ರಷ್ಯಾ- ಉಕ್ರೇನ್ ಯುದ್ಧ ಆರಂಭಗೊಂಡು ವರ್ಷಗಳೇ ಉರುಳಿದೆ. ಈಗಲೂ ಯುದ್ಧ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ ಯುದ್ಧ ನಿಲ್ಲಿಸುವ ಮಾತನಾಡಿದ್ದಾರೆ. ಇದೇ ವೇಳೆ ಯುದ್ಧ ಯಾಕೆ ನಿಲ್ಲುತ್ತಿಲ್ಲ ಅನ್ನೋ ಕಾರಣವನ್ನೂ ನೀಡಿದ್ದಾರೆ.
ಪೀಟರ್ಸ್‌ಬರ್ಗ್(ಜು.30): ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಅಂತ್ಯ ಹಾಡಲು ಭಾರತ ಸೇರಿದಂತೆ ಹಲವು ದೇಶಗಳು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ. ಬರೋಬ್ಬರಿ 522 ದಿನಗಳಿಂದ ಯುದ್ಧ ನಡೆಯುತ್ತಲೇ ಇದೆ. ಯುದ್ಧ 2ನೇ ವರ್ಷ ಪೂರೈಸಲು ಕೆಲ ದಿನಗಳು ಮಾತ್ರ ಬಾಕಿ. ಇದುವರೆಗೆ ರಷ್ಯಾ ಸಂಪೂರ್ಣ ಮೇಲುಗೈ ಸಾಧಿಸಿಲ್ಲ. ಇತ್ತ ಉಕ್ರೇನ್ ಕೂಡ ಧೈರ್ಯದಿಂದ ಯುದ್ಧ ಎದುರಿಸಿದೆ ಹೊರತು ಶರಣಾಗಿಲ್ಲ. ಪ್ರತಿ ದಿನ ಉಕ್ರೇನ್ ಮೇಲೆ ಬಾಂಬ್ ದಾಳಿ, ಮಿಸೈಲ್ ದಾಳಿ ನಡೆಯುತ್ತಲೇ ಇದೆ. ಅತ್ತ ಉಕ್ರೇನ್ ಕೂಡ ಪ್ರತಿದಾಳಿ ನಡೆಸುತ್ತಿದೆ.ಈ ಎಲ್ಲಾ ಬೆಳವಣಿಗೆ ಬಳಿಕ ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೊದಲ ಬಾರಿಗೆ ಯುದ್ಧ ನಿಲ್ಲಿಸುವ ಮಾತನಾಡಿದ್ದಾರೆ. ಆದರೆ ಯುದ್ಧ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರಣವನ್ನೂ ನೀಡಿದ್ದಾರೆ.
ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಆಫ್ರಿಕನ್ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಿದ ಪುಟಿನ್, ಯುದ್ಧ ನಿಲ್ಲಿಸುವ ಮಾತನಾಡಿದ್ದಾರೆ. ಆಫ್ರಿಕಾ ನಾಯಕರು ಶಾಂತಿ ಸ್ಥಾಪನೆಗೆ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಆಫ್ರಿಕನ್ ನಾಯಕರ ಶಾಂತಿ ಮಾತುಕತೆಗೆ ಮಾಸ್ಕೋ ಬದ್ಧವಾಗಿದೆ. ಶಾಂತಿ ಸ್ಥಾಪನೆಗೆ ಮಾಸ್ಕೋ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆದರೆ ಉಕ್ರೇನ್ ನಡೆಸುತ್ತಿರುವ ದಾಳಿಯಿಂದ ರಷ್ಯಾಗೆ ಯುದ್ಧ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷರ ವಿರುದ್ಧ ಬಂಡಾಯವೆದ್ದ ಪ್ರಿಗೋಝಿನ್ ಸಾವು? ವ್ಯಾಗ್ನರ್‌ಗೆ ಹೊಸ ಬಾಸ್ ಆಯ್ಕೆ ಮಾಡಿದ ಪುಟಿನ್!
ಆಫ್ರಿಕನ್ ನಾಯಕರ ಜೊತೆಗಿನ ಮಾತುಕತೆ ಬಳಿಕ ಸುದ್ದಿಗೋಷ್ಠಿ ನಡೆಸಿದ ವ್ಲಾದಿಮಿರ್ ಪುಟಿನ್, ಯಾವುದೇ ದೇಶದ ಜೊತೆ ಶಾಂತಿ ಮಾತುಕತೆಯನ್ನು ರಷ್ಯಾ ಅಲ್ಲಗೆಳೆಯುವುದಿಲ್ಲ. ಜೊತೆಗೆ ಈ ವಿಚಾರವನ್ನು ಕಡೆಗಣಿಸುವುದಿಲ್ಲ ಎಂದಿದ್ದಾರೆ. ರಷ್ಯಾ ಶಾಂತಿ ಮಾತುಕತೆಗೆ ಸದಾ ಸಿದ್ಧವಿದೆ. ಆದರೆ ಉಕ್ರೇನ್ ಸೇನೆ ನಡೆಸುತ್ತಿರುವ ದಾಳಿಯಿಂದ ನಾವು ಪ್ರತಿದಾಳಿ ನಡೆಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಯುದ್ಧ ಮುಂದುವರಿಯುತ್ತಿದೆ ಎಂದು ಪುಟಿನ್ ಹೇಳಿದ್ದಾರೆ. ಟ
ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಉಕ್ರೇನ್ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದರು. ಈ ವೇಳೆ ಯುದ್ಧ ನಿಲ್ಲಿಸಿ ಶಾಂತಿಮಾತುಕತೆಗೆ ಒತ್ತು ನೀಡಿದ್ದರು. ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾರನ್ನು ಭೇಟಿ ಮಾಡಿ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಿದ್ದರು. 17ನೇ ಪೂರ್ವ ಆಸಿಯಾನ್-ಭಾರತ ಶೃಂಗ ಸಭೆಯಲ್ಲಿ ಈ ಮಹತ್ವದ ಮಾತುಕತೆ ನಡೆಸಿದ್ದರು.
50 ಸಾವಿರ ರಷ್ಯಾ ಯೋಧರ ಸಾವು: ಕೇವಲ 6 ಸಾವಿರ ಸಾವು ಎಂದು ಅಂಕಿ ಅಂಶ ಮುಚ್ಚಿಟಿದ್ದ ರಷ್ಯಾ
ದ್ವಿ ಪಕ್ಷೀಯ ಸಹಕಾರ, ಅಣ್ವಸ್ತ್ರ ಭೀತಿ ಹಾಗೂ ಜಾಗತಿಕ ಆಹಾರ ಭದ್ರತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿದೆವು ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಇನ್ನು ‘ರಷ್ಯಾ ತಕ್ಷಣವೇ ಉಕ್ರೇನ್ ಮೇಲಿನ ಮಾರಣಾಂತಿಕ ದಾಳಿಗಳನ್ನು ನಿಲ್ಲಿಸಬೇಕು ಎಂದು ಸಭೆಯಲ್ಲಿ ನಾವು ಒತ್ತಿ ಹೇಳಿದೆವು ಹಾಗೂ ರಷ್ಯಾ ಶೀಘ್ರ ಸೇನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಿದೆವು’ ಎಂದು ಡಿಮಿಟ್ರೋ ಹೇಳಿದ್ದರು.ಈ ಮುಂಚೆಯೂ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಗಲೂ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್‌ಕಿ ಜೊತೆ ಸಾಕಷ್ಟುಬಾರಿ ಕರೆ ಮಾಡಿ ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಒತ್ತಾಯಿಸಿದ್ದರು.