ಕೊರೋನಾ ಲಸಿಕೆ ಕದಿಯಲು ಗುಪ್ತಚರ ದಳಗಳ ರೇಸ್!| ಮಾಹಿತಿ ರಕ್ಷಿಸಿಕೊಳ್ಳಲು ಇನ್ನಷ್ಟುಗುಪ್ತಚರ ದಳಗಳ ಶತಪ್ರಯತ್ನ| ಜಗತ್ತಿನ ವಿವಿಧ ದೇಶಗಳ ನಡುವೆ ನಡೆಯುತ್ತಿದೆ ವಿಚಿತ್ರ ಸಮರ
ವಾಷಿಂಗ್ಟನ್(ಸೆ.07): ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಗುಪ್ತಚರ ದಳಗಳ ನಡುವೆ ವಿಚಿತ್ರ ಸಮರವೊಂದು ಆರಂಭವಾಗಿದೆ. ಅದು - ಕೊರೋನಾ ವೈರಸ್‌ಗೆ ಯಾವ ದೇಶದ ಯಾವ ಸಂಶೋಧನಾ ಸಂಸ್ಥೆಗಳು ಲಸಿಕೆ ಉತ್ಪಾದಿಸುವಲ್ಲಿ ಎಷ್ಟುಪ್ರಗತಿ ಸಾಧಿಸಿವೆ ಎಂಬುದನ್ನು ಪತ್ತೆಹಚ್ಚುವುದು ಮತ್ತು ಸಾಧ್ಯವಾದರೆ ಅದರ ಮಾಹಿತಿ ಕದಿಯುವುದು.
ಚೀನಾ, ರಷ್ಯಾ, ಇರಾನ್ ಮುಂತಾದ ರಾಷ್ಟ್ರಗಳ ಗುಪ್ತಚರ ದಳಗಳು ಹೀಗೆ ಮಾಹಿತಿ ಕದಿಯುವ ಪ್ರಯತ್ನದಲ್ಲಿದ್ದರೆ ಅಮೆರಿಕ, ಕೆನಡಾ, ಬ್ರಿಟನ್ ಮುಂತಾದ ದೇಶಗಳ ಗುಪ್ತಚರ ದಳಗಳು ಈ ಪ್ರಯತ್ನವನ್ನು ವಿಫಲಗೊಳಿಸಲು ಹಾಗೂ ಸಂಶೋಧನಾ ಸಂಸ್ಥೆಗಳ ಮಾಹಿತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ.
ಹೀಗೆ ಮಾಹಿತಿ ಕದಿಯುವ ಮತ್ತು ಮಾಹಿತಿ ರಕ್ಷಿಸುವ ಎರಡೂ ಪ್ರಯತ್ನಗಳು ಸೈಬರ್ ಲೋಕದಲ್ಲಿ, ಅಂದರೆ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡುವುದು ಮುಂತಾದ ಡಿಜಿಟಲ್ ಸಮರ ತಂತ್ರಗಳ ಮೂಲಕ, ನಡೆಯುತ್ತಿವೆ. ಹಿಂದೆ ಶೀತಲ ಸಮರದ ವೇಳೆ ಅಮೆರಿಕ ಮತ್ತು ರಷ್ಯಾ ನಡುವೆ ಯಾವ ದೇಶ ಬಾಹ್ಯಾಕಾಶ ಸಂಶೋಧನೆಯಲ್ಲಿ ಮೊದಲು ಮಹತ್ವದ ಮೈಲುಗಲ್ಲು ಸಾಧಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಗುಪ್ತಚರ ದಳಗಳು ಮಾಹಿತಿ ಕದಿಯಲು ಯತ್ನಿಸುತ್ತಿದ್ದ ರೀತಿಯನ್ನು ಇದು ನೆನಪಿಸುತ್ತಿದೆ ಎಂದು ಜಾಗತಿಕ ವಿಚಕ್ಷಣ ತಜ್ಞರು ಹೇಳಿದ್ದಾರೆ.
ಮಾಹಿತಿ ಕದಿಯಲು ಯತ್ನಿಸುತ್ತಿರುವ ದೇಶದ ಗುಪ್ತಚರ ಸಂಸ್ಥೆಗಳು ಲಸಿಕೆ ತಯಾರಿಸುವ ಫಾರ್ಮಾಸುಟಿಕಲ್ ಕಂಪನಿಗಳ ಹಿಂದೆ ಬಿದ್ದಿಲ್ಲ. ಬದಲಿಗೆ, ಲಸಿಕೆಯನ್ನು ಕಂಡುಹಿಡಿಯಲು ಸಂಶೋಧನೆ ನಡೆಸುತ್ತಿರುವ ಅಮೆರಿಕದ ನಾತ್‌ರ್ ಕೆರೋಲಿನಾ ವಿವಿ ಮುಂತಾದ ವೈಜ್ಞಾನಿಕ ಸಂಸ್ಥೆಗಳ ಸೈಬರ್ ಜಾಲವನ್ನೇ ಹ್ಯಾಕ್ ಮಾಡಲು ಯತ್ನಿಸುತ್ತಿವೆ. ಒಟ್ಟಿನಲ್ಲಿ, ಜಗತ್ತಿನ ಪ್ರತಿಯೊಂದು ಪ್ರಮುಖ ಗುಪ್ತಚರ ಸಂಸ್ಥೆಯೂ ಕೊರೋನಾ ಲಸಿಕೆ ಸಂಶೋಧನೆಯಲ್ಲಿ ಯಾವ ದೇಶ ಎಷ್ಟುಪ್ರಗತಿ ಸಾಧಿಸಿದೆ ಎಂಬುದನ್ನು ತಿಳಿದುಕೊಳ್ಳಲು ಯತ್ನಿಸುತ್ತಿವೆ.
ಯಾರು, ಏನು ಮಾಡುತ್ತಿದ್ದಾರೆ?
- ಚೀನಾದ ಗುಪ್ತಚರ ದಳ ಅಮೆರಿಕವೂ ಸೇರಿದಂತೆ ಜಗತ್ತಿನ ಎಲ್ಲಾ ಪ್ರಮುಖ ರಾಷ್ಟ್ರಗಳ ಕೊರೋನಾ ಲಸಿಕೆ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳಿಂದಲೂ ಮಾಹಿತಿ ಕದಿಯಲು ಯತ್ನಿಸುತ್ತಿದೆ.
- ರಷ್ಯಾದ ಗುಪ್ತಚರ ದಳ ಎಸ್‌ವಿಆರ್ ಅಮೆರಿಕ, ಕೆನಡಾ ಮತ್ತು ಬ್ರಿಟನ್ನಿನ ಸಂಶೋಧನಾ ಸಂಸ್ಥೆಗಳ ಸೈಬರ್ ಜಾಲವನ್ನು ಹ್ಯಾಕ್ ಮಾಡಲು ಯತ್ನಿಸುತ್ತಿದೆ. ಇದನ್ನು ಬ್ರಿಟನ್ನಿನ ಗುಪ್ತಚರ ದಳ ಪತ್ತೆಹಚ್ಚಿದೆ.
- ಇರಾನ್‌ನ ಗುಪ್ತಚರ ದಳ ಅಮೆರಿಕ ಸೇರಿದಂತೆ ಮುಂಚೂಣಿ ವೈಜ್ಞಾನಿಕ ರಾಷ್ಟ್ರಗಳ ಸಂಶೋಧನಾ ಸಂಸ್ಥೆಗಳಿಂದ ಮಾಹಿತಿ ಕದಿಯಲು ಯತ್ನಿಸುತ್ತಿದೆ. ಇದನ್ನು ಅಮೆರಿಕ ಪತ್ತೆಹಚ್ಚಿದೆ.
- ಅಮೆರಿಕದ ಎಲ್ಲ ಶತ್ರು ರಾಷ್ಟ್ರಗಳೂ ಅಮೆರಿಕದ ಸಂಶೋಧನಾ ಸಂಸ್ಥೆಗಳಿಂದ ಮಾಹಿತಿ ಕದಿಯಲು ಯತ್ನಿಸುತ್ತಿವೆ.
- ಸಾಮಾನ್ಯವಾಗಿ ರಷ್ಯಾದ ಯುದ್ಧ ಟ್ಯಾಂಕ್‌ಗಳ ಚಲನವಲನ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಮೇಲೆ ಕಣ್ಣಿಡುವ ನ್ಯಾಟೋ ಗುಪ್ತಚರ ದಳವೀಗ ರಷ್ಯಾ ಯಾವ್ಯಾವ ದೇಶದಿಂದ ಕೊರೋನಾ ಲಸಿಕೆಯ ಮಾಹಿತಿ ಕದಿಯಲು ಯತ್ನಿಸುತ್ತಿದೆ ಎಂಬುದನ್ನು ಜಾಲಾಡುತ್ತಿದೆ.