*ಉಕ್ರೇನ್ ‘ಕೆಂಪು ಗೆರೆ’ ದಾಟಿದೆ: ರಷ್ಯಾ: ರಷ್ಯಾ ಹುಚ್ಚುತನ: ಉಕ್ರೇನ್
*ರಷ್ಯಾ ಅಣ್ವಸ್ತ್ರ ಸನ್ನದ್ಧತೆ ಆತಂಕಕಾರಿ ಬೆಳವಣಿಗೆ: ವಿಶ್ವಸಂಸ್ಥೆ
ವಿಶ್ವಸಂಸ್ಥೆ (ಮಾ. 01): ಅತ್ತ ಉಕ್ರೇನ್‌ನಲ್ಲಿ ಕಾದಾಡುತ್ತಿರುವ ರಷ್ಯಾ ಹಾಗೂ ಉಕ್ರೇನ್ ವಿಶ್ವಸಂಸ್ಥೆಯಲ್ಲೂ ಮಾತಿನ ಸಮರ ನಡೆಸಿವೆ. ‘ಉಕ್ರೇನ್ ನ್ಯಾಟೋ ಸೇರಲು ಮುಂದಾಗಿದ್ದೇ ರಷ್ಯಾಗೆ ದಾಳಿ ಮಾಡಲು ಪ್ರಚೋದಿಸಿತು’ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯ ತುರ್ತು ಅಧಿವೇಶನದಲ್ಲಿ ರಷ್ಯಾದ ರಾಯಭಾರಿ ವ್ಯಾಸಿಲಿ ನೆಬೆಂಜಿಯಾ ಖಾರವಾಗಿ ಹೇಳಿದ್ದಾರೆ. ಇತ್ತ ಉಕ್ರೇನ್ ರಾಯಭಾರಿ ಸರ್ಗೈ ಮಾತನಾಡಿ, ‘ರಷ್ಯಾ ಅಣ್ವಸ್ತ್ರ ಬೆದರಿಕೆ ಹಾಕುತ್ತಿದೆ, ಎಂಥ ಹುಚ್ಚುತನ. ಉಕ್ರೇನ್‌ನ 2 ಭಾಗಗಳ ಮೇಲೆ ಹಿಡಿತ ಸಾಧಿಸುವ ಘೋಷಣೆ ಹಿಂಪಡೆಯುವಂತೆ ರಷ್ಯಾಗೆ ವಿಶ್ವಸಂಸ್ಥೆ ಹೇಳಬೇಕು. ಉಕ್ರೇನ್ ಉಳಿದರೆ ಇಂದು ವಿಶ್ವಸಂಸ್ಥೆ, ಪ್ರಜಾಸತ್ತೆ ಉಳಿದಂತೆ’ ಎಂದಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ರಷ್ಯಾ ರಾಯಭಾರಿ ವ್ಯಾಸಿಲಿ, ‘ರಷ್ಯಾ ಒಕ್ಕೂಟವು ಈ ಶತ್ರುತ್ವವನ್ನು ಆರಂಭಿಸಿಲ್ಲ. ಉಕ್ರೇನ್ ಹಾಗೂ ಜಾರ್ಜಿಯಾ ನ್ಯಾಟೋ ಒಕ್ಕೂಟವನ್ನು ಸೇರಲು ಮುಂದಾಗಿದ್ದವು. ರಷ್ಯಾ ವಿರೋಧಿ ಉಕ್ರೇನ್‌ನನ್ನು ಸೃಷ್ಟಿಸುವ ಯೋಜನೆಯೊಂದಿಗೆ ಅವರು (ಅಮೆರಿಕ) ಉಕ್ರೇನಿಗೆ ನ್ಯಾಟೋ ಸೇರಲು ಪ್ರಚೋದಿಸಿದ್ದಾರೆ. ನ್ಯಾಟೋ ಸೇರಲು ಮುಂದಾಗಿ ಉಕ್ರೇನ್ ಕೆಂಪು ಗೆರೆಯನ್ನು ದಾಟಿದೆ’ ಎಂದು ಕಿಡಿಕಾರಿದರು.
‘ಇದನ್ನು ತಡೆಯಲು ರಷ್ಯಾ ಉಕ್ರೇನ್ ವಿರುದ್ಧ ಕ್ರಮ (ಯುದ್ಧ) ಕೈಗೊಂಡಿದೆ. ಉಕ್ರೇನ್‌ನನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ರಷ್ಯಾ ಹೊಂದಿಲ್ಲ. ರಷ್ಯಾ ಕೂಡಾ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: Russia Ukraine Crisis: ಕೀವ್, ಖಾರ್ಕೀವ್ ಮೇಲೆ ಕ್ಲಸ್ಟರ್ ಬಾಂಬ್: ಅಣ್ವಸ್ತ್ರ ಸನ್ನದ್ಧ ಸ್ಥಿತಿಯಲ್ಲಿ ರಷ್ಯಾ!
ರಷ್ಯಾ ಅಣ್ವಸ್ತ್ರ ಸನ್ನದ್ಧತೆ ಆತಂಕಕಾರಿ ಬೆಳವಣಿಗೆ: ವಿಶ್ವಸಂಸ್ಥೆ: ರಷ್ಯಾ ಅಣ್ವಸ್ತ್ರವನ್ನು ಬಳಕೆಗೆ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಸೋಮವಾರ ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನಿಂದಾಗಿ ವಿಶ್ವಸಂಸ್ಥೆಯ ಸಾಮಾನ್ಯಸಭೆ ನಡೆದ ತುರ್ತು ಅಧಿವೇಶನದಲ್ಲಿ ಮಾತನಾಡಿದ ಗುಟೆರಸ್ ‘ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಣ್ವಸ್ತ್ರಗಳನ್ನು ಬಳಕೆಗೆ ಸಿದ್ಧವಾಗಿಡಲು ಸೇನೆ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಯು ವಿಶ್ವ ಮತ್ತೊಮ್ಮೆ ಪರಮಾಣು ಯುದ್ಧದ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂಬ ಭೀತಿ ಸೃಷ್ಟಿಸಿದೆ.
ಅಣ್ವಸ್ತ್ರದ ಬಳಕೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಉಕ್ರೇನ್‌ನಲ್ಲಿ ಯುದ್ಧ ತಕ್ಷಣ ನಿಲ್ಲಬೇಕು. ಉಕ್ರೇನ್ ಹಾಗೂ ರಷ್ಯಾದ ನಡುವಿನ ನೇರ ಮಾತುಕತೆ ನಡೆದಾಗಲೇ ಯುದ್ಧವು ನಿಲ್ಲಬಹುದು’ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Russia Ukraine Crisis: 3.5 ತಾಸು ಸುದೀರ್ಘ ಮಾತುಕತೆ: ಸಂಧಾನ ಅಪೂರ್ಣ!
ವಿಶ್ವಸಂಸ್ಥೆ ವಿಶೇಷ ಅಧಿವೇಶನ ಪ್ರಸ್ತಾವಕ್ಕೆ ಭಾರತದ ಮತ ಇಲ್ಲ: ಉಕ್ರೇನ್ ಬಿಕ್ಕಟ್ಟು ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ಅಧಿವೇಶನ ಕರೆಯುವ ಕುರಿತ ಭದ್ರತಾ ಮಂಡಳಿಯ ಪ್ರಸ್ತಾಪಕ್ಕೆ ಮತ ಹಾಕುವುದರಿಂದ ಭಾರತ ದೂರವೇ ಉಳಿದಿದೆ. ಈ ಮೂಲಕ ಕಳೆದ 4 ದಿನಗಳಲ್ಲಿ ಎರಡನೇ ಬಾರಿ ಈ ವಿಷಯದಲ್ಲಿ ತಟಸ್ಥ ನೀತಿಯನ್ನು ಪ್ರದರ್ಶಿಸಿದೆ. ಜೊತೆಗೆ ಉಕ್ರೇನ್ ಬಿಕ್ಕಟ್ಟು ಇತ್ಯರ್ಥಕ್ಕೆ ಸಂಧಾನವೊಂದೇ ಮಾರ್ಗ ಎಂದು ಪ್ರತಿಪಾದಿಸಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಿಶೇಷ ಅಧಿವೇಶನ ಕರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಭಾನುವಾರ ಮಧ್ಯಾಹ್ನ ಸಭೆ ಸೇರಿತ್ತು. ಸಭೆಯಲ್ಲಿ ವಿಶೇಷ ಅಧಿವೇಶನ ಕರೆಯುವ ಪ್ರಸ್ತಾಪವನ್ನು ಮತಕ್ಕೆ ಹಾಕಿದ ವೇಳೆ, 15 ಸದಸ್ಯ ದೇಶಗಳ ಪೈಕಿ ಭಾರತ, ಚೀನಾ, ಯುಎಇ ಮತದಿಂದ ದೂರ ಉಳಿದವು. ರಷ್ಯಾ ಪ್ರಸ್ತಾವದ ವಿರುದ್ಧವಾಗಿ ಮತ ಚಲಾಯಿತು. ಉಳಿದ 11 ದೇಶಗಳು ಪ್ರಸ್ತಾವದ ಪರವಾಗಿ ಮತ ಹಾಕಿದವು.
ಈ ವೇಳೆ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ, ‘ಉಕ್ರೇನ್‌ನಲ್ಲಿ ಪರಿಸ್ಥಿತಿ ದಿನೇ ದಿನೇ ವಿಷಮವಾಗುತ್ತಿರುವುದು ವಿಷಾದಕರ ಸಂಗತಿ. ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ತಕ್ಷಣವೇ ಹಿಂಸಾಚಾರ ನಿಲ್ಲಿಸಬೇಕು ಮತ್ತು ದ್ವೇಷವನ್ನು ಕೈಬಿಡಬೇಕು. ವಿವಾದ ಇತ್ಯರ್ಥಕ್ಕೆ ರಾಜತಾಂತ್ರಿಕ ಮತ್ತು ಸಂಧಾನಕ್ಕೆ ಮರಳುವುದರ ಹೊರತಾಗಿಯ ಬೇರಾವುದೇ ಆಯ್ಕೆಗಳು ಇಲ್ಲ’ ಎಂದು ಪ್ರತಿಪಾದಿಸಿದರು.