'ದೇವರ ಸಲಹೆ': 26ನೇ ಎವರೆಸ್ಟ್ ಚಾರಣ ಕೈಬಿಟ್ಟ ಕಮಿ!

By Kannadaprabha NewsFirst Published May 26, 2021, 7:58 AM IST
Highlights

* ದೇವರ ಮಾತು ಕೇಳಿ 26ನೇ ಬಾರಿ ಎವರೆಸ್ಟ್‌ ಏರುವುದು ಬಿಟ್ಟ ಕಮಿ

* ಈ ಸಲ ಶಿಖರ ಏರದಂತೆ ದೇವರಿಂದಲೇ ನನಗೆ ಸೂಚನೆ

* ಹೀಗಾಗಿ ಮುಂದಿನ ವರ್ಷ ಮೌಂಟ್‌ ಎವರೆಸ್ಟ್‌ ಏರುವೆ

ಕಾಠ್ಮಂಡು(ಮೇ.26): ವಿಶ್ವದ ಅತೀ ಎತ್ತರದ ಹಿಮಶಿಖರ ಮೌಂಟ್‌ ಎವರೆಸ್ಟ್‌ ಅನ್ನು 25 ಸಲ ಹತ್ತಿದ ವಿಶ್ವದಾಖಲೆ ಹೊಂದಿರುವ ಪರ್ವತಾರೋಹಿ ಕಮಿ ರೀಟಾ ಅವರು 26ನೇ ಸಲ ಪರ್ವತ ಏರುವ ತಮ್ಮ ಯತ್ನವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಕೆಟ್ಟಕನಸು, ದೇವರ ಸಲಹೆ ಮತ್ತು ಕೆಟ್ಟವಾತಾವರಣದಿಂದಾಗಿ ಮೌಂಟ್‌ ಎವರೆಸ್ಟ್‌ ಏರುವ ಯತ್ನವನ್ನು ಅರ್ಧಕ್ಕೆ ಕೈಬಿಟ್ಟಿದ್ದಾಗಿ ಕಮಿ ರೀಟಾ ಹೇಳಿದ್ದಾರೆ.

ಅರ್ಧದಲ್ಲೇ ತಮ್ಮ ಪರ್ವತಾರೋಹಣದಿಂದ ಹಿಂತಿರುಗಿದ ಬಳಿಕ ಮಂಗಳವಾರ ಮಾತನಾಡಿದ ಕಮಿ ರೀಟಾ, ಮೌಂಟ್‌ ಎವರೆಸ್ಟ್‌ನ ಕ್ಯಾಂಪ್‌ 3ಗೆ ತಲುಪಿದ್ದೆ. ಈ ವೇಳೆ ವಾತಾವರಣ ವೈಪರಿತ್ಯ ಕಂಡುಬಂದಿತು. ಜೊತೆಗೆ ನಾನು ಕೆಟ್ಟಕನಸನ್ನೂ ಕಂಡೆ. ದೇವರ ಮೇಲೆ ಅಪಾರ ನಂಬಿಕೆಯಿರುವ ನನಗೆ ಶಿಖರವನ್ನು ಏರದಂತೆ ದೇವರೇ ಸೂಚಿಸಿದ ಅನುಭವ ಆಯಿತು.

ಈ ಹಿನ್ನೆಲೆಯಲ್ಲಿ ಪರ್ವತಾರೋಹಣವನ್ನು ಅರ್ಧದಲ್ಲೇ ಬಿಟ್ಟು ಬಂದಿದ್ದು, ಮುಂದಿನ ವರ್ಷ ಶಿಖರ ಏರುತ್ತೇನೆ ಎಂದು ಹೇಳಿದರು. ಮೌಂಟ್‌ ಎವರೆಸ್ಟ್‌ನಿಂದ ಹೆಲಿಕಾಪ್ಟರ್‌ ಮೂಲಕ ಕಾಠ್ಮಂಡುವಿಗೆ ಬಂದಿಳಿದ ರೀಟಾ ಅವರನ್ನು ಅವರ ಪತ್ನಿ, ಸ್ನೇಹಿತರು ಹಾಗೂ ಸರ್ಕಾರದ ಅಧಿಕಾರಿಗಳು ಹೂವಿನ ಹಾರ ಹಾಕಿ ಸ್ವಾಗತಿಸಿದರು.

click me!