ನೇ ದಿನವೂ ಮುಂದುವರೆದಿದೆ. ಈ ಮಧ್ಯೆ ಉಕ್ರೇನ್ ವಿರುದ್ಧ ದಾಳಿ ನಡೆಸಿದ್ದಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಗೌರವ ಟೇಕ್ವಾಂಡೋ ಬ್ಲಾಕ್ ಬೆಲ್ಟ್ ( Honorary Black Belt) ಹಿಂಪಡೆಯಲಾಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ವರ್ಲ್ಡ್ ಟೇಕ್ವಾಂಡೋ ಈ ಘೋಷಣೆ ಮಾಡಿದೆ.
"ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯ" ಎಂಬ ವಿಶ್ವ ಟೇಕ್ವಾಂಡೋ ದೃಷ್ಟಿಕೋನ ಮತ್ತು ಗೌರವ ಮತ್ತು ಸಹಿಷ್ಣುತೆಯ ವಿಶ್ವ ಟೇಕ್ವಾಂಡೋ ಮೌಲ್ಯಗಳಿಗೆ ವಿರುದ್ಧವಾದ ಉಕ್ರೇನ್‌ನಲ್ಲಿ ಮುಗ್ಧ ಜೀವಗಳ ಮೇಲಿನ ಕ್ರೂರ ದಾಳಿಯನ್ನು ವಿಶ್ವ ಟೇಕ್ವಾಂಡೋ ಬಲವಾಗಿ ಖಂಡಿಸುತ್ತದೆ" ಎಂದು ಕ್ರೀಡಾ ಆಡಳಿತ ಮಂಡಳಿ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
undefined
ಇದನ್ನೂ ಓದಿ: Russia Ukraine Crisis: ಜೀವ ಉಳಿಸಿಕೊಳ್ಳಿ ಮತ್ತು ಜಾಗ ಖಾಲಿ ಮಾಡಿ: ರಷ್ಯಾ ಯೋಧರಿಗೆ ಉಕ್ರೇನ್ ಅಧ್ಯಕ್ಷ ಆಫರ್!
"ಈ ನಿಟ್ಟಿನಲ್ಲಿ, ವಿಶ್ವ ಟೇಕ್ವಾಂಡೋ ನವೆಂಬರ್ 2013 ರಲ್ಲಿ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಲಾದ ಗೌರವ 9 ನೇ ಡಾನ್ ಬ್ಲಾಕ್ ಬೆಲ್ಟನ್ನು ಹಿಂಪಡೆಯಲು ನಿರ್ಧರಿಸಿದೆ" ಎಂದು ಹೇಳಿಕೆ ತಿಳಿಸಿದೆ. ಅಲ್ಲದೇ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವುದಾಗಿ ತಿಳಿಸಿರುವ ವಿಶ್ವ ಟೇಕ್ವಾಂಡೋ, ರಷ್ಯಾ ಮತ್ತು ಬೆಲಾರಸ್‌ನಲ್ಲಿ ಟೇಕ್ವಾಂಡೋ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು ಹೇಳಿದೆ.
World Taekwondo strongly condemns the brutal attacks on innocent lives in Ukraine, which go against the World Taekwondo vision of “Peace is More Precious than Triumph” and the World Taekwondo values of respect and tolerance.https://t.co/nVTdxDdl2I
— World Taekwondo (@worldtaekwondo)
ವರ್ಲ್ಡ್ ಟೇಕ್ವಾಂಡೋ ಪ್ರಕಟಣೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಟೇಕ್ವಾಂಡೋ ಕ್ರೀಡೆಯನ್ನು ಅಭ್ಯಾಸ ಮಾಡುವವರು ಸ್ವಾಗತಿಸಿದ್ದಾರೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಫುಟ್ಬಾಲ್ ಸಂಸ್ಥೆಗಳಾದ FIFA ಮತ್ತು UEFA ರಷ್ಯಾದ ರಾಷ್ಟ್ರೀಯ ತಂಡ ಮತ್ತು ಕ್ಲಬ್‌ಗಳನ್ನು ಸ್ಪರ್ಧೆಗಳಿಂದ ಅಮಾನತುಗೊಳಿಸಿವೆ. "FIFA ಮತ್ತು UEFA ಇಂದು ಒಟ್ಟಾಗಿ ನಿರ್ಧರಿಸಿದೆ, ರಷ್ಯಾದ ಎಲ್ಲಾ ತಂಡಗಳು, ರಾಷ್ಟ್ರೀಯ ಪ್ರತಿನಿಧಿ ತಂಡಗಳು ಅಥವಾ ಕ್ಲಬ್ ತಂಡಗಳು, ಮುಂದಿನ ಸೂಚನೆ ಬರುವವರೆಗೂ FIFA ಮತ್ತು UEFA ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಲಾಗಿದೆ" ಎಂದು ಎರಡೂ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಇದನ್ನೂ ಓದಿ: ಉಕ್ರೇನ್ ವಿಚಾರದಲ್ಲಿ ಅಳೆದು ತೂಗಿ ಏಕೆ ಹೆಜ್ಜೆ ಇಡುತ್ತಿದೆ ಭಾರತ? ಇಲ್ಲಿದೆ 5 ಕಾರಣ
ಕ್ರೀಡಾ ಜಗತ್ತಿನಿಂದ ಬಹಿಷ್ಕಾರ!: ಇನ್ನು ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ (Russia) ಕ್ರೀಡಾ ಜಗತ್ತು ಬಹಿಷ್ಕಾರ ಹಾಕುತ್ತಿದೆ. ರಷ್ಯಾದ ಕ್ರೀಡಾ ತಂಡಗಳು, ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಸ್ಪರ್ಧೆಗಳಿಂದ ನಿಷೇಧಗೊಳಿಸುವಂತೆ ಉಕ್ರೇನ್ (Ukraine) ಸೇರಿದಂತೆ ಹಲವು ದೇಶಗಳ ಕ್ರೀಡಾಪಟುಗಳಿಂದ ಜಾಗತಿಕ ಕ್ರೀಡಾ ಸಂಸ್ಥೆಗಳು ಹಾಗೂ ಒಕ್ಕೂಟಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈಗಾಗಲೇ ಹಲವು ಜಾಗತಿಕ ಕ್ರೀಡಾ ಸಂಸ್ಥೆ, ಒಕ್ಕೂಟಗಳು ರಷ್ಯಾದಲ್ಲಿ ನಡೆಯಬೇಕಿದ್ದ ಕ್ರೀಡಾಕೂಟಗಳನ್ನು ಸ್ಥಳಾಂತರಿಸಿವೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ರಷ್ಯಾ ಕ್ರೀಡಾಪಟುಗಳ ಸ್ಪರ್ಧೆಗೆ ಅವಕಾಶ ನೀಡದಂತೆ ತನ್ನ ಸದಸ್ಯ ಕ್ರೀಡಾ ಸಂಸ್ಥೆ, ಒಕ್ಕೂಟಗಳಿಗೆ ಸೂಚಿಸಿದೆ.
ರಷ್ಯಾ ಕ್ರೀಡಾಪಟುಗಳಿಗೆ ಅವಕಾಶ ಬೇಡ ಎಂದ ಐಒಸಿ!: ರಷ್ಯಾದಲ್ಲಿ ಯಾವುದೇ ಕ್ರೀಡಾಕೂಟ ನಡೆಸದಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತನ್ನ ಸದಸ್ಯ ಸಂಸ್ಥೆ ಹಾಗೂ ಒಕ್ಕೂಟಗಳಿಗೆ ಸೂಚನೆ ನೀಡಿದೆ. ಅಲ್ಲದೇ ರಷ್ಯಾದ ಯಾವುದೇ ಕ್ರೀಡಾಪಟು ಆ ದೇಶದ ಬಾವುಟದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೆ ಇರಲು ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಷ್ಯಾದ ಸ್ಪರ್ಧಿಗಳಿಗೆ ಪ್ರವೇಶ ನಿರಾಕರಿಸುವಂತೆ ಎಲ್ಲಾ ಜಾಗತಿಕ ಸಂಸ್ಥೆ ಹಾಗೂ ಒಕ್ಕೂಟಗಳಿಗೆ ತಿಳಿಸಿದೆ. ಇದೇ ವೇಳೆ 2001ರಲ್ಲಿ ವ್ಲ್ಯಾಡಿಮಿರ್ ಪುಟಿನ್‌ಗೆ (Vladimir Putin) ನೀಡಿದ್ದ ‘ಒಲಿಂಪಿಕ್ ಆರ್ಡರ್’(ಒಲಿಂಪಿಕ್ಸ್ ಆಯೋಜನೆ, ಅಭಿವೃದ್ಧಿಗೆ ಸಹಕರಿಸಿದ್ದಕ್ಕೆ ನೀಡುವ ಗೌರವ) ಅನ್ನು ಐಒಸಿ ಹಿಂಪಡೆದಿದೆ.